ಕೋಲ್ಕತ್ತ: ಪಶ್ಚಿಮ ಬಂಗಾಳದ ಬೀರ್ಭೂಮ್ ಜಿಲ್ಲೆಯ ಬೊಗ್ಟುಯಿಯಲ್ಲಿ ಮಾರ್ಚ್ ತಿಂಗಳಲ್ಲಿ ನಡೆದಿದ್ದ ಹತ್ಯಾಕಾಂಡದ ಪ್ರಮುಖ ಆರೋಪಿ ಲಲನ್ ಶೇಖ್ ಸಿಬಿಐ ಕಸ್ಟಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೊಗ್ಟುಯಿಯಲ್ಲಿ 8 ಮಂದಿ ಸಜೀವ ದಹನ ಸೇರಿ ಒಟ್ಟು 10ಮಂದಿಯ ಹತ್ಯೆ ನಡೆದು ಎಂಟು ತಿಂಗಳುಗಳೇ ಕಳೆದಿವೆ. ಈ ಕೇಸ್ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡು, ವಾರಗಳ ಹಿಂದಷ್ಟೇ ಆರೋಪಿ ಲಲನ್ ಶೇಖ್ನನ್ನು ಜಾರ್ಖಂಡ್ನ ಪಾಕುರ್ನಲ್ಲಿ ಬಂಧಿಸಿತ್ತು. ಆತನನ್ನು ಬಿರ್ಭೂಮ್ನ ರಾಂಪುರ್ಹತ್ನಲ್ಲಿರುವ ಸಿಬಿಐ ಕ್ಯಾಂಪ್ ಕಚೇರಿಯಲ್ಲಿ ಇಟ್ಟು ವಿಚಾರಣೆ ನಡೆಸಲಾಗುತ್ತಿತ್ತು. ಡಿ.12ರಂದು ಸಂಜೆ 4.30ರ ಹೊತ್ತಿಗೆ ಈತನ ಶವ ಸಿಬಿಐ ಕಚೇರಿಯ ಟಾಯ್ಲೆಟ್ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದೂ ಆತ ಅರೆಬೆತ್ತಲೆಯಾಗಿ ನೇಣು ಹಾಕಿಕೊಂಡಿದ್ದಾನೆ.
ಮಾರ್ಚ್ ತಿಂಗಳಲ್ಲಿ ಬೀರ್ಭೂಮ್ನ ಬೊಗ್ಟುಯಿ ಹಳ್ಳಿಯಲ್ಲಿ ಸ್ಥಳೀಯ ಪ್ರಭಾವಿ ತೃಣಮೂಲ ಕಾಂಗ್ರೆಸ್ ನಾಯಕ ಭದು ಶೇಖ್ ಎಂಬಾತನ ಹತ್ಯೆಯಾಗಿತ್ತು. ಈ ಹತ್ಯೆಯ ಬೆನ್ನಲ್ಲೇ ಸಿಟ್ಟಿಗೆದ್ದಿದ್ದ ಆತನ ಬೆಂಬಲಿಗರು ದೊಡ್ಡಮಟ್ಟದ ದಾಂಧಲೆ ಎಬ್ಬಿಸಿದ್ದರು. ಭದು ಶೇಖ್ನೊಂದಿಗೆ ಶತ್ರುತ್ವ ಹೊಂದಿದ್ದ ಅದೇ ಹಳ್ಳಿಯ ಸೋನಾ ಶೇಖ್ ಎಂಬಾತನ ಮನೆ ಮೇಲೆ ಮುಗಿಬಿದ್ದಿದ್ದರು. ಭದು ಹತ್ಯೆ ಮಾಡಿಸಿದ್ದೇ ಸೋನಾ ಎಂದು ಭಾವಿಸಿದ್ದ ಅವರು ಆತನ ಮನೆಗೆ ಬೆಂಕಿ ಹಚ್ಚಿದ್ದರು. ಸೋನಾ ಮನೆಯಲ್ಲಿ 8 ಮೃತದೇಹಗಳು ಸಿಕ್ಕಿದ್ದವು. ಒಟ್ಟಾರೆ 10 ಮಂದಿ ಈ ದುರ್ಘಟನೆಯಲ್ಲಿ ಮೃತರಾಗಿದ್ದರು. ಅದೇ ಕೇಸ್ನ್ನು ಸಿಬಿಐ ತನಿಖೆ ನಡೆಸುತ್ತಿದೆ. ಸೋನಾನನ್ನೂ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಒಟ್ಟಾರೆ ಸಜೀವ ದಹನದ ಮುಖ್ಯ ಆರೋಪಿ ಲಲನ್ ಸಿಂಗ್ ಎನ್ನಲಾಗಿದ್ದು, ಈತ ಹತ್ಯೆಯಾದ ಭದುವಿನ ಅತ್ಯಾಪ್ತ ಆಗಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಬಿರ್‌ಭೂಮ್ ಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಕೋಲ್ಕತ್ತಾ ಹೈಕೋರ್ಟ್ ಆದೇಶ