ನಾವು ಮಕರ ಸಂಕ್ರಾಂತಿ ಎಂದು ಕರೆಯುವ ವಿಶೇಷ ಹಬ್ಬವನ್ನು ತಮಿಳಿನ ಜನರು ಪೊಂಗಲ್ ಎಂದು ಸಂಭ್ರಮಿಸಿ ಆಚರಣೆ ಮಾಡುತ್ತಾರೆ. ಒಟ್ಟಾರೆ ಈ ಸುಗ್ಗಿ ಹಬ್ಬವನ್ನು ಭಾರತದ ವಿವಿಧ ರಾಜ್ಯಗಳಲ್ಲಿ ಬೇರೆಬೇರೆ ಹೆಸರುಗಳು-ಸಂಪ್ರದಾಯದ ಮೂಲಕ ಆಚರಣೆ ಮಾಡಲಾಗುತ್ತದೆ. ಹಾಗೇ ಈ ಸಲ ಬ್ರಿಟನ್ನ ಪ್ರಧಾನಿ ಕಾರ್ಯಾಲಯದಲ್ಲೂ ಪೊಂಗಲ್ ಹಬ್ಬವನ್ನು ಅತ್ಯಂತ ವಿಶೇಷವಾಗಿ ಆಚರಿಸಲಾಗಿದೆ. ಅದರ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿವೆ.
ಪೊಂಗಲ್ ಪ್ರಯುಕ್ತ ಬ್ರಿಟನ್ ಪ್ರಧಾನಿ ಕಾರ್ಯಾಲಯದಲ್ಲಿ ಹಬ್ಬದ ಅಡುಗೆ ತಯಾರಿಸಲಾಗಿತ್ತು. ಪ್ರಧಾನಿ ಕಚೇರಿ, ಭದ್ರತಾ ಕಚೇರಿ ಸಿಬ್ಬಂದಿ ಸೇರಿ ಇನ್ನಿತರ ಪ್ರಮುಖ ಕಾರ್ಯಾಲಯಗಳ ಅಧಿಕಾರಿಗಳೆಲ್ಲ ಸಾಲಾಗಿ ಕುಳಿತು ಬಾಳೆ ಎಲೆಯಲ್ಲಿ ಸಿಹಿ ಊಟ ಮಾಡಿದ್ದಾರೆ. ಬಾಳೆಹಣ್ಣು, ಬೆಲ್ಲ, ಸಿಹಿ ಪೊಂಗಲ್, ಅನ್ನ, ಇಡ್ಲಿ, ಚಟ್ನಿ ..ಹೀಗೆ ತರಹೇವಾರಿ ತಿನಿಸುಗಳು ಇದ್ದವು. ಆದರೆ ಅಲ್ಲಿ ಕೆಲವರು ಎಡಗೈಯಲ್ಲಿ ಊಟ ಮಾಡುತ್ತಿದ್ದರು. ಅದರಲ್ಲಿ ಮಹಿಳೆ ಮತ್ತು ಇನ್ನೊಬ್ಬರು ಅರ್ಧರ್ಧ ಬಾಳೆಹಣ್ಣು ತೋರಿಸಿ ‘ಚಿಯರ್ಸ್’ ಎನ್ನುತ್ತಿದ್ದರು.
ಬ್ರಿಟನ್ನಲ್ಲಿ ಪ್ರಧಾನಿಯೇ ಭಾರತ ಮೂಲದ ರಿಷಿ ಸುನಕ್ ಆಗಿದ್ದಾರೆ. ಅವರು ಪ್ರಧಾನಿ ಆಗುವುದಕ್ಕೂ ಮುನ್ನ ಗೋಪೂಜೆ ನೆರವೇರಿಸಿದ ವಿಡಿಯೊಗಳೆಲ್ಲ ವೈರಲ್ ಆಗಿತ್ತು. ಇದೀಗ ಪ್ರಧಾನಿ ಕಚೇರಿಯಲ್ಲಿಯೇ ಪೊಂಗಲ್ ಆಚರಣೆ ಮಾಡಿದ್ದು ಭಾರತ ಮೂಲದ ಹಲವರಿಗೆ ಖುಷಿ ಕೊಟ್ಟಿದೆ. ವಿಡಿಯೊ 68 ಸಾವಿರಕ್ಕೂ ಹೆಚ್ಚು ವೀವ್ಸ್ ಪಡೆದಿದೆ. ‘ವಿದೇಶವೊಂದರ ಪ್ರಧಾನಿ ಕಚೇರಿಯಲ್ಲಿ ಇಂಥ ಆಚರಣೆ ನೋಡಲು ನಿಜಕ್ಕೂ ಖುಷಿಯಾಗುತ್ತದೆ’ ಎಂದು ಅನೇಕರು ಕಮೆಂಟ್ ಬರೆದಿದ್ದಾರೆ.
ಇದನ್ನೂ ಓದಿ: Viral Video | ಓಡೋಡಿ ಬಂದು ರಾಹುಲ್ ಗಾಂಧಿಯನ್ನು ಅಪ್ಪಿಕೊಂಡ ಯುವಕ; ಆತನನ್ನು ತಳ್ಳಿ ಆಚೆಗೆ ಬಿಟ್ಟ ಪಕ್ಷದ ಕಾರ್ಯಕರ್ತರು