Site icon Vistara News

10ನೇ ತರಗತಿ ಪುಸ್ತಕದಲ್ಲಿ ಪ್ರಕಟವಾದ ಸಂವಿಧಾನದ ಪೀಠಿಕೆಯಲ್ಲಿ ಪ್ರಮಾದ; ಆ ಎರಡು ಪ್ರಮುಖ ಶಬ್ದಗಳೇ ಇಲ್ಲ!

Preamble Published On Class 10 Textbook

#image_title

ತೆಲಂಗಾಣದಲ್ಲಿ 10 ನೇ ತರಗತಿ ಮಕ್ಕಳ ಸಮಾಜ ವಿಜ್ಞಾನ ಪುಸ್ತಕದ (Telangana Class 10 School Textbook) ಕವರ್ ಪೇಜ್ (ಮುಖಪುಟ) ನಲ್ಲಿ ಪ್ರಕಟಿಸಲಾದ ಸಂವಿಧಾನದ ಪೀಠಿಕೆಯಲ್ಲಿ (Preamble of the Constitution) ಎಡವಟ್ಟು ಆಗಿದೆ. ಸಂವಿಧಾನದ ಪೀಠಿಕೆಯಲ್ಲಿ ಇದ್ದ ಸಮಾಜವಾದಿ ಮತ್ತು ಜಾತ್ಯತೀತ (Socialist and Secular)ಎಂಬ ಎರಡು‌ ಶಬ್ದಗಳನ್ನು ಕೈಬಿಡಲಾಗಿದೆ. ತೆಲಂಗಾಣ ರಾಜ್ಯ ‌ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಮಂಡಳಿ ಪ್ರಕಟಿಸಿದ ಪುಸ್ತಕದಲ್ಲಿ ಇವೆರಡೂ ಶಬ್ದಗಳನ್ನು ಕೈಬಿಟ್ಟಿದ್ದಕ್ಕೆ ತೆಲಂಗಾಣ ರಾಜ್ಯ ಸಂಘಟಿತ ಶಿಕ್ಷಕರ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ಇದೊಂದು ಬಹುದೊಡ್ಡ ಪ್ರಮಾದ ಎಂದು ಹೇಳಿದೆ

ಸಮಾಜವಾದಿ ಮತ್ತು ಜಾತ್ಯತೀತ ಶಬ್ದಗಳು ಪ್ರಾರಂಭದಲ್ಲಿ ಸಂವಿಧಾನದ ಪೀಠಿಕೆಯಲ್ಲಿ ಇರಲಿಲ್ಲ. 1976ರ‌ ಡಿಸೆಂಬರ್ ನಲ್ಲಿ ಮಾಡಲಾದ ತಿದ್ದುಪಡಿಯಲ್ಲಿ ಈ ಶಬ್ದಗಳನ್ನು ಸೇರಿಸಲಾಗಿತ್ತು. ಇದೀಗ ತೆಲಂಗಾಣ ಹತ್ತನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಹಳೇ‌ ಪೀಠಿಕೆಯನ್ನೇ ಅಂದರೆ, ಜಾತ್ಯತೀತ ಮತ್ತು ಸಮಾಜವಾದಿ ಎಂಬ ಪದಗಳು ಇಲ್ಲದ, 1976ಕ್ಕೂ ಪೂರ್ವ ಇದ್ದ ಸಂವಿಧಾನದ ಪೀಠಿಕೆಯನ್ನು ಹಾಕಲಾಗಿದೆ.

ಈ‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ತೆಲಂಗಾಣ ರಾಜ್ಯ ಸಂಘಟಿತ ಶಿಕ್ಷಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಚಾವಾ ರವಿ ಅವರು ‘ನಮ್ಮದು ಜಾತ್ಯತೀತ ರಾಷ್ಟ್ರ. ಆದರೆ ನಮ್ಮಲ್ಲಿನ ಜಾತ್ಯತೀತತೆಗೆ ಅಪಾಯ ಉಂಟಾಗಿದೆ ಎಂಬ ಮಾತು ಇತ್ತೀಚೆಗೆ ವ್ಯಾಪಕವಾಗಿ ಕೇಳಿಬರುತ್ತಿದೆ. ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿ ಕೂಡ ಈ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಹೀಗಿರುವಾ ತೆಲಂಗಾಣ ಶಿಕ್ಷಣ ಮಂಡಳಿ ಸಂವಿಧಾನದ ಪೀಠಿಕೆಯನ್ನು ಸಮಾಜವಾದಿ ಮತ್ತು ಜಾತ್ಯತೀತ ಶಬ್ದಗಳನ್ನು ಬಿಟ್ಟಿರುವುದು ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಚರ್ಚೆಗೆ ಗ್ರಾಸವಾಗುತ್ತದೆ ಎಂದು ಹೇಳಿದ್ದಾರೆ. ಹಾಗೇ, ಈ ತಪ್ಪನ್ನು ಸರಿಪಡಿಸಬೇಕು. ಕೂಡಲೆ ಸರಿಯಾದ ಪೀಠಿಕೆ ಪ್ರಕಟಿಸಿ, 10ನೇ ತರಗತಿ ಪುಸ್ತಕಗಳನ್ನು ಮರು ಮುದ್ರಣ ಮಾಡಬೇಕು ಎಂದೂ ಶಿಕ್ಷಕರ ಗುಂಪು ಆಗ್ರಹ ಮಾಡಿದೆ.

ಇದನ್ನೂ ಓದಿ: ಸಂಪುಟ ಸಭೆ ನಿರ್ಧಾರ: ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದುವುದು ನಿಶ್ಚಿತ; ʼಬಿಜೆಪಿʼ ಪಠ್ಯ ತೆಗೆಯುವುದು ಖಚಿತ

ಈ ವಿವಾದ ದೊಡ್ಡದಾಗುತ್ತಿದ್ದಂತೆ ತೆಲಂಗಾಣ ಶಿಕ್ಷಣ ಮಂಡಳಿ ಹೇಳಿಕೆ ಬಿಡುಗಡೆ ಮಾಡಿದ್ದು, ‘ಇದು ಉದ್ದೇಶ ಪೂರ್ವಕವಾಗಿ ಮಾಡಿದ್ದಲ್ಲ. ಪುಸ್ತಕದ ಕವರ್ ಪೇಜ್ ಮಾಡುವ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆಯನ್ನು ಡೌನ್​ಲೋಡ್ ಮಾಡಿಕೊಳ್ಳುವಾಗ, ಅಜಾಗರೂಕತೆಯಿಂದ ತಪ್ಪಾಗಿದೆ. ಪೀಠಿಕೆಯ ತಿದ್ದುಪಡಿ ಮಾಡಿದ, ಅಂದರೆ ಜಾತ್ಯತೀತ ಮತ್ತು ಸಮಾಜವಾದಿ ಶಬ್ದಗಳು ಇರುವ ಪೀಠಿಕೆಯನ್ನು ಡೌನ್​ಲೋಡ್​ ಮಾಡಿ, ಅದನ್ನು 10ನೇ ತರಗತಿ ಪುಸ್ತಕದ ಕವರ್​ ಪೇಜ್​ಗೆ ಅಂಟಿಸುವಂತೆ ಎಲ್ಲ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೂ ಸೂಚಿಸಲಾಗಿದೆ‘ ಎಂದು ತಿಳಿಸಿದೆ.

Exit mobile version