ನವ ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಸಹೋದರ ಪ್ರಲ್ಹಾದ್ ಮೋದಿ ದೆಹಲಿಯ ಜಂತರ್ ಮಂತರ್ನಲ್ಲಿ ಧರಣಿ ಕುಳಿತಿದ್ದಾರೆ. ಅಖಿಲ ಭಾರತೀಯ ನ್ಯಾಯಬೆಲೆ ಅಂಗಡಿ ವಿತರಕರ ಒಕ್ಕೂಟ (AIFPSDF)ದ ಉಪಾಧ್ಯಕ್ಷರಾಗಿರುವ ಅವರು, ಇತರ ಸದಸ್ಯರ ಜತೆ ಪ್ರತಿಭಟನೆ ಪ್ರಾರಂಭ ಮಾಡಿದ್ದಾರೆ. ಅಖಿಲ ಭಾರತೀಯ ನ್ಯಾಯಬೆಲೆ ಅಂಗಡಿ ವಿತರಕರ ಒಕ್ಕೂಟದ ಹಲವು ಬೇಡಿಕೆಗಳ ಪೂರೈಕೆ ಬಹುಕಾಲದಿಂದ ಬಾಕಿ ಇದೆ. ಅವುಗಳನ್ನು ನೆರವೇರಿಸಬೇಕು ಎಂದು ಇವರೆಲ್ಲ ಆಗ್ರಹಿಸುತ್ತಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಲ್ಹಾದ್ ಮೋದಿ, ‘ನ್ಯಾಯಬೆಲೆ ಅಂಗಡಿಗಳ ವಿತರಕರ ಒಕ್ಕೂಟದ ಬೇಡಿಕೆಗಳು ಅನೇಕ ಇವೆ. ಹಲವು ವರ್ಷಗಳಿಂದಲೂ ನಾವು ಕಾಯುತ್ತಲೇ ಇದ್ದೇವೆ. ನಾವೆಲ್ಲ ಉಳಿಯಬೇಕು ಎಂದರೆ ನಮ್ಮ ಬೇಡಿಕೆಗಳು ನೆರವೇರಲೇಬೇಕು. ಹೀಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಈ ಬಗ್ಗೆ ಜ್ಞಾಪನಾ ಪತ್ರ ನೀಡಲು ನಿರ್ಧರಿಸಿದ್ದೇವೆ. ಈಗ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದೆ. ನಮಗೂ ಅಂಗಡಿಗಳನ್ನು ನಡೆಸಲು ವಿಪರೀತ ಖರ್ಚಾಗುತ್ತಿದೆ. ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದೇವೆ. ಹಾಗಾಗಿ ಕೇಂದ್ರ ಸರ್ಕಾರ ನಮ್ಮ ಸಹಾಯಕ್ಕೆ ನಿಲ್ಲಬೇಕು’ ಎಂದು ಪ್ರಲ್ಹಾದ್ ಮೋದಿ ಆಗ್ರಹಿಸಿದ್ದಾರೆ. ಹಾಗೇ, ತಾವು ಬುಧವಾರ ಲೋಕಸಭಾ ಸ್ಪೀಕರ್ ಓಂಬಿರ್ಲಾರನ್ನು ಭೇಟಿಯಾಗುವ ಯೋಜನೆ ರೂಪಿಸಿಕೊಂಡಿದ್ದಾಗಿಯೂ ಹೇಳಿಕೊಂಡಿದ್ದಾರೆ.
ಅಖಿಲ ಭಾರತೀಯ ನ್ಯಾಯಬೆಲೆ ಅಂಗಡಿ ವಿತರಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿಸ್ವಾಂಬರ್ ಬಸು ಮಾತನಾಡಿ, ‘ನಾವು ಪ್ರಧಾನಿಗೆ ಸಲ್ಲಿಸಲಿರುವ ಜ್ಞಾಪನಾ ಪತ್ರದಲ್ಲಿ ಒಂಬತ್ತು ಬೇಡಿಕೆಗಳು ಇರಲಿವೆ. ಹಾಗೇ, ನಾವು ಕಾರ್ಯಕಾರಿ ಸಭೆಯನ್ನೂ ನಡೆಸಲಿದ್ದೇವೆ’ ಎಂದು ತಿಳಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿರುವ ಮಾದರಿಯಲ್ಲೇ ದೇಶಾದ್ಯಂತ ಪಡಿತರವನ್ನು ಉಚಿತವಾಗಿ ವಿತರಿಸಬೇಕು ಎಂಬ ಬೇಡಿಕೆಯನ್ನೂ ಈ ಒಕ್ಕೂಟ ಇಟ್ಟಿದೆ.
ಇದನ್ನೂ ಓದಿ: Multispeciality hospital ಕೊಡ್ಸಿ ಸ್ವಾಮೀ, ಕಾರವಾರದಿಂದ ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಚಳವಳಿ