ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಇಂದು ನೂತನ ಸಂಸತ್ ಭವನ (New Parliament Building) ಉದ್ಘಾಟನೆಗೊಳ್ಳಲಿದೆ. ಇಂದು ಬೆಳಗ್ಗೆ 7.30ರಿಂದ ಹವನ, ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊಂಡಿವೆ. ಈ ವಿಶೇಷ ಪೂಜೆಯಲ್ಲಿ ಪ್ರಧಾನಿ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಮತ್ತು ಇತರ ಗಣ್ಯರು ಪಾಲ್ಗೊಂಡಿದ್ದಾರೆ. ಮಹಾಗಣಪತಿ ಹೋಮ ನಡೆಯುತ್ತಿದ್ದು, ಪ್ರಧಾನಿ ಮೋದಿಯವರೇ ವಿಧಿ-ವಿಧಾನಗಳನ್ನು ನಡೆಸುತ್ತಿದ್ದಾರೆ. ಹಲವು ಸಂತರು, ಮಠಾಧೀಶರು ಪಾಲ್ಗೊಂಡಿದ್ದಾರೆ. ಈ ವೇಳೆ ಪ್ರಧಾನಿ ಮೋದಿಯವರು ಸೆಂಗೋಲ್ಗೆ ಶಿರಸಾಷ್ಟಾಂಗ ನಮಸ್ಕಾರ ಮಾಡಿದರು.
ಬೆಳಗ್ಗೆ 8.30ಕ್ಕೆ ಸಂಸತ್ ಭವನದಲ್ಲಿ ಸೆಂಗೋಲ್ ಸ್ಥಾಪನೆಯಾಗಲಿದೆ. 9.30ಕ್ಕೆ ಪ್ರಾರ್ಥನಾ ಸಭೆ ನಡೆಯಲಿದ್ದು, ಅದರಲ್ಲಿ ಹಲವು ವಿದ್ವಾಂಸರು, ಸಂತರು ಪಾಲ್ಗೊಳ್ಳುವರು. ಎರಡನೇ ಹಂತದ ಕಾರ್ಯಕ್ರಮ ಮಧ್ಯಾಹ್ನ 12ಗಂಟೆ ಹೊತ್ತಿಗೆ ಪ್ರಾರಂಭವಾಗಲಿದ್ದು, 1.10ಕ್ಕೆ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.
ಇನ್ನು ನೂತನ ಸಂಸತ್ ಭವನದ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಕಟ್ಟಡದ ಆವರಣದಲ್ಲಿಯೇ 70ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ದೆಹಲಿ ಪೊಲೀಸ್ ವಿಶೇಷ ಆಯುಕ್ತ ದೀಪೇಂದರ್ ಪಾಠಕ್ ತಿಳಿಸಿದ್ದಾರೆ. ‘ನೂತನ ಸಂಸತ್ ಭವನ ಉದ್ಘಾಟನೆ ಸಮಾರಂಭಕ್ಕೆ ತೊಂದರೆಯಾಗದಂತೆ ಎಲ್ಲ ಕ್ರಮ ವಹಿಸಲಾಗಿದೆ. ಬಿಗಿ ಭದ್ರತೆ ಕಲ್ಪಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: New Parliament: ಹೊಸ ಸಂಸತ್ ಭವನದ ವಿಡಿಯೊ ಹಂಚಿಕೊಂಡು, ವಿಶೇಷ ಮನವಿ ಮಾಡಿದ ಪ್ರಧಾನಿ ಮೋದಿ
ನೂತನ ಸಂಸತ್ ಭವನ ಉದ್ಘಾಟನೆ ವಿಷಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡುವಂತಿಲ್ಲ. ಇದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಡಬೇಕು ಎಂದು ಆಗ್ರಹಿಸಿರುವ ಸುಮಾರು 20 ಪ್ರತಿಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸಿವೆ. ಇದೇ ವಿಷಯವನ್ನು ಕೆಲವರು ಲಾಭ ಮಾಡಿಕೊಳ್ಳಬಹುದು. ನೂತನ ಸಂಸತ್ ಭವನದ ಆವರಣದ ಹೊರಗಿನ ಗೋಡೆಗಳ ಮೇಲೆಲ್ಲ ಪ್ರಧಾನಿ ವಿರೋಧಿ, ದೇಶ ವಿರೋಧಿ ಪೋಸ್ಟರ್ಗಳನ್ನು ಅಂಟಿಸುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾಹಿತಿ ದೆಹಲಿ ಪೊಲೀಸರಿಗೆ ಬಂದಿದ್ದು, ಅಂಥ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ.