ಭುವನೇಶ್ವರ್: ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ತವರು ರಾಜ್ಯ ಒಡಿಶಾ ಪ್ರವಾಸದಲ್ಲಿದ್ದಾರೆ. ಮೂಲತಃ ಒಡಿಶಾದವರೇ ಆಗಿರುವ ಮುರ್ಮು ರಾಷ್ಟ್ರಪತಿ ಹುದ್ದೆಗೆ ಏರಿದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ತವರು ರಾಜ್ಯಕ್ಕೆ ಎರಡು ದಿನಗಳ ಪ್ರವಾಸ ಹಮ್ಮಿಕೊಂಡಿದ್ದಾರೆ. ನವೆಂಬರ್ 10ಕ್ಕೆ ಒಡಿಶಾಕ್ಕೆ ತೆರಳಿದ ದ್ರೌಪದಿ ಮುರ್ಮು, ಇಂದು 2ನೇ ದಿನ, ಖಂಡಗಿರಿಯಲ್ಲಿರುವ ತಪಬಾನ ಪ್ರೌಢಶಾಲೆ, ತಾವು ಓದಿದ, ಭುವನೇಶ್ವರ್ದಲ್ಲಿರುವ ಹೆಣ್ಣುಮಕ್ಕಳ ಸರ್ಕಾರಿ ಹೈಸ್ಕೂಲ್ಗೆ ಭೇಟಿ ನೀಡಿದರು. ಅಷ್ಟೇ ಅಲ್ಲ, ತಾವು ಶಾಲೆಗೆ ಹೋಗುತ್ತಿದ್ದಾಗ ಉಳಿದುಕೊಂಡಿದ್ದ ಕುಂತಲಾ ಕುಮಾರಿ ಸಬತ್ ಆದಿವಾಸಿ ಹಾಸ್ಟೆಲ್‌ಗೆ ಭೇಟಿ ನೀಡಿದರು. ಆ ವೇಳೆ ದ್ರೌಪದಿ ಮುರ್ಮು ಭಾವುಕರಾಗಿ ಕಣ್ಣಲ್ಲಿ ನೀರು ಹಾಕಿದ ಪ್ರಸಂಗವೂ ನಡೆದಿದೆ.
1970ರ ದಶಕದಲ್ಲಿ ಶಾಲೆಗೆ ಹೋಗುತ್ತಿದ್ದಾಗ ದ್ರೌಪದಿ ಮುರ್ಮು ಇದೇ ಹಾಸ್ಟೆಲ್ನಲ್ಲಿ ಉಳಿದಿದ್ದರು. ಈಗ ಅಲ್ಲಿಗೆ ಹೋಗಿ, ಅಲ್ಲಿರುವ ಮಂಚದ ಮೇಲೆ ಕುಳಿತಿದ್ದಾಗ ಅವರಿಗೆ ಕಣ್ಣಲ್ಲಿ ನೀರು ತುಂಬಿದೆ. ತಾವು ವಿದ್ಯಾರ್ಥಿಯಾಗಿದ್ದಾಗ ಇದೇ ಹಾಸ್ಟೆಲ್ನಲ್ಲಿ ವಾಸವಾಗಿದ್ದ ಕ್ಷಣಗಳನ್ನೆಲ್ಲ ನೆನಪಿಸಿಕೊಂಡು ಭಾವುಕರಾದರು.
ಅದರಾಚೆ ದ್ರೌಪದಿ ಮುರ್ಮು ತಮ್ಮ 13 ಸಹಪಾಠಿಗಳನ್ನು, ಬೋಧಿಸಿದ ಶಿಕ್ಷಕರನ್ನು ಭೇಟಿಯಾಗಿ, ಅವರೊಂದಿಗೆ ಮಾತುಕತೆ ನಡೆಸಿದರು. ಆರೋಗ್ಯ ವಿಚಾರಿಸಿದರು. ಅವರೆಲ್ಲರ ಜತೆ ಫುಲ್ ಖುಷಿಯಿಂದ ಕಾಲು ಕಳೆದರು. ಇದೇ ವೇಳೆ, ಹಳೇ ದಿನಗಳನ್ನು ನೆನಪಿಸಿಕೊಂಡ ದ್ರೌಪದಿ ಮುರ್ಮು ‘ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ನನ್ನ ಹಳ್ಳಿಯಾದ ಉಪಾರ್ಬೇಡಾದಲ್ಲಿ ಪಡೆದೆ. ಹಾಗಂತ ಅಲ್ಲಿ ಶಾಲೆ ಎಂದರೆ ಅದಕ್ಕೊಂದು ಗಟ್ಟಿಮುಟ್ಟಾದ ಕಟ್ಟಡ ಇರಲಿಲ್ಲ. ಅದೊಂದು ಹುಲ್ಲಿನ ಮನೆಯಲ್ಲೇ ನಮ್ಮ ಕಲಿಕೆ ನಡೆದಿತ್ತು’ ಎಂದು ಹೇಳಿದರು.
ಹಾಗೇ, ಭುವನೇಶ್ವರ್ದ ಮಾಧ್ಯಮಿಕ ಶಾಲೆ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ದ್ರೌಪದಿ ಮುರ್ಮು, ತಮ್ಮ ಶಾಲಾ ದಿನಗಳ ಬಗ್ಗೆ ನೆನಪಿಸಿಕೊಂಡರು. ‘ನಾವು ಚಿಕ್ಕವರಿದ್ದಾಗ ಶಾಲೆಯ ಕೊಠಡಿಗಳ ಕಸ ಗುಡಿಸಬೇಕಿತ್ತು. ಶಾಲೆ ಆವರಣ, ಅಂಗಳಗಳನ್ನೆಲ್ಲ ಹಸುವಿನ ಸೆಗಣಿ ಹಾಕಿ ಸ್ವಚ್ಛಗೊಳಿಸಬೇಕಿತ್ತು. ನಮ್ಮ ಕಾಲದಲ್ಲಿ ವಿದ್ಯಾರ್ಥಿಗಳು ಮುಕ್ತಮನಸಿನಿಂದ ಓದುತ್ತಿದ್ದರು. ನೀವು ಹಾಗೇ ಇರಿ. ಏಕಾಗ್ರತೆ ವಹಿಸಿ ಅಧ್ಯಯನ ಮಾಡಿ’ ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ದ್ರೌಪದಿ ಮುರ್ಮು ಭೇಟಿ ನಿಮಿತ್ತ ಕುಂತಲಾ ಕುಮಾರಿ ಸಬತ್ ಆದಿವಾಸಿ ಹಾಸ್ಟೆಲ್ನಲ್ಲಿ ಸಕಲ ಸಿದ್ಧತೆಯನ್ನೂ ಮಾಡಲಾಗಿತ್ತು. 1970ರಿಂದ 74ರವರೆಗೆ ಅವರು ಈ ಹಾಸ್ಟೆಲ್ನಲ್ಲಿ ಇದ್ದರು. ಅವರು ಉಳಿದುಕೊಂಡಿದ್ದ ಕೋಣೆಗೆ ಅಲ್ಲಿನ ಸಿಬ್ಬಂದಿ ಕರೆದುಕೊಂಡು ಹೋಗಿದ್ದಾರೆ. ದ್ರೌಪದಿ ಮುರ್ಮು ಬರುತ್ತಾರೆ ಎಂದೇ ಅವರ ಕೆಲವು ಸಹಪಾಠಿಗಳನ್ನೂ ಇಲ್ಲಿಗೆ ಕರೆಸಲಾಗಿತ್ತು. ಹೀಗೆ ಆಗಮಿಸಿದವರಲ್ಲಿ ಒಬ್ಬರಾದ ಚಿನ್ಮಯಿ ಮೊಹಂತಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ‘ನಾವು ಈ ದೇಶದ ರಾಷ್ಟ್ರಪತಿಯನ್ನು ಭೇಟಿಯಾದ ಕ್ಷಣವನ್ನೆಂದೂ ಮರೆಯಲು ಸಾಧ್ಯವಿಲ್ಲ. ಅವರು ನಮ್ಮ ಸಹಪಾಠಿ ಆಗಿದ್ದರು ಎಂಬುದೇ ನಮಗೆ ಹೆಮ್ಮೆ ಎಂದು ಹೇಳಿದ್ದಾರೆ.
ಇತ್ತ ದ್ರೌಪದಿ ಮುರ್ಮು ಕೂಡ ತಮ್ಮ ಸಹಪಾಠಿಗಳನ್ನು ಭೇಟಿಯಾಗಿ ತುಂಬ ಸಂತೋಷ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಾನು ಒಡಿಶಾದ ಭುವನೇಶ್ವರ್ನಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಕುಂತಲಕುಮಾರಿ ಸಬತ್ ಆದಿವಾಸಿ ಬಾಲಕಿಯರ ಹಾಸ್ಟೆಲ್‌ಗೆ ಭೇಟಿ ನೀಡಿದೆ. ಈ ಭೇಟಿ ನನ್ನ ಬಾಲ್ಯವನ್ನು, ವಿದ್ಯಾರ್ಥಿ ಜೀವನವನ್ನು ನೆನಪಿಸಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಧಾನಸೌಧ | ಐವರು ಪದ್ಮ ಪ್ರಶಸ್ತಿ ಪುರಸ್ಕೃತರಿಂದ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಪೌರ ಸನ್ಮಾನ