ಮಧ್ಯಪ್ರದೇಶದ ಸಿದ್ಧಿ ಜಿಲ್ಲೆಯಲ್ಲಿ ಆದಿವಾಸಿ ಕಾರ್ಮಿಕ ದಶಮತ್ ರಾವತ್ (Dashmat Rawat) ಮೇಲೆ ಪ್ರವೇಶ್ ಶುಕ್ಲಾ ಎಂಬಾತ ಮೂತ್ರ ವಿಸರ್ಜನೆ ಮಾಡಿ, ಅರೆಸ್ಟ್ ಆಗಿದ್ದಾನೆ. ಪ್ರವೇಶ್ ಶುಕ್ಲಾ ಮೂತ್ರ ವಿಸರ್ಜನೆ (MP Urination Case) ಮಾಡಿದ್ದ ವಿಡಿಯೊ ವೈರಲ್ ಆಗುತ್ತಿದ್ದಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದ್ದರು. ಪ್ರವೇಶ್ ಶುಕ್ಲಾ ಮನೆಯನ್ನು ಬುಲ್ಡೋಜರ್ ಮೂಲಕ ಧ್ವಂಸ ಮಾಡಲಾಗಿದೆ. ಹಾಗೇ, ಶಿವರಾಜ್ ಸಿಂಗ್ ಚೌಹಾಣ್ ಅವರು ದಶಮತ್ ರಾವತ್ ಅವರ ಕಾಲು ತೊಳೆದು, ಪೂಜೆ ಮಾಡಿದ್ದಾರೆ. ಅವರಿಗೆ ತಿನ್ನಲು ತಿಂಡಿಗಳನ್ನು ಕೊಟ್ಟು, ‘ನೀನು ನನ್ನ ಪಾಲಿಗೆ ಸುದಾಮ (ಕೃಷ್ಣನ ಮಿತ್ರ)’ ಎಂದೂ ಹೇಳಿದ್ದರು.
ಇದೀಗ ಈ ಪ್ರಕರಣವನ್ನು ದೊಡ್ಡದು ಮಾಡಲು ಇಷ್ಟವಿಲ್ಲ ಎಂಬ ಮಾತುಗಳನ್ನು ಕಾರ್ಮಿಕ ದಶಮತ್ ರಾವ್ ಆಡಿದ್ದಾರೆ. ‘ಮೂತ್ರ ವಿಸರ್ಜನೆ ಮಾಡಿದ ಪ್ರವೇಶ್ ಶುಕ್ಲಾರನ್ನು ಜೈಲಿಂದ ಬಿಟ್ಟುಬಿಡಿ. ಅವರ ತಪ್ಪು ಅವರಿಗೆ ಅರ್ಥವಾಗಿದೆ. ಆಗಿದ್ದು ಆಗಿ ಹೋಯಿತು. ಎಷ್ಟೆಂದರೂ ಪ್ರವೇಶ್ ಶುಕ್ಲಾ ನಮ್ಮೂರಿನ ಪಂಡಿತರು. ಈಗ ತಪ್ಪನ್ನು ಅರ್ಥ ಮಾಡಿಕೊಂಡಿದ್ದಾರೆ’ ಎಂದು ಮಾಧ್ಯಮಗಳ ಎದುರು ಹೇಳಿಕೊಂಡಿದ್ದಾರೆ. ಹಾಗೇ, ಸರ್ಕಾರದ ಎದುರು ಇನ್ನೇನಾದರೂ ಬೇಡಿಕೆ ಇಡುತ್ತೀರಾ ಎಂದು ಪ್ರಶ್ನಿಸಿದ್ದಕ್ಕೆ, ‘ಮತ್ತೇನೂ ಬೇಡ ನಮ್ಮ ಹಳ್ಳಿಗೆ ಒಂದೊಳ್ಳೆ ರಸ್ತೆ ಮಾಡಿಕೊಡಲಿ ಸಾಕು’ ಎಂದು ದಶಮತ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಮೂತ್ರ ವಿಸರ್ಜನೆ ಪ್ರಕರಣ: ‘ನೀ ನನ್ನ ಸುದಾಮ’ ಎಂದು ಆದಿವಾಸಿ ಕಾರ್ಮಿಕನಿಗೆ ಹೇಳಿದ ಸಿಎಂ ಚೌಹಾಣ್
ಮಧ್ಯಪ್ರದೇಶದಲ್ಲಿ ಇದೇ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿಕ್ಕಿದೆ. ಅದರ ಮಧ್ಯೆಯೇ ದಲಿತರು, ಹಿಂದುಳಿದ ವರ್ಗದವರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಅದರಲ್ಲೂ ಈ ದಶಮತ್ ರಾವತ್ ಮೇಲೆ ಮೇಲ್ವರ್ಗಕ್ಕೆ ಸೇರಿದ ವ್ಯಕ್ತಿ ಪ್ರವೇಶ್ ಶುಕ್ಲಾ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೊ ವೈರಲ್ ಆಗುತ್ತಿದ್ದಂತೆ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿತ್ತು. ಯಾಕೆಂದರೆ ಆ ಪ್ರವೇಶ್ ಶುಕ್ಲಾ ಮಧ್ಯಪ್ರದೇಶದ ಬಿಜೆಪಿ ನಾಯಕ ಕೇದಾರ್ ಶುಕ್ಲಾ ಆಪ್ತ. ಹೀಗೆ ಸರ್ಕಾರಕ್ಕೆ ಎದುರಾದ ಮುಜುಗರದಿಂದ ಪಾರಾಗಲು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ದಶಮತ್ ರಾವತ್ರನ್ನು ಮನೆಗೇ ಕರೆಸಿ, ಉಪಚಾರ ಮಾಡಿದ್ದರು. ಈಗ ದಶಮತ್ ರಾವತ್ ಅವರು ದ್ವೇಷವೇ ಬೇಡ, ಪ್ರವೇಶ್ನನ್ನು ಬಿಟ್ಟುಬಿಡಿ ಎನ್ನುತ್ತಿದ್ದಾರೆ.