ನವದೆಹಲಿ: ಇಂದು(ಜನವರಿ 9) ಪ್ರವಾಸಿ ಭಾರತೀಯ ದಿನ(Pravasi Bharatiya Divas). ಈ ದಿನದ ವಿಶೇಷ ಕಾರ್ಯಕ್ರಮ ಮಧ್ಯಪ್ರದೇಶದ ಇಂಧೋರ್‌ನಲ್ಲಿ ಜರುಗಲಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸತತ 17 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ಕಾರ್ಯಕ್ರಮದ ಹಿನ್ನೆಲೆ ಏನು? ಮಹತ್ವವೇನು? ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.
ವಿದೇಶಗಳಲ್ಲಿರುವ ಭಾರತೀಯರಿಗೆಂದೇ ವಿಶೇಷವಾಗಿ ಈ ಕಾರ್ಯಕ್ರಮ ನಡೆಸಲಾಗುತ್ತದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು 1915ರ ಜನವರಿ 9ರಂದು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ್ದರು. ನಂತರ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟದ್ದು ಎಲ್ಲರಿಗೂ ತಿಳಿದಿರುವಂತದ್ದು. ಆ ಸ್ವಾತಂತ್ರ್ಯವೀರ ಭಾರತಕ್ಕೆ ಮರಳಿದ್ದ ದಿನದ ನೆನಪಿನಲ್ಲಿ ಪ್ರತಿ ವರ್ಷ ಜ.9ರಂದೇ ಪ್ರವಾಸಿ ಭಾರತೀಯ ದಿನವನ್ನು ಆಚರಿಸಲಾಗುತ್ತಿದೆ. 2003ರಿಂದ ಈ ಆಚರಣೆ ಆರಂಭವಾಗಿದ್ದು, ಈ ವರ್ಷ 17ನೇ ಪ್ರವಾಸಿ ಭಾರತೀಯ ದಿನಾಚರಣೆ ನಡೆಯುತ್ತಿದೆ. ಭಾರತೀಯ ವಿದೇಶಾಂಗ ಸಚಿವಾಲಯವು ಭಾರತೀಯ ಕೈಗಾರಿಕೆಗಳ ಒಕ್ಕೂಟ ಹಾಗೂ ಇತರೆ ಸಂಘ-ಸಂಸ್ಥೆಗಳ ಜತೆಯಲ್ಲಿ ಈ ಕಾರ್ಯಕ್ರಮವನ್ನು ನಡೆಸುತ್ತ ಬಂದಿದೆ.
ಏನಿದರ ವಿಶೇಷತೆ?
ವಿದೇಶಗಳಲ್ಲಿರುವ ಭಾರತೀಯ ಮೂಲದವರು ಹಾಗೂ ಅನಿವಾಸಿ ಭಾರತೀಯರನ್ನು(ಎನ್‌ಆರ್‌ಐ) ಗುರಿಯಾಗಿಸಿಕೊಂಡೇ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಅವರಿಗೆ ಭಾರತದ ಸರ್ಕಾರದೊಂದಿಗೆ ಸಂಪರ್ಕ ಕಲ್ಪಿಸಿಕೊಳ್ಳುವುದಕ್ಕೆ, ಭಾರತದ ಬಗ್ಗೆ ಅವರಿಗಿರುವ ಅನುಭವ ಹಾಗೂ ಕಲ್ಪನೆಗಳನ್ನು ಹಂಚಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಲಾಗುವುದು. ಭಾರತ ಸರ್ಕಾರ ಹಾಗೂ ಅನಿವಾಸಿ ಭಾರತೀಯ ಸಮುದಾಯದೊಂದಿಗೆ ಒಪ್ಪಂದಗಳನ್ನು ಗಟ್ಟಿ ಮಾಡಿಕೊಳ್ಳುವುದಕ್ಕೆ, ಅವರ ಸಾಧನೆಗಳನ್ನು ಹಂಚಿಕೊಳ್ಳುವುದಕ್ಕೆ ಮುಕ್ತ ಅವಕಾಶವಿರುತ್ತದೆ.
ಇದನ್ನೂ ಓದಿ: ವಿಸ್ತಾರ Explainer | ಮೋದಿ ಅವಧಿಯಲ್ಲಿ ಅಧಿಕಾರಶಾಹಿ ವ್ಯವಸ್ಥೆ ಕ್ರಾಂತಿಕಾರಕವಾಗಿ ಬದಲಾಗಿದ್ದು ಹೇಗೆ? ಏನಿದು 360 ಡಿಗ್ರಿ ಪ್ರಯೋಗ?
ಆರ್ಥಿಕತೆಗೆ ಉತ್ತೇಜನ
ಈ ಪ್ರವಾಸಿ ಭಾರತೀಯ ದಿನವು ಭಾರತದ ಆರ್ಥಿಕತೆಗೆ ಉತ್ತೇಜನಕ್ಕೆ ಸಹಾಯ ಮಾಡಿದೆ. ದೇಶದೊಳಗೆ ವಿದೇಶಿ ಹೂಡಿಕೆಯನ್ನು ಸೆಳೆಯುವುದಕ್ಕೆ ಸಹಕರಿಸಿದೆ. ಇಲ್ಲಿನ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುವುದಕ್ಕೂ ಹಲವು ಮಾರ್ಗಗಳನ್ನು ಸೃಷ್ಟಿಸಿಕೊಟ್ಟಿದೆ. ವಿದೇಶದಲ್ಲಿರುವ ಭಾರತದ ಕೌಶಲ್ಯಯುತ ಉದ್ಯೋಗಿಗಳನ್ನು ಮತ್ತು ಉದ್ಯಮಿಗಳನ್ನು ಭಾರತಕ್ಕೆ ಮರಳಿ ಕರೆತರುವ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯೂ ಆಗಿದೆ. ವಿದೇಶಗಳಲ್ಲಿರುವ ಹಲವಾರು ತಂತ್ರಜ್ಞಾನಗಳನ್ನು ಭಾರತಕ್ಕೆ ಪರಿಚಯಿಸುವಲ್ಲೂ ಈ ದಿನದ ಕೊಡುಗೆಯಿದೆ. ಈ ಎಲ್ಲದರಿಂದಾಗಿ ಭಾರತೀಯ ಆರ್ಥಿಕತೆಗೆ ಪುಷ್ಠಿ ನೀಡಿದಂತಾಗಿದೆ.
ಸರ್ಕಾರಕ್ಕಿದೆ ಲಾಭ
ಈ ಕಾರ್ಯಕ್ರಮವು ಭಾರತೀಯ ಆರ್ಥಿಕತೆಗೆ ಉತ್ತೇಜನ ನೀಡುವುದರ ಜತೆಯಲ್ಲಿ ಜಾಗತಿಕ ವೇದಿಕೆಯಲ್ಲಿ ಭಾರತಕ್ಕೆ ತನ್ನ ಶಕ್ತಿಯನ್ನು ತೋರಿಸುವುದಕ್ಕೆ ಸಹಕಾರಿಯಾಗಿದೆ. ವಿಶ್ವಾದ್ಯಂತ ಇರುವ ಭಾರತೀಯ ಸಮುದಾಯದ ಎದುರು ತನ್ನ ಸಾಧನೆಗಳನ್ನು ತಿಳಿಸಿಕೊಡುವುದಕ್ಕೆ ಭಾರತ ಸರ್ಕಾರಕ್ಕೆ ಉತ್ತಮ ವೇದಿಕೆಯಾಗಿದೆ. ಹಾಗೆಯೇ ಆ ಸಮುದಾಯವು ಭಾರತದಲ್ಲಿ ಹೂಡಿಕೆ ಮಾಡುವುದಕ್ಕೆ, ಕೆಲಸ ಹಾಗೂ ವಿದ್ಯಾಭ್ಯಾಸ ಮಾಡುವುದಕ್ಕೆ ಇರುವ ಅವಕಾಶವನ್ನು ತಿಳಿಸಿಕೊಡುತ್ತದೆ.
ಇದನ್ನೂ ಓದಿದೆ: Brazil Riots | ಬ್ರೆಜಿಲ್ನಲ್ಲಿ ಭುಗಿಲೆದ್ದ ಪ್ರತಿಭಟನೆಯನ್ನು ಖಂಡಿಸಿದ ಪ್ರಧಾನಿ ಮೋದಿ; ಅಲ್ಲಿನ ಸರ್ಕಾರಕ್ಕೆ ಬೆಂಬಲ ಸೂಚಿಸಿ ಟ್ವೀಟ್
ಹೇಗಿರಲಿದೆ ಕಾರ್ಯಕ್ರಮ?
ಮಧ್ಯಪ್ರದೇಶದ ಇಂದೋರ್‌ನಲ್ಲಿ ಜ.8, 9 ಮತ್ತು 10ರಂದು ಈ ಕಾರ್ಯಕ್ರಮ ನಡೆಯುತ್ತಿದೆ. ಜ.9ರಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಜ.9ರಂದು ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ʼಸುರಕ್ಷಿತ್ ಜಾಯೆನ್, ಪ್ರಶಿಕ್ಷಿತ್ ಜಾಯೇನ್ʼ ಅಚ್ಚಿರುವ ಅಂಚೆ ಚೀಟಿ ಬಿಡುಗಡೆ ಮಾಡಲಾಗುವುದು. ʼಆಜಾದಿ ಕಾ ಅಮೃತಮಹೋತ್ಸವʼ ಥೀಮ್‌ನಲ್ಲಿ ನಡೆಸಲಾಗುತ್ತಿರುವ ವಸ್ತು ಪ್ರದರ್ಶನಕ್ಕೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಜ.10ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿದೇಶಗಳಲ್ಲಿ ಸಾಧನೆ ಮಾಡಿರುವ ಭಾರತೀಯ ಮೂಲದವರಿಗೆ ʼಪ್ರವಾಸಿ ಭಾರತೀಯ ಸಮ್ಮಾನ್ 2023′ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.