ನವ ದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಇಂದು ಸುಖೋಯ್ -30 ಎಂಕೆಐ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ. ಏಪ್ರಿಲ್ 6ರಿಂದ ಇಂದಿನ (ಏಪ್ರಿಲ್ 8)ವರೆಗೆ ಅಸ್ಸಾಂ ಪ್ರವಾಸದಲ್ಲಿ ಇರುವ ಅವರು, ಇಂದು ಅಲ್ಲಿನ ತೇಜ್ಪುರದಲ್ಲಿರುವ ವಾಯುಪಡೆ ನಿಲ್ದಾಣದಲ್ಲಿ ಯುದ್ಧ ವಿಮಾನವನ್ನೇರಿ ಹಾರಾಟ ನಡೆಸಿದ್ದಾರೆ (Droupadi Murmu flies Sukhoi-30). ಯುದ್ಧ ವಿಮಾನದಲ್ಲಿ ಅವರ ಮೊದಲ ಹಾರಾಟ ಇದಾಗಿದೆ. ವಾಯುಪಡೆ ಪೈಲೆಟ್ಗಳ ಬಟ್ಟೆಯನ್ನು ಧರಿಸಿದ ಅವರ ಫೋಟೋಗಳು ವೈರಲ್ ಆಗಿವೆ. ಹಾಗೇ, ಸುಖೋಯ್ 30 ಫೈಟರ್ ಏರ್ಕ್ರಾಫ್ಟ್ನಲ್ಲಿ ಹಾರಾಟ ನಡೆಸಿದ ಭಾರತದ ಎರಡನೇ ಮಹಿಳಾ ರಾಷ್ಟ್ರಪತಿಯಾಗಿದ್ದಾರೆ. 2009ರಲ್ಲಿ ಅಂದಿನ ರಾಷ್ಟ್ರಪತಿಯಾಗಿದ್ದ ಪ್ರತಿಭಾ ಪಾಟೀಲ್ ಅವರು ಪುಣೆ ಏರ್ಫೋರ್ಸ್ ನೆಲೆಯಿಂದ ಇದೇ ಸುಖೋಯ್ 30 ಎಂಕೆಐ ಫೈಟರ್ ಜೆಟ್ನಲ್ಲಿ ಹಾರಾಟ ನಡೆಸಿದ್ದರು.
ಎರಡು ಸೀಟ್ಗಳನ್ನು ಒಳಗೊಂಡಿರುವ ಸುಖೋಯ್-30 ಎಂಕೆಐ ಮಲ್ಟಿರೋಲ್ ಫೈಟರ್ ಜೆಟ್ ಆಗಿದೆ. ರಷ್ಯಾದ ಏರ್ಕ್ರಾಫ್ಟರ್ ಉತ್ಪಾದನಾ ಸಂಸ್ಥೆಯಾದ ಸುಖೋಯ್ ಈ ಜೆಟ್ನ್ನು ಅಭಿವೃದ್ಧಿಸಿದ್ದು, ಭಾರತದ ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ (HAL)ನ ಲೈಸೆನ್ಸ್ನಡಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಈ ಹಿಂದೆ ಎಪೆಜೆ ಅಬ್ದುಲ್ ಕಲಾಂ ಅವರು ಪುಣೆ ಮತ್ತು ರಾಮನಾಥ್ ಕೋವಿಂದ್ ಅವರು ಮಹಾರಾಷ್ಟ್ರ ವಾಯುಪಡೆ ನೆಲೆಯಿಂದ ಇದೇ ಸುಖೋಯ್ 30 ಫೈಟರ್ ಜೆಟ್ನಲ್ಲಿ ಹಾರಾಟ ನಡೆಸಿದ್ದರು.
ಏಪ್ರಿಲ್ 6ರಂದು ದ್ರೌಪದಿ ಮುರ್ಮು ಅವರು ಅಸ್ಸಾಂಗೆ ತೆರಳಿದ್ದಾರೆ. ಇಂದು ಅವರು ಅಲ್ಲಿ ಸೇನಾ ಸಿಬ್ಬಂದಿಯಿಂದ ಗೌರವ ವಂದನೆ ಸ್ವೀಕರಿಸಿದ್ದಾರೆ. ಅದಕ್ಕೂ ಮೊದಲು ಶುಕ್ರವಾರ (ಏ.7) ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಣಾ ಪ್ರದೇಶದಲ್ಲಿ (KNPTR) ಗಜ ಉತ್ಸವಕ್ಕೆ ಚಾಲನೆ ನೀಡಿದ್ದರು. ಆನೆಗಳ ಉಳಿವು, ಮನುಷ್ಯ ಮತ್ತು ಆನೆಗಳ ನಡುವಿನ ಸಂಘರ್ಷ ನಿಯಂತ್ರಣದ ಉದ್ದೇಶ ಇಟ್ಟುಕೊಂಡು 1992ರಲ್ಲಿ ಅಸ್ತಿತ್ವಕ್ಕೆ ತರಲಾದ ಪ್ರಾಜೆಕ್ಟ್ ಎಲಿಫೆಂಟ್ ಯೋಜನೆಗೆ 30ವರ್ಷವಾದ ಹಿನ್ನೆಲೆಯಲ್ಲಿ ಈ ಗಜ ಉತ್ಸವ ಆಯೋಜಿಸಲಾಗಿತ್ತು. ಇದೇ ವೇಳೆ ಅವರು ಕಾಜಿರಂಗ ನ್ಯಾಷನಲ್ ಪಾರ್ಕ್ನಲ್ಲಿ ಜೀಪ್ ಸಫಾರಿ ಮಾಡಿದ್ದಾರೆ. ಈ ವೇಳೆ ಅವರೊಂದಿಗೆ ಅಸ್ಸಾಂ ರಾಜ್ಯಪಾಲ ಗುಲಾಬ್ ಚಾಂದ್ ಕಟಾರಿಯಾ ಮತ್ತು ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಇದ್ದರು. ಅದಾದ ಮೇಲೆ ದ್ರೌಪದಿ ಮುರ್ಮು ಅವರು ಗುವಾಹಟಿಯಲ್ಲಿ ಮೌಂಟ್ ಕಾಂಚನಜುಂಗಾ ದಂಡಯಾತ್ರೆ-2023ಗೆ ಕೂಡ ಚಾಲನೆ ನೀಡಿದರು.