ಅಮೃತ್ಸರ: ‘ನೀವೆಲ್ಲ ಚೆನ್ನಾಗಿ ಓದಿ, ಪಂಜಾಬ್ ರಾಜ್ಯ ಶಾಲಾ ಶಿಕ್ಷಣ ಮಂಡಳಿ ನಡೆಸುವ ಪರೀಕ್ಷೆಯಲ್ಲಿ ಮೆರಿಟ್ ಪಟ್ಟಿಯಲ್ಲಿ ನಿಮ್ಮ ಹೆಸರು ಬರುವಷ್ಟು ಅಂಕ ಪಡೆದಿದ್ದೇ ಆದರೆ, ನೀವು ಏನು ಆಸೆ ಪಡುತ್ತೀರೋ, ಅದನ್ನು ನಾನು ನೆರವೇರಿಸುತ್ತೇನೆ’ ಎಂದು 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಭರವಸೆ ಕೊಟ್ಟಿದ್ದ ಪಂಜಾಬ್ ಫಿರೋಜ್ಪುರದ ಸರ್ಕಾರಿ ಶಾಲೆ ಪ್ರಾಂಶುಪಾಲರು ತಮ್ಮ ಮಾತು ಉಳಿಸಿಕೊಂಡಿದ್ದಾರೆ. ಮೆರಿಟ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ನಾಲ್ವರು ವಿದ್ಯಾರ್ಥಿನಿಯರಿಗೆ, ಅವರ ಆಸೆಯಂತೆ ವಿಮಾನ ಪ್ರಯಾಣ ಮಾಡಿಸಿದ್ದಾರೆ. ಸಂಪೂರ್ಣ ಖರ್ಚುವೆಚ್ಚವನ್ನು ತಾವೇ ನಿಭಾಯಿಸಿದ್ದಾರೆ.
ಫಿರೋಜ್ಪುರದಲ್ಲಿರುವ ಶಹೀದ್ ಗುರುದಾಸ ರಾಮ್ ಮೆಮೋರಿಯಲ್ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲ ರಾಕೇಶ್ ಶರ್ಮಾ ಹೀಗೊಂದು ಆಫರ್ನ್ನು ತಮ್ಮ ವಿದ್ಯಾರ್ಥಿಗಳ ಎದುರು ಇಟ್ಟಿದ್ದರು. ಅಂದಹಾಗೇ, ಇದೊಂದು ಹೆಣ್ಣುಮಕ್ಕಳ ಮಾಧ್ಯಮಿಕ ಶಾಲೆಯಾಗಿದೆ. ರಾಜ್ಯ ಶಿಕ್ಷಣ ಮಂಡಳಿ ನಡೆಸುವ ಪರೀಕ್ಷೆಯಲ್ಲಿ ಈ ಶಾಲೆಯ 10 ಮತ್ತು 12ನೇ ತರಗತಿ ವಿದ್ಯಾರ್ಥಿನಿಯರು ಒಬ್ಬರೂ ಮೆರಿಟ್ ಲಿಸ್ಟ್ನಲ್ಲಿ ಸ್ಥಾನ ಪಡೆಯುತ್ತಿರಲಿಲ್ಲ. ಮೆರಿಟ್ ಪಟ್ಟಿಗೆ ಸೇರುವಷ್ಟು ಅಂಕವನ್ನು ಪಡೆಯುವಲ್ಲಿ ವಿದ್ಯಾರ್ಥಿನಿಯರು ವಿಫಲರಾಗುತ್ತಿದ್ದರು. ಇದು ಆ ಶಾಲೆಯ ಪ್ರಾಂಶುಪಾಲರು ಮತ್ತು ಉಳಿದ ಶಿಕ್ಷಕರಿಗೆ ನಿರಾಸೆ ಮೂಡಿಸಿತ್ತು.
ಹೀಗಿರುವಾಗ ಕಳೆದ ವರ್ಷ ರಾಕೇಶ್ ಶರ್ಮಾ ಒಂದು ಹೀಗೊಂದು ಆಯ್ಕೆಯನ್ನು ವಿದ್ಯಾರ್ಥಿನಿಯರ ಎದುರು ಇಟ್ಟಿದ್ದರು. ಕಳೆದ ವರ್ಷದ 10 ಮತ್ತು 12ನೇ ತರಗತಿ ವಿದ್ಯಾರ್ಥಿನಿಯರನ್ನು ಒಂದು ದಿನ ಮೀಟಿಂಗ್ ಕರೆದು, ನೀವು ಅಂತಿಮ ಪರೀಕ್ಷೆಯಲ್ಲಿ ಚೆನ್ನಾಗಿ ಅಂಕ ತೆಗೆದು, ಮೆರಿಟ್ ಲಿಸ್ಟ್ ಸೇರಿದರೆ, ಅದು ಎಂಥದ್ದೇ ಆಸೆ ಆಗಿದ್ದರೂ ನಾನು ಪೂರೈಸುತ್ತೇನೆ ಎಂದು ಹೇಳಿದರು. ಅವರ ಯೋಜನೆ ಫಲಿಸಿತ್ತು. ವಾರ್ಷಿಕ ಪರೀಕ್ಷೆ ನಡೆದು, ಫಲಿತಾಂಶ ಹೊರಬಿದ್ದಾಗ ಎಲ್ಲರಿಗೂ ಖುಷಿಯಾಗಿತ್ತು. 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಮತ್ತು 12ನೇ ತರಗತಿಯ ಇಬ್ಬರು ಸೇರಿ ಒಟ್ಟು ನಾಲ್ವರು ಮೆರಿಟ್ ಲಿಸ್ಟ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು.
ಅಂತೆಯೇ ಪ್ರಾಂಶುಪಾಲರೂ ತಮ್ಮ ಮಾತಿಗೆ ಬದ್ಧವಾಗಿದ್ದಾರೆ. ಈ ನಾಲ್ಕೂ ವಿದ್ಯಾರ್ಥಿಗಳ ಬಯಕೆ ವಿಮಾನದಲ್ಲಿ ಪ್ರಯಾಣ ಮಾಡಬೇಕು ಎಂಬುದಾಗಿತ್ತು. ಅದಕ್ಕೆ ರಾಕೇಶ್ ಶರ್ಮಾ ಖುದ್ದಾಗಿ ಎಲ್ಲ ವ್ಯವಸ್ಥೆ ಮಾಡಿದ್ದಾರೆ. ತಮ್ಮದೇ ಖರ್ಚಲ್ಲಿ ವಿದ್ಯಾರ್ಥಿನಿಯರಿಗೆ ವಿಮಾನ ಪ್ರಯಾಣ ಮಾಡಿಸುತ್ತಿದ್ದಾರೆ. ಅಂತೆಯೇ 12ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು 2022ರ ನವೆಂಬರ್ ತಿಂಗಳಲ್ಲಿ ಅಮೃತ್ಸರ್ ವಿಮಾನ ನಿಲ್ದಾಣದಿಂದ ಗೋವಾಕ್ಕೆ ಹೋಗಿ ಅಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಇನ್ನೋವೇಶನ್ ಮತ್ತು ಇನ್ವೆನ್ಷನ್ ಎಕ್ಸ್ಪೋದಲ್ಲಿ ಪಾಲ್ಗೊಂಡಿದ್ದರು. ಅಂತೆಯೇ 10ನೇ ತರಗತಿಯ ಇಬ್ಬರು ಹೆಣ್ಣುಮಕ್ಕಳು ಇದೇ ಜನವರಿ ಕೊನೇ ವಾರದಲ್ಲಿ ದೆಹಲಿಗೆ ತೆರಳುತ್ತಿದ್ದಾರೆ. ರಾಷ್ಟ್ರಪತಿ ಭವನ, ಕೆಂಪುಕೋಟೆ ಮತ್ತಿತರ ಕಡೆಗೆ ಭೇಟಿ ಕೊಟ್ಟು, ವಾಪಸ್ ಪಂಜಾಬ್ಗೆ ತೆರಳಲಿದ್ದಾರೆ. ಸಂಪೂರ್ಣ ಖರ್ಚೂ ಪ್ರಾಂಶುಪಾಲರದ್ದೇ ಆಗಿದೆ.
ಈ ಬಗ್ಗೆ ಖುಷಿಯಿಂದ ಮಾಹಿತಿ ನೀಡಿದ ಪ್ರಾಂಶುಪಾಲ ರಾಕೇಶ್ ಶರ್ಮಾ ‘ಜಿಲ್ಲೆಯಲ್ಲಿ ನಮ್ಮ ಶಾಲೆಯೂ ಸೇರಿ ಒಟ್ಟು 56 ಶಾಲೆಗಳಿವೆ. 2019ರಲ್ಲಿ ನಾನಿಲ್ಲಿಗೆ ಸೇರಿದಾಗ ನಮ್ಮ ಶಾಲ 48ನೇ ಶ್ರೇಯಾಂಕದಲ್ಲಿ ಇತ್ತು. ಆದರೀಗ ಮೊದಲ ಸ್ಥಾನದಲ್ಲಿ ಇದೆ ಎಂಬುದೇ ಖುಷಿ. ಅದರಲ್ಲೂ ಮಕ್ಕಳು ಮೆರಿಟ್ ಲಿಸ್ಟ್ನಲ್ಲಿ ಸ್ಥಾನ ಪಡೆದಿದ್ದು ಇನ್ನೂ ಸಂತೋಷ. ಈ ಬಾರಿಯೂ ವಿದ್ಯಾರ್ಥಿನಿಯರು ಉತ್ಸುಕರಾಗಿದ್ದಾರೆ. ಅದೇನೇ ಆಗಲಿ, ಎಷ್ಟೇ ಜನ ಮೆರಿಟ್ ಪಟ್ಟಿ ಸೇರಲಿ ಅವರ ಆಸೆಯನ್ನು ನಾನು ನೆರವೇರಿಸುತ್ತೇನೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಪಂಜಾಬ್ ಆಮ್ ಆದ್ಮಿ ಸರ್ಕಾರದ ಮೊದಲ ಬಜೆಟ್ ಮಂಡನೆ; ರೈತರು, ವಿದ್ಯಾರ್ಥಿಗಳಿಗೆ ಬಂಪರ್