ನವ ದೆಹಲಿ: ರಾಷ್ಟ್ರಪತಿ ಚುನಾವಣೆ ಮತದಾನ ದೇಶಾದ್ಯಂತ ಶಾಂತಿಯುತವಾಗಿ ಮುಕ್ತಾಯವಾಗಿದೆ. ಬೆಳಗ್ಗೆ 10ಗಂಟೆಯಿಂದ ಸಂಜೆ 5ಗಂಟೆವರೆಗೆ ಮತಚಲಾವಣೆ ನಡೆದಿದ್ದು, ಒಟ್ಟಾರೆ ಸಂಸತ್ತಿನಲ್ಲಿ ಶೇ.99.18 ರಷ್ಟು ಮತದಾನ ಆಗಿದೆ ಎಂದು ಚುನಾವಣಾ ಮುಖ್ಯ ರಿಟರ್ನಿಂಗ್ ಆಫೀಸರ್ ಪಿ.ಸಿ.ಮೋಡಿ ಹೇಳಿದ್ದಾರೆ. ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿ ಯಶವಂತ್ ಸಿನ್ಹಾರ ಭವಿಷ್ಯ ನಿರ್ಧರಿಸಲಿರುವ ಬ್ಯಾಲೆಟ್ ಬಾಕ್ಸ್‌ಗಳು ದೇಶದ ಎಲ್ಲೆಡೆಯಿಂದ ನಾಳೆಯೊಳಗೆ ದೆಹಲಿಗೆ ಬರಲಿವೆ. ಈ ಬ್ಯಾಲೆಟ್ ಪೆಟ್ಟಿಗೆಗಳನ್ನು ರಸ್ತೆ ಮತ್ತು ವಾಯು ಮಾರ್ಗದ ಮೂಲಕ ತರಲಾಗುತ್ತದೆ. ಅದರೊಂದಿಗೆ ಸಹಾಯಕ ಚುನಾವಣಾಧಿಕಾರಿಗಳು ಇರುತ್ತಾರೆ.
727 ಸಂಸದರು, 9 ಶಾಸಕರು ಸೇರಿ ಒಟ್ಟು 736 ಮತದಾರರಿಗೆ ಸಂಸತ್ತಿನಲ್ಲಿ ಮತಚಲಾಯಿಸಲು ಅನುಮತಿ ನೀಡಲಾಗಿತ್ತು. ಅದರಲ್ಲಿ 721 ಸಂಸದರು, 9 ಶಾಸಕರು ಸೇರಿ ಒಟ್ಟು 730 ಮತದಾರರು ಸಂಸತ್ತಿನಲ್ಲಿ ಮತ ಚಲಾಯಿಸಿದ್ದಾರೆ. ಬಿಜೆಪಿಯ ಸನ್ನಿ ಡಿಯೋಲ್ ಸೇರಿ ಒಟ್ಟು 6 ಸಂಸದರು ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಲಿಲ್ಲ ಎಂದು ಹೇಳಲಾಗಿದೆ. ಬೆಳಗ್ಗೆ 10ಗಂಟೆಗೆ ಮತದಾನ ಪ್ರಾರಂಭವಾಗುತ್ತಿದ್ದಂತೆ ಮೊಟ್ಟಮೊದಲು ಪ್ರಧಾನಿ ನರೇಂದ್ರ ಮೋದಿ ಮತ ಹಾಕಿದರು. ಬಳಿಕ ಉಳಿದೆಲ್ಲ ಸಂಸದರು/ಶಾಸಕರು ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. 5ಗಂಟೆಗೆ ಸರಿಯಾಗಿ ಮತದಾನ ಮುಕ್ತಾಯವಾಗಿದೆ. ಜುಲೈ 21 ರಂದು ಮತ ಎಣಿಕೆ ನಡೆಯಲಿದೆ.
ಇನ್ನು ಇಂದಿನಿಂದ ಸಂಸತ್ ಮುಂಗಾರು ಅಧಿವೇಶನವೂ ಪ್ರಾರಂಭವಾಗಿದೆ. ಬೆಳಗ್ಗೆ 11 ಗಂಟೆಯಿಂದ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಕಲಾಪ ಪ್ರಾರಂಭವಾಗಿತ್ತು. ಆದರೆ ರಾಷ್ಟ್ರಪತಿ ಚುನಾವಣೆ ಮತದಾನದ ದೃಷ್ಟಿಯಿಂದ ಮಧ್ಯಾಹ್ನಕ್ಕೆ ಮುಂದೂಡಲಾಗಿತ್ತು. ಆದರೆ ಮಧ್ಯಾಹ್ನ ಕಲಾಪದ ವೇಳೆ ಎರಡೂ ಸದನದಲ್ಲಿ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿ, ಕಲಾಪವನ್ನು ಜುಲೈ 19ಕ್ಕೆ ಮುಂದೂಡುವಂತಾಯಿತು.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: ವೀಲ್ ಚೇರ್‌ನಲ್ಲಿ ಬಂದು ಮತದಾನ ಮಾಡಿದ ಇಬ್ಬರು ಮಾಜಿ ಪ್ರಧಾನಿಗಳು