ನವ ದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಟ್ವೀಟ್ ಮಾಡಿ ಮಾಹಿತಿ ನೀಡಿರುವ ಅವರು, ‘ನಾನು ಮತ್ತೊಮ್ಮೆ ಕೊರೊನಾ ಸೋಂಕಿಗೆ ಒಳಗಾಗಿದ್ದೇನೆ. ಮನೆಯಲ್ಲೇ ಐಸೋಲೇಟ್ ಆಗಿ, ಚಿಕಿತ್ಸೆ ಪಡೆಯುತ್ತಿದ್ದೇನೆ ಮತ್ತು ಕೊರೊನಾಕ್ಕೆ ಸಂಬಂಧಪಟ್ಟ ಎಲ್ಲ ಶಿಷ್ಟಾಚಾರಗಳನ್ನೂ ಪಾಲಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ. ಪ್ರಿಯಾಂಕಾ ಗಾಂಧಿ ಕಳೆದ ಎರಡು ತಿಂಗಳಲ್ಲಿ ಇದು ಎರಡನೇ ಬಾರಿ ಕೊವಿಡ್ 19 ವೈರಸ್ಗೆ ಒಳಗಾಗಿದ್ದಾರೆ. ಜೂ.2ರಂದು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಯವರಲ್ಲಿ ಕೊರೊನಾ ದೃಢಪಟ್ಟಿತ್ತು. ಅದಾದ ಮರುದಿನ ಅಂದರೆ, ಜೂನ್ 3ರಂದು ಪ್ರಿಯಾಂಕಾ ಗಾಂಧಿ ವಾದ್ರಾರಲ್ಲಿಯೂ ಕೊರೊನಾ ಕಾಣಿಸಿಕೊಂಡಿತ್ತು.
ಕಳೆದ ಐದು ದಿನಗಳ ಹಿಂದೆ, ಅಂದರೆ ಆಗಸ್ಟ್ 5ರಂದು ಕಾಂಗ್ರೆಸ್ ನಾಯಕರು ರಾಷ್ಟ್ರಾದ್ಯಂತ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು. ಬೆಲೆ ಏರಿಕೆ, ಜಿಎಸ್ಟಿ ಹೆಚ್ಚಳ ವಿರೋಧಿಸಿ, ಕೇಂದ್ರ ಸರ್ಕಾರದ ವಿರುದ್ಧ ಕಪ್ಪು ಬಟ್ಟೆ ಧರಿಸಿ, ಪ್ರತಿಭಟಿಸಿ ಹೋರಾಟ ನಡೆಸಿದ್ದರು. ದೆಹಲಿಯಲ್ಲಿ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಮತ್ತಿತರ ಸಂಸದರು, ಪ್ರಮುಖ ನಾಯಕರು ರಾಷ್ಟ್ರಪತಿ ಭವನ ಚಲೋ ನಡೆಸಲು ಮುಂದಾಗಿ, ಪೊಲೀಸರಿಂದ ಬಂಧಿತರಾಗಿದ್ದರು. ಅದರಲ್ಲೂ ಪ್ರಿಯಾಂಕಾ ಗಾಂಧಿ ತುಸು ಆಕ್ರಮಣಕಾರಿಯಾಗಿಯೇ ವರ್ತಿಸಿದ್ದರು. ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳನ್ನೆಲ್ಲ ಹಾರಿ, ಮಧ್ಯ ರಸ್ತೆಯಲ್ಲಿ ರಚ್ಚೆ ಹಿಡಿದು ಕುಳಿತು ಪ್ರತಿರೋಧಿಸಿದ್ದರು. ಆಗ ಪೊಲೀಸರು ಪ್ರಿಯಾಂಕಾರನ್ನು ಎಳೆದುಕೊಂಡು ಹೋಗಿ, ಕಾರಿನಲ್ಲಿ ಕೂರಿಸಿದ್ದರು. ಇಷ್ಟೆಲ್ಲ ಪ್ರತಿಭಟನೆ ನಡೆದು ಐದು ದಿನಗಳ ಬಳಿಕ ಈಗ ಪ್ರಿಯಾಂಕಾ ಗಾಂಧಿಯವರಲ್ಲಿ ಕೊರೊನಾ ದೃಢಪಟ್ಟಿದೆ.
ಇದನ್ನೂ ಓದಿ: Congress Protest Live | ಬ್ಯಾರಿಕೇಡ್ ಹಾರಿದ ಪ್ರಿಯಾಂಕಾ ಗಾಂಧಿಯನ್ನು ಬಂಧಿಸಿದ ಪೊಲೀಸ್