Site icon Vistara News

ಬಿಜೆಪಿಯ ದೇವೇಂದ್ರ ಫಡ್ನವೀಸ್‌ ಮಹಾರಾಷ್ಟ್ರ ಸಿಎಂ ಹುದ್ದೆ ಬಿಟ್ಟುಕೊಟ್ಟಿದ್ದೇಕೆ?

Devendra Fadnavis

ಮುಂಬಯಿ: ಮಹಾರಾಷ್ಟ್ರ ರಾಜಕಾರಣ ಇವತ್ತೊಂದು ಬಿಗ್‌ ಟ್ವಿಸ್ಟ್‌ ಕಂಡಿದೆ. ಮುಂದಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರೇ ಎಂದು ಹೇಳಲಾಗುತ್ತಿತ್ತು. ಆದರೆ ಕೊನೇ ಕ್ಷಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಫಡ್ನವೀಸ್‌ ʼಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ನಾನಲ್ಲ, ಏಕನಾಥ ಶಿಂಧೆʼ ಎಂದು ಘೋಷಿಸಿದ್ದಾರೆ. ಅಷ್ಟೇ ಅಲ್ಲ, ನಾನು ಈ ನೂತನ ಸರ್ಕಾರದಲ್ಲಿ ಇರುವುದೂ ಇಲ್ಲವೆಂದುಬಿಟ್ಟಿದ್ದರು. ಆದರೆ ಬಿಜೆಪಿ ಹೈಕಮಾಂಡ್‌ ಒತ್ತಾಯಕ್ಕೆ ಮಣಿದು ಈಗ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹುದ್ದೆ ಸ್ವೀಕರಿಸಿದ್ದಾರೆ.

ಇದು ಮಹಾರಾಷ್ಟ್ರ ಜನತೆ, ರಾಜಕೀಯ ವಲಯಕ್ಕಷ್ಟೇ ಅಲ್ಲ, ಇಡೀ ದೇಶಕ್ಕೇ ಅಚ್ಚರಿ ಮೂಡಿಸಿದ ಬೆಳವಣಿಗೆ. ಅಷ್ಟಕ್ಕೂ ದೇವೇಂದ್ರ ಫಡ್ನವೀಸ್‌ ಹೀಗೆ ಮಾಡಿದ್ಯಾಕೆ? ಬಿಜೆಪಿಯ ಈ ನಡೆಯ ಹಿಂದೆ ಇರುವ ಕಾರ್ಯತಂತ್ರವೇನು ಎಂಬಿತ್ಯಾದಿ ಪ್ರಶ್ನೆಗಳೂ ಹುಟ್ಟಿಕೊಂಡಿವೆ. ಹೀಗೆ ಕೊನೇಕ್ಷಣದಲ್ಲಿ ಬಿಜೆಪಿ ಯೂ ಟರ್ನ್‌ ಹೊಡೆಯಲು ಈ ಕಾರಣಗಳು ಇರಬಹುದೇನೊ…

ಕೆಟ್ಟ ನೆನಪು!
2019ರಲ್ಲಿ ಒಟ್ಟಾಗಿಯೇ ವಿಧಾನಸಭೆ ಚುನಾವಣೆ ಎದುರಿಸಿದ್ದ ಬಿಜೆಪಿ-ಶಿವಸೇನೆ ಪಕ್ಷಗಳ ನಡುವೆ ಫಲಿತಾಂಶ ಬಂದ ನಂತರ ಬಿರುಕು ಮೂಡಿತ್ತು. 2014-2019ರವರೆಗೆ ಪೂರ್ಣಾವಧಿಗೆ ಬಿಜೆಪಿಯ ದೇವೇಂದ್ರ ಫಡ್ನವೀಸ್‌ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಮುಂದಿನ ಸಲವೂ ಹೀಗಾಗಬಾರದು. ಮುಖ್ಯಮಂತ್ರಿ ಹುದ್ದೆ 50:50 ಹಂಚಿಕೆಯಾಗಬೇಕು ಎಂದು ಶಿವಸೇನೆ ಕ್ಯಾತೆ ತೆಗೆದು, ಅದೇ ದೊಡ್ಡ ಮನಸ್ತಾಪವಾಗಿ ಶಿವಸೇನೆಯು ಬಿಜೆಪಿ ಮೈತ್ರಿಯಿಂದ ಹೊರಬಿತ್ತು. ಅಷ್ಟಾದರೂ ದೇವೇಂದ್ರ ಫಡ್ನವೀಸ್‌ ರಾತ್ರೋರಾತ್ರಿ ಎನ್‌ಸಿಪಿಯ ಅಜಿತ್‌ ಪವಾರ್‌ ಜತೆ ಮೈತ್ರಿ ಮಾಡಿಕೊಂಡು ನವೆಂಬರ್‌ 23ರ ಮುಂಜಾನೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಆದರೆ ಅಜಿತ್‌ ಪವಾರ್‌ ಇವರಿಗೆ ಬೆಂಬಲ ಕೊಡುತ್ತಿದ್ದಂತೆ ಅವರ ಪಕ್ಷವೇ ತಿರುಗಿಬಿದ್ದಿತ್ತು. ಹೀಗಾಗಿ ಅಜಿತ್‌ ಪವಾರ್‌ ತಮ್ಮ ಬೆಂಬಲ ವಾಪಸ್‌ ಪಡೆದರು.

ನವೆಂಬರ್‌ 28ರಂದು ಫಡ್ನವೀಸ್‌ ರಾಜೀನಾಮೆ ಕೊಟ್ಟರು. ಕೇವಲ ಐದು ದಿನಗಳ ಅವಧಿಗೆ ಮುಖ್ಯಮಂತ್ರಿಯಾಗಿ, ನಗೆಪಾಟಲಿಗೀಡಾಗಿದ್ದರು. ಇದು ಫಡ್ನವೀಸ್‌ಗೆ ಅವಮಾನ ಆದ ಸನ್ನಿವೇಶ. ಆ ಕೆಟ್ಟ ನೆನಪಿನ್ನೂ ಮಾಸದೆ, ಮತ್ತೆಲ್ಲಿ ಶಿವಸೇನೆಯ ಬಂಡಾಯ ನಾಯಕರೂ ಕೈಕೊಟ್ಟುಬಿಡುತ್ತಾರೋ, ಇಲ್ಲಿಂದಲೂ ಬಂಡಾಯವೆದ್ದು ಬೆಂಬಲ ವಾಪಸ್‌ ಪಡೆದುಬಿಡುತ್ತಾರೋ ಎಂಬ ಅಂಜಿಕೆಯಿಂದಲೇ ಈ ಸಲ ಫಡ್ನವೀಸ್‌ ಮುಖ್ಯಮಂತ್ರಿ ಹುದ್ದೆ ಬೇಡ ಎನ್ನುತ್ತಿರಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ: Maha politics | ಏಕನಾಥ್‌ ಶಿಂಧೆ; ಅಂದು ಆಟೋ ಡ್ರೈವರ್‌, ಇಂದು ಮಹಾ ಸರ್ಕಾರದ ಚಾಲಕ!

ಪಕ್ಷದ ಮೇಲಿನ ಆರೋಪ ಸುಳ್ಳು ಮಾಡಲು
ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್‌ ಅಘಾಡಿ ಸರ್ಕಾರ ಅಸ್ಥಿರಗೊಂಡು, ಶಿವಸೇನೆ ಶಾಸಕರು ಬಂಡಾಯ ಏಳಲು ಬಿಜೆಪಿಯೇ ಕಾರಣ. ಬರುವ ವಿಧಾನಸಭೆ ಚುನಾವಣೆಗೂ ಪೂರ್ವ ಅಲ್ಲಿ ಸರ್ಕಾರ ರಚನೆ ಮಾಡಲು ಬಿಜೆಪಿ ಆಪರೇಷನ್‌ ಕಮಲಕ್ಕೆ ಕೈಹಾಕಿದೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿದ್ದವು. ಅದರಲ್ಲೂ ಉದ್ಧವ್‌ ಠಾಕ್ರೆ ಬಣವಂತೂ ಪದೇಪದೆ ಅದನ್ನೇ ಹೇಳುತ್ತಿತ್ತು. ಉದ್ಧವ್‌ ಠಾಕ್ರೆ ತಮ್ಮ ರಾಜೀನಾಮೆ ಘೋಷಣೆ ಮಾಡುವಾಗಲೂ ಬಿಜೆಪಿ ಮೇಲೆ ಆರೋಪ ಮಾಡಿದ್ದರು. ʼಬಿಜೆಪಿ ನನಗೆ ಬೆನ್ನ ಹಿಂದಿನಿಂದ ಚೂರಿ ಹಾಕಿತು. ಬಾಳಾ ಸಾಹೇಬ್‌ ಠಾಕ್ರೆ ಪುತ್ರ ಇಂದು ತಲೆ ತಗ್ಗಿಸುವಂತೆ ಮಾಡಿತುʼ ಎಂದು ಹೇಳಿದ್ದರು. ಉದ್ಧವ್‌ ಠಾಕ್ರೆ ಈ ಮಾತುಗಳನ್ನೆಲ್ಲ ತುಂಬ ಭಾವನಾತ್ಮಕವಾಗಿ, ಜನರಲ್ಲಿ ಅನುಕಂಪ ಮೂಡುವಂತೆ ಆಡಿದ್ದರು. ಶಿವಸೇನೆ ಪರ ಈ ಅನುಕಂಪ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ ಸಂಕಷ್ಟ ತರುವ ಎಲ್ಲ ಸಾಧ್ಯತೆಯೂ ದಟ್ಟವಾಗಿದೆ. ಹೀಗಾಗಿ ತಮ್ಮ ಮೇಲಿನ ಆರೋಪ ಸುಳ್ಳು, ಉದ್ಧವ್‌ ಠಾಕ್ರೆ ಹೇಳಿದಂತೆ ತಾವೇನೂ ಮಾಡಿಲ್ಲ. ಸರ್ಕಾರ ಪತನದಲ್ಲಿ ತಮ್ಮ ಪಾತ್ರವೇನೂ ಇಲ್ಲ ಎಂದು ತೋರಿಸಿಕೊಳ್ಳಲು ದೇವೇಂದ್ರ ಫಡ್ನವೀಸ್‌ ಸಿಎಂ ಹುದ್ದೆ ಬೇಡ ಎಂದು ಹೇಳಿರುವ ಸಾಧ್ಯತೆ ಇದೆ.

ಬಾಳಾ ಸಾಹೇಬ್‌ ಠಾಕ್ರೆ ಬಲ ಉಳಿಸಿಕೊಳ್ಳಲು
ತಾವು ಶಿವಸೇನೆಯೊಂದಿಗೆ ಮೈತ್ರಿ ಕಳೆದುಕೊಂಡಿದ್ದರೂ ಅದರ ಸಂಸ್ಥಾಪಕ, ಹಿಂದುತ್ವವಾದಿ ಬಾಳಾ ಸಾಹೇಬ್‌ ಠಾಕ್ರೆ ಬಗ್ಗೆ ನಮಗಿನ್ನೂ ಗೌರವ ಇದೆ ಎಂದು ತೋರಿಸಿಕೊಳ್ಳುವ ಪ್ರಯತ್ನವೂ ಬಿಜೆಪಿಯದ್ದಿರಬಹುದು. ಯಾಕೆಂದರೆ, ಈಗ ಮಹಾರಾಷ್ಟ್ರದ ಸನ್ನಿವೇಶ ಹೇಗಿದೆಯೆಂದರೆ, ಶಿವಸೇನೆ ಒಡೆಯಲು ಬಿಜೆಪಿಯೇ ಕಾರಣ. ಅದು ತನ್ನ ರಾಜಕೀಯ ಲಾಭಕ್ಕಾಗಿ ಬಾಳಾ ಸಾಹೇಬ್‌ ಕಟ್ಟಿದ ಪಕ್ಷವನ್ನೇ ಒಡೆಯಿತು ಎಂದು ಆಪಾದನೆ ಇದೆ. ಇದು ಮುಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮರಾಠಿಗರ ಮತ ಕಳೆದುಕೊಳ್ಳಲು ಸಾಕು! ಇಂದು ದೇವೇಂದ್ರ ಫಡ್ನವೀಸ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗಲೂ ಬಾಳಾ ಸಾಹೇಬ್‌ ಠಾಕ್ರೆ ಹೆಸರನ್ನು ಎರಡು-ಮೂರು ಬಾರಿ ಉಲ್ಲೇಖ ಮಾಡಿದ್ದಾರೆ. ʼಬಾಳಾ ಸಾಹೇಬ್‌ ಠಾಕ್ರೆ ಕಂಡ ಕನಸುಗಳಿನ್ನೂ ಪೂರ್ತಿಯಾಗಿಲ್ಲ. ಅದು ಪೂರ್ಣವಾಗಲು ಶಿವಸೇನೆಯ ಏಕನಾಥ ಶಿಂಧೆ ಸಿಎಂ ಆಗುವುದೇ ಸೂಕ್ತʼ ಎಂದೂ ಹೇಳಿದ್ದರು. ಮಹಾರಾಷ್ಟ್ರ ರಾಜಕಾರಣದಲ್ಲಿ ಬಾಳಾ ಸಾಹೇಬ್‌ ಠಾಕ್ರೆ ಎಂಬ ಹೆಸರಿಗೆ ಭಯಂಕರ ಶಕ್ತಿ ಇದೆ. ಆ ಬಲವನ್ನು ತನ್ನ ಬಳಿ ಉಳಿಸಿಕೊಳ್ಳಲು ಬಿಜೆಪಿ ಸಿಎಂ ಹುದ್ದೆ ತ್ಯಾಗ ಮಾಡಿದೆ ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ: ಮಹಾ ಅಚ್ಚರಿ: ಮುಖ್ಯಮಂತ್ರಿ ಪಟ್ಟ ಏಕನಾಥ್‌ ಶಿಂಧೆಗೆ, ಸರ್ಕಾರದಲ್ಲಿ ನಾನಿರೋದಿಲ್ಲವೆಂದ ಫಡ್ನವೀಸ್‌

Exit mobile version