Site icon Vistara News

ಸಿಎಂ ಕೆಸಿಆರ್ ಪುತ್ರಿ ಕವಿತಾ ಇಡಿ ವಿಚಾರಣೆ ಇಂದು; ಹೈದರಾಬಾದ್​​ನಲ್ಲಿ ಬಿ.ಎಲ್.ಸಂತೋಷ್ ಫೋಟೋ ಇರುವ ವಾಂಟೆಡ್​ ಪೋಸ್ಟರ್

Posters with BL Santosh Photo Called As wanted criminal seen at Hyderabad

ನವದೆಹಲಿ: ದೆಹಲಿ ಅಬಕಾರಿ ನೀತಿ ಅಕ್ರಮ ಹಗರಣಕ್ಕೆ (Delhi Excise Policy)ಸಂಬಂಧಪಟ್ಟಂತೆ ಇಂದು ತೆಲಂಗಾಣ ಮುಖ್ಯಮಂತ್ರಿ, ಭಾರತ್​ ರಾಷ್ಟ್ರ ಸಮಿತಿ ಪಕ್ಷದ ನಾಯಕ ಕೆ.ಚಂದ್ರಶೇಖರ್​ ಪುತ್ರಿ ಕೆ. ಕವಿತಾ ಅವರು ಇ.ಡಿ.ವಿಚಾರಣೆಗೆ (K Kavitha ED Interrogation) ಒಳಪಡಲಿದ್ದಾರೆ. ಇ.ಡಿ.ವಿಚಾರಣೆ ಎದುರಿಸಲು ಕೆ.ಕವಿತಾ ಅವರು ದೆಹಲಿಗೆ ಹೋಗಿದ್ದಾರೆ.

ಇತ್ತ ಹೈದರಾಬಾದ್​ನಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್​ ಅವರನ್ನು ವಾಂಟೆಡ್​ ಕ್ರಿಮಿನಲ್​ ಎಂಬಂತೆ ಬಿಂಬಿಸಿ ಪೋಸ್ಟರ್​ ಹಾಕಲಾಗಿದೆ. ಅಂದರೆ ‘ವಾಂಟೆಡ್​ ಎಂದು ದೊಡ್ಡದಾಗಿ ಬರೆದು, ಅದರ ಕೆಳಗಡೆ ಬಿ.ಎಲ್.ಸಂತೋಷ್ ಫೋಟೋ ಹಾಕಲಾಗಿದೆ. ಹಾಗೇ, ‘ಕುದುರೆ ವ್ಯಾಪಾರದಲ್ಲಿ ಪರಿಣತರು’ ಎಂದು ಒಂದು ಲೈನ್​ ಬರೆದು, ಹುಡುಕಿಕೊಟ್ಟವರಿಗೆ, ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ 15 ಲಕ್ಷ ರೂಪಾಯಿ ನೀಡಲಾಗುವುದು ಎಂದು ಬರೆಯಲಾಗಿದೆ. ಇಂಗ್ಲಿಷ್​ ಮತ್ತು ತೆಲುಗು ಭಾಷೆಯಲ್ಲಿ ಪೋಸ್ಟರ್​ ಮಾಡಿಸಲಾಗಿದ್ದು, ಹೈದರಾಬಾದ್​ನ ಎರಡು ಕಡೆಗಳಲ್ಲಿ ಹಾಕಲಾಗಿದೆ. ಇನ್ನೊಂದೆಡೆ ದೆಹಲಿಯಲ್ಲಿ ಬಿಆರ್​ಎಸ್​ ಪಕ್ಷದ ಕಾರ್ಯಕರ್ತರು, ಸಚಿವರು, ಪ್ರಮುಖ ನಾಯಕರೆಲ್ಲ ಸೇರಿ ದೊಡ್ಡಮಟ್ಟದಲ್ಲಿ ತಮ್ಮ ಬಲಪ್ರದರ್ಶನ ಮಾಡುವ ಮೂಲಕ, ಕೆ. ಕವಿತಾರಿಗೆ ಬೆಂಬಲ ಸೂಚಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹೀಗಾಗಿ ರಾಷ್ಟ್ರರಾಜಧಾನಿಯಲ್ಲಿ, ಇ.ಡಿ. ಕಚೇರಿ ಸಮೀಪವೆಲ್ಲ ಪೊಲೀಸ್​ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ದೆಹಲಿ ಅಬಕಾರಿ ನೀತಿ ಅಕ್ರಮದಲ್ಲಿ ಕೆ.ಕವಿತಾ ಪಾಲೂ ಇದೆ ಎಂದು ಇ.ಡಿ. ಚಾರ್ಜ್​ಶೀಟ್​ ಸಲ್ಲಿಸಿದೆ. ಮಾರ್ಚ್​ 11ರಂದು ಇ.ಡಿ. ಅವರನ್ನು ಕೆಲವು ತಾಸುಗಳ ಕಾಲ ವಿಚಾರಣೆಗೆ ಒಳಪಡಿಸಿತ್ತು. ಇಂದು ಮತ್ತೆ ವಿಚಾರಣೆಗೆ ಕರೆದಿದೆ. ಈ ಹಿಂದೆ ಸಿಬಿಐ ಕೂಡ ಕವಿತಾರನ್ನು ವಿಚಾರಣೆ ನಡೆಸಿತ್ತು. ಇ.ಡಿ. ವಿಚಾರಣೆಗೆ ತಡೆ ನೀಡಬೇಕು ಎಂದು ಈಗಾಗಲೇ ಕೆ.ಕವಿತಾ ಅವರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದಾರೆ. ತನ್ನ ಫೋನ್​ ಜಪ್ತಿ ಮಾಡಿದ್ದರ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಮಾರ್ಚ್​ 24ರಂದು, ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್​ ಮತ್ತು ನ್ಯಾ.ಪಿ.ಎಸ್​.ನರಸಿಂಹ ಅವರು ಕೈಗೆತ್ತಿಕೊಳ್ಳಲಿದ್ದಾರೆ.

Exit mobile version