Site icon Vistara News

ರಾಷ್ಟ್ರಪತಿ ದ್ರೌಪದಿ ಮುರ್ಮು ಹುಟ್ಟುಹಬ್ಬ; ರಾಷ್ಟ್ರಪತಿ ಭವನ ಜನರಿಗೆ ಇನ್ನಷ್ಟು ಹತ್ತಿರ?

President Droupadi Murmu

#image_title

65ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರಿಗೆ ಇಂದು ಪ್ರಧಾನಿ ಮೋದಿ ಶುಭಕೋರಿದ್ದಾರೆ. ‘ಘನತೆ, ಜನರ ಕಲ್ಯಾಣದ ವಿಷಯದಲ್ಲಿನ ಬದ್ಧತೆ, ಜ್ಞಾನದ ದಾರಿದೀಪ ಆಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಜನ್ಮ ದಿನದ ಶುಭಾಶಯಗಳು (President Droupadi Murmu Birthday). ರಾಷ್ಟ್ರವನ್ನು ಮತ್ತೊಂದು ಹಂತದ ಪ್ರಗತಿಗೆ ಕೊಂಡೊಯ್ಯುವ ಅವರ ಪ್ರಯತ್ನವನ್ನು ನಾವೆಲ್ಲರೂ ಮೆಚ್ಚಲೇಬೇಕು. ಅವರಿಗೆ ಕಾಯಕದ ಬಗೆಗೆ ಇರುವ ನಿಷ್ಠೆ ನಮಗೆಲ್ಲರಿಗೂ ಸ್ಪೂರ್ತಿ. ಅವರ ಉತ್ತರ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು 65ನೇ ಜನ್ಮದಿನದ ನಿಮಿತ್ತ, ರಾಷ್ಟ್ರಪತಿ ಭವನವನ್ನು ಜನರಿಗೆ ಇನ್ನಷ್ಟು ಹತ್ತಿರಗೊಳಿಸಲು ಪ್ಲ್ಯಾನ್ ನಡೆಯುತ್ತಿದೆ ಎನ್ನಲಾಗಿದೆ. ರಾಷ್ಟ್ರಪತಿ ಭವನದ ಲೈಬ್ರರಿಯನ್ನು ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರಿಗೆ ಮುಕ್ತವಾಗಿಸುವುದು, ಎಲ್ಲ ರಾಜ್ಯಗಳ ಸಂಸ್ಥಾಪನಾ ದಿನಗಳ ಆಚರಣೆಗೆ ಇಲ್ಲಿ ಅವಕಾಶ ಕೊಡುವುದು, ಅಷ್ಟೇ ಅಲ್ಲ, ರಾಷ್ಟ್ರಪತಿ ಭವನದಲ್ಲಿ ಕ್ರೀಡಾ ಸೌಕರ್ಯಗಳನ್ನು ಕಲ್ಪಿಸಿ, ಮಕ್ಕಳಿಗೆ ಮತ್ತು ವೃತ್ತಿಪರ ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸಿಕೊಡುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ರಾಷ್ಟ್ರಪತಿ ಭವನದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಇನ್ನು ಇಷ್ಟು ದಿನ ರಾಜ್ಯಗಳ ಸಂಸ್ಥಾಪನಾ ದಿನ ಆಚರಣೆಯನ್ನು ರಾಷ್ಟ್ರಪತಿ ಭವನದಲ್ಲಿ ಮಾಡಲು ಅವಕಾಶ ಇರಲಿಲ್ಲ. ಈ ಸಂಕೀರ್ಣದಲ್ಲಿರುವ ಆಯಾ ರಾಜ್ಯಗಳ ಭವನದಲ್ಲಿ ಮಾತ್ರ ಸಂಸ್ಥಾಪನಾ ದಿನ ನಡೆಯುತ್ತಿತ್ತು. ಆದರೆ ಎಲ್ಲ ರಾಜ್ಯಗಳಿಗೂ, ರಾಷ್ಟ್ರಪತಿ ಭವನವನ್ನು ಇನ್ನಷ್ಟು ಆಪ್ತಗೊಳಿಸಲು, ಇನ್ನು ಮುಂದೆ ಆಯಾ ರಾಜ್ಯಗಳ ಸಂಸ್ಥಾಪನಾ ದಿನವನ್ನು ಇಲ್ಲಿಯೇ ಆಚರಿಸಲು ರೂಪುರೇಷೆ ರಚಿಸಲಾಗುತ್ತಿದೆ. ಜನರಿಗೆ ರಾಷ್ಟ್ರಪತಿ ಭವನದಲ್ಲಿರುವ ಸೌಕರ್ಯ/ಸಂಪನ್ಮೂಲಗಳನ್ನು ಮುಕ್ತವಾಗಿ ಬಳಸಿಕೊಳ್ಳಲು ಅನುಕೂಲ ಮಾಡಿಕೊಡುವ ಸಲುವಾಗಿ ಈ ಎಲ್ಲ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: New Parliament Building: ರಾಷ್ಟ್ರಪತಿ ಅವರಿಂದಲೇ ಸಂಸತ್‌ ಭವನ ಉದ್ಘಾಟನೆ ಕೋರಿ ಅರ್ಜಿ; ತಿರಸ್ಕರಿಸಿದ ಕೋರ್ಟ್

ರಾಷ್ಟ್ರಪತಿ ಭವನವನ್ನು ಜನಸಾಮಾನ್ಯರಿಗೆ ಹತ್ತಿರಗೊಳಿಸಲು ಈ ಹಿಂದೆ ಅಬ್ದುಲ್​ ಕಲಾಂ ಮತ್ತು ಪ್ರಣಬ್​ ಮುಖರ್ಜಿ ರಾಷ್ಟ್ರಪತಿಗಳಾಗಿದ್ದಾಗ ಸಣ್ಣಮಟ್ಟದಲ್ಲಿ ಪ್ರಯತ್ನ ಮಾಡಿದ್ದರು. ಆದರೆ ಈಗ ದ್ರೌಪದಿ ಮುರ್ಮು ಆಡಳಿತದಲ್ಲಿ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗುತ್ತಿದೆ ಎನ್ನಲಾಗಿದೆ. ರಾಷ್ಟ್ರಪತಿ ಭವನದ ಲೈಬ್ರರಿಯಲ್ಲಿ ಒಟ್ಟು 33 ಸಾವಿರ ಪುಸ್ತಕಗಳು ಇವೆ. ಅದರಲ್ಲೂ 2000 ಪುಸ್ತಕಗಳು ತುಂಬ ಅಪರೂಪ ಮತ್ತು ವಿಶೇಷವಾದವುಗಳು. ಲೈಬ್ರರಿ ಡಿಜಿಟಲೀಕರಣಗೊಂಡಿದೆ. ಇಲ್ಲಿಗೆ ಯಾರಿಗೂ ಪ್ರವೇಶಕ್ಕೆ ಅವಕಾಶ ಇಲ್ಲ. ಆನ್​ಲೈನ್ ಮೂಲಕವಷ್ಟೇ ಪುಸ್ತಕಗಳನ್ನು ಓದಬಹುದು. ಆದರೆ ಈ ನಿಯಮದಲ್ಲಿ ಈಗ ಬದಲಾವಣೆ ಮಾಡಲು ಸಿದ್ಧತೆ ನಡೆದಿದೆ. ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಇನ್ನಿತರ ವರ್ಗದ ಜನರೂ ರಾಷ್ಟ್ರಪತಿ ಭವನದ ಲೈಬ್ರರಿ ಪ್ರವೇಶ ಮಾಡುವಂತೆ ಅವಕಾಶ ಕಲ್ಪಿಸಲಾಗುವುದು ಎಂದು ಮೂಲಗಳು ತಿಳಿಸಿದ್ದು, ಅದಕ್ಕಾಗಿ ಮಾರ್ಗಸೂಚಿಯನ್ನೂ ರಚಿಸಲಾಗುತ್ತದೆ ಎನ್ನಲಾಗಿದೆ.

ಕಳೆದ ವರ್ಷ ಜುಲೈ 25ರಂದು ರಾಷ್ಟ್ರಪತಿ ಹುದ್ದೆಗೆ ಏರಿದ ದ್ರೌಪದಿ ಮುರ್ಮು, ತಾವು ಜನಸಾಮಾನ್ಯರ ಅದರಲ್ಲೂ ಹಿಂದುಳಿದ ವರ್ಗದವರ ರಾಷ್ಟ್ರಪತಿ ಎಂಬುದನ್ನು ಸಾರಿ ಹೇಳಿದ್ದಾರೆ. ‘ನನ್ನ ಹೃದಯ ಸದಾ ಹಿಂದುಳಿದವರ ಅಭಿವೃದ್ಧಿಗಾಗಿ ಮಿಡಿಯುತ್ತದೆ. ಅವರಿಗಾಗಿ ನಾನೇನಾದರೂ ಮಾಡಬೇಕು ಎಂದು ಇತ್ತೀಚೆಗಷ್ಟೇ ಹೇಳಿದ್ದರು. ಅವರು ರಾಷ್ಟ್ರಪತಿಯಾಗಿ ಶಿಷ್ಟಾಚಾರ ಪಾಲನೆ ಜತೆ, ಜನರೊಂದಿಗೆ ಆತ್ಮೀಯವಾಗಿ ವರ್ತಿಸುತ್ತಾರೆ. ಮೃತ ಯೋಧರ ಪತ್ನಿಯರು, ತಮ್ಮ ಪತಿಯರಿಗೆ ಸಲ್ಲಬೇಕಿದ್ದ ಗೌರವ ಪಡೆಯಲು ಬಂದಾಗ ಅವರನ್ನೆಲ್ಲ ತಬ್ಬಿ ಸಾಂತ್ವನ ಹೇಳಿದ್ದನ್ನೂ ಇಲ್ಲಿ ಸ್ಮರಿಸಬಹುದು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version