ರಾಷ್ಟ್ರಪತಿ-ಪ್ರಧಾನಮಂತ್ರಿ-ಸಚಿವರು ಮತ್ತು ಇತರ ವಿಐಪಿಗಳು ಭಾಗವಹಿಸುವ ಕಾರ್ಯಕ್ರಮದಲ್ಲಿ ಏನೂ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ. ವೇದಿಕೆ, ಕುರ್ಚಿ, ಮೈಕ್-ವಿದ್ಯುತ್ ಹೀಗೆ ಎಲ್ಲವೂ ಸರಿಯಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಅದರಲ್ಲೂ ರಾಷ್ಟ್ರಪತಿ/ಪ್ರಧಾನಮಂತ್ರಿ ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲಿ ತುಸು ಜಾಸ್ತಿಯೇ ಕಟ್ಟೆಚ್ಚರ ಇರುತ್ತದೆ. ಆದರೆ ಒಡಿಶಾ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರ ಕಾರ್ಯಕ್ರಮವೊಂದರಲ್ಲಿ ಎಡವಟ್ಟಾಗಿದೆ. ಇಲ್ಲಿನ ಮಯೂರ್ಬಂಜ್ನ ಬರಿಪಾಡಾದಲ್ಲಿರುವ ಮಹಾರಾಜಾ ಶ್ರೀರಾಮ್ ಚಂದ್ರ ಭಂಜಾ ದೇವ್ ವಿಶ್ವ ವಿದ್ಯಾನಿಲಯದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡುತ್ತಿದ್ದಾಗಲೇ ಕರೆಂಟ್ ಹೋಗಿದೆ.
ಬೆಳಗ್ಗೆ ಹೊತ್ತಲ್ಲಿ ಸಮಾರಂಭ ನಡೆಯುತ್ತಿತ್ತು. ದ್ರೌಪದಿ ಮುರ್ಮು ಅವರು ಭಾಷಣ ಮಾಡುತ್ತಿದ್ದರು. ಆದರೆ ಏಕಾಏಕಿ ವಿದ್ಯುತ್ ಕಡಿತಗೊಂಡು ಯೂನಿವರ್ಸಿಟಿಯ ಅಡಿಟೋರಿಯಮ್ನಲ್ಲಿ ಕತ್ತಲಾವರಿಸಿತು. ಸುಮಾರು 9 ನಿಮಿಷಗಳ ಕಾಲ ಇದೇ ಸ್ಥಿತಿಯಿತ್ತು. ಕರೆಂಟ್ ಹೋದ ತಕ್ಷಣ ದ್ರೌಪದಿ ಮುರ್ಮು ಅವರೇನೂ ಭಾಷಣ ನಿಲ್ಲಿಸಲಿಲ್ಲ. ಕತ್ತಲಲ್ಲೇ ತಮ್ಮ ಭಾಷಣ ಮುಂದುವರಿಸಿದರು. ಆ ಅಡಿಟೋರಿಯಂಗೆ ಹೊರಗಿನಿಂದ ಸ್ವಲ್ಪ ಬೆಳಕು ಬರುತ್ತಿತ್ತು. ಆದರೆ ಕರೆಂಟ್ ಹೋಗಿದ್ದಕ್ಕೆ ದ್ರೌಪದಿ ಮುರ್ಮು ಸ್ವಲ್ಪ ಕಿರಿಕಿರಿಗೊಂಡರೂ, ಅತ್ಯಂತ ಸೌಮ್ಯವಾಗಿಯೇ ಅದನ್ನು ಹೊರಹಾಕಿದರು. ಈ ವಿಶ್ವವಿದ್ಯಾನಿಲಯವು ಅದೆಷ್ಟು ಸೌಂದರ್ಯ ಹೊಂದಿದೆಯೊ, ಅಷ್ಟೇ ಕತ್ತಲಲ್ಲಿ ಇದೆ’ ಎಂದು ಹೇಳಿದರು.
ಇದನ್ನೂ ಓದಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಪಾದ ಮುಟ್ಟಿ ನಮಿಸಲು ಮುಂದಾಗಿದ್ದ ಸರ್ಕಾರಿ ಎಂಜಿನಿಯರ್ ಅಮಾನತು
ಹೀಗೆ ದ್ರೌಪದಿ ಮುರ್ಮು ಕಾರ್ಯಕ್ರಮದ ಮಧ್ಯೆ ಕರೆಂಟ್ ಹೋಗಿದ್ದನ್ನು ಒಡಿಶಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ದೃಢಪಡಿಸಿದೆ. ಬೆಳಗ್ಗೆ 11.56ರಿಂದ 12.05ರವರೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಅಡಿಟೋರಿಯಂ ಸಂಪೂರ್ಣವಾಗಿ ಕತ್ತಲಾಗಿತ್ತು ಎಂದು ಹೇಳಿದೆ. ಹಾಗೇ, ಈ ಬಗ್ಗೆ ವಿಷಾದವನ್ನೂ ವ್ಯಕ್ತಪಡಿಸಿದೆ. ಹೀಗೆ ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಮಧ್ಯೆ ಕರೆಂಟ್ ಹೋಗುವುದು ಭದ್ರತೆ ದೃಷ್ಟಿಯಿಂದಲೂ ಪ್ರಮಾದವಾಗಿದೆ. ಒಡಿಶಾದ ಹಲವು ರಾಜಕಾರಣಿಗಳು, ನಿವೃತ್ತ ಭದ್ರತಾ ಸಿಬ್ಬಂದಿ ಇದನ್ನು ಟೀಕಿಸುತ್ತಿದ್ದಾರೆ.