ದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra)ರಿಗೆ ಕೊರೊನಾ ಸೋಂಕು ತಗುಲಿದೆ. ನಿನ್ನೆ (ಜೂ.2) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಲ್ಲಿ ಕೊರೊನಾ ದೃಢಪಟ್ಟಿತ್ತು. ಅವರಿಗೆ ಕೊರೊನಾದ ಸೌಮ್ಯ ಲಕ್ಷಣಗಳಿದ್ದು ಐಸೋಲೇಟ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ನನಗೆ ಕೊರೊನಾ ಸೋಂಕು ತಗುಲಿದ್ದು, ಸೌಮ್ಯ ಲಕ್ಷಣಗಳಿವೆ. ನಾನು ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಲಖನೌಗೆ ತೆರಳಿದ್ದರು. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪುನಶ್ಚೇತನಗೊಳಿಸುವ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಹೋಗಿದ್ದ ಅವರು ಗುರುವಾರ ಎರಡನೇ ದಿನದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಅವರು ಬುಧವಾರ ತಡರಾತ್ರಿ ವಾಪಸ್ ದೆಹಲಿಗೆ ತೆರಳಿದ್ದರು. ಯಾಕೆ ಪ್ರವಾಸ ಮೊಟಕುಗೊಳಿಸಿದರು ಎಂಬ ಬಗ್ಗೆ ಸರಿಯಾಗಿ ಮಾಹಿತಿ ಸಿಕ್ಕಿರಲಿಲ್ಲ.
ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ಉತ್ತರ ಪ್ರದೇಶದ ಉಸ್ತುವಾರಿ ಹೊತ್ತಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ವಿಧಾನಸಭೆ ಚುನಾವಣೆಗೂ ಮೊದಲಿನಿಂದಲೇ ಆ ರಾಜ್ಯದಲ್ಲಿ ಪಕ್ಷ ಬಲವರ್ಧನೆಗೆ ಒತ್ತು ನೀಡಿದ್ದರು. ಮಹಿಳೆಯರಿಗೆ ಆದ್ಯತೆ ನೀಡುವುದು, ಅವರ ಹಕ್ಕು ರಕ್ಷಣೆಯೇ ನಮ್ಮ ಆದ್ಯತೆ ಎಂಬ ತತ್ವದ ಮೇಲೆ ಚುನಾವಣೆ ಎದುರಿಸಲು ಸಿದ್ಧತೆ ಮಾಡಿದ್ದರು. ಅವರ ಎಲ್ಲ ಪ್ರಯತ್ನಗಳ ಹೊರತಾಗಿಯೂ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಸೋತಿದೆ. ಈಗ ಮತ್ತೆ ಅಲ್ಲಿ ಪಕ್ಷ ಸಂಘಟನೆಯ ಜೊತೆ, ಇರುವ ಆಂತರಿಕ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ಒಂದು ಭಾಗವಾಗಿ ಲಖನೌ ಪ್ರವಾಸದಲ್ಲಿದ್ದರು. ಈಗ ಇವರಲ್ಲಿ ಕೊರೊನಾ ಕಾಣಿಸಿಕೊಂಡಿದ್ದರಿಂದ ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದ ಕಾಂಗ್ರೆಸ್‌ನ ಇತರ ಮುಖಂಡರೂ ತಪಾಸಣೆಗೆ ಒಳಗಾಗಬೇಕು.
ಇದನ್ನೂ ಓದಿ: ಸೋನಿಯಾ ಗಾಂಧಿಗೆ ಕೊರೊನಾ ಸೋಂಕು; ಇ.ಡಿ ವಿಚಾರಣೆಗೆ ಹಾಜರಾಗೋದು ಡೌಟ್