Site icon Vistara News

ನೂಪುರ್‌ ಶರ್ಮಾ ವಿರುದ್ಧ ಪ್ರತಿಭಟನೆ; ಪೊಲೀಸರತ್ತ ಆಕ್ರೋಶದಿಂದ ಕಲ್ಲು ಎಸೆದ ಮಕ್ಕಳು !

ನವ ದೆಹಲಿ: ಪ್ರವಾದಿ ಮೊಹಮ್ಮದರ ವಿರುದ್ಧ ನೂಪುರ್‌ ಶರ್ಮಾ (Nupur Sharma) ನೀಡಿದ ಹೇಳಿಕೆ ಸೃಷ್ಟಿಸಿದ ಅವಾಂತರಗಳು (Prophet Remarks Row) ಅಷ್ಟಿಷ್ಟಲ್ಲ. ಇಡೀ ದೇಶದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟು ಹೋಗಿದೆ ಎಂದರೂ ತಪ್ಪಾಗಲಾರದು. ಟಿವಿ ಡಿಬೇಟ್‌ಗೆ ಹೋಗಿ ಪ್ರವಾದಿ ಬಗ್ಗೆ ಅವಹೇಳನ ಮಾಡಿದ್ದ ನೂಪುರ್‌ ಶರ್ಮಾರನ್ನು ಬಿಜೆಪಿ ಅಮಾನತು ಮಾಡಿಯಾಗಿದೆ. ಇದು ಆಕೆಯ ವೈಯಕ್ತಿಕ ಹೇಳಿಕೆ, ಅದಕ್ಕೂ -ಬಿಜೆಪಿಗೂ ಸಂಬಂಧವೇ ಇಲ್ಲವೆಂದು ಸ್ಪಷ್ಟನೆಯನ್ನೂ ಕೇಂದ್ರ ಸರ್ಕಾರ ಕೊಟ್ಟಾಗಿದೆ. ಆದರೆ ಆ ಹೇಳಿಕೆ ಸೃಷ್ಟಿಸಿರುವ ವಿವಾದ ಮಾತ್ರ ಶಮನವಾಗುತ್ತಿಲ್ಲ. ಮುಸ್ಲಿಂ ರಾಷ್ಟ್ರಗಳು ಭಾರತದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದರೆ, ದೇಶದೊಳಗಿನ ಮುಸ್ಲಿಮರು ಗಲಾಟೆ-ಗಲಭೆಯನ್ನೇ ಸೃಷ್ಟಿಸುತ್ತಿದ್ದಾರೆ. ಶುಕ್ರವಾರ (ಜೂ.10)ವಂತೂ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ, ಕರ್ನಾಟಕ ಸೇರಿ ದೇಶದ ಅನೇಕ ಭಾಗಗಳಲ್ಲಿ ದೊಡ್ಡಮಟ್ಟದಲ್ಲಿಯೇ ಪ್ರತಿಭಟನೆ ನಡೆದು, ಅದು ಹಿಂಸಾಚಾರ ಸ್ವರೂಪ ಪಡೆದುಕೊಂಡಿತ್ತು. ರಾಂಚಿಯಲ್ಲಿ ಇಬ್ಬರ ಜೀವ ಕೂಡ ಹೋಗಿದೆ.

ಈ ಮಧ್ಯೆ ಪೊಲೀಸರು ಈಗೊಂದು ಆತಂಕಕಾರಿ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಪ್ರವಾದಿ ಅವಹೇಳನ ವಿರೋಧಿಸಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಪೊಲೀಸರು ಮತ್ತು ಸ್ಥಳೀಯ ಆಡಳಿತಾಧಿಕಾರಿಗಳ ಮೇಲೆ ಪ್ರತಿಭಟನಾಕಾರರು ಕಲ್ಲುತೂರಾಟ ನಡೆಸಿದ್ದರು. ಈ ಕಲ್ಲು ತೂರಾಟಕ್ಕೆ ಮಕ್ಕಳನ್ನೂ ಕೂಡ ಬಳಸಿಕೊಳ್ಳಲಾಗಿದೆ. ಚಿಕ್ಕಚಿಕ್ಕ ಮಕ್ಕಳೂ ಸಹ ಪೊಲೀಸರತ್ತ ಆಕ್ರೋಶದಿಂದ ಕಲ್ಲು ಎಸೆಯುತ್ತಿದ್ದರು ಎಂದು ಸ್ಥಳೀಯ ಪೊಲೀಸ್‌ ಅಧಿಕಾರಿ ಅಜಯ್‌ ಕುಮಾರ್‌ ತಿಳಿಸಿದ್ದಾರೆ. ʼಪ್ರತಿಭಟನೆ ಬೇರೆಯದ್ದೇ ಸ್ವರೂಪ ಪಡೆದುಕೊಂಡಿದೆ. ಸಮಾಜ ಘಾತುಕ ಶಕ್ತಿಗಳು ತಮ್ಮ ಸ್ವಾರ್ಥ ಸಾಧನೆಗೆ ಪುಟ್ಟ ಮಕ್ಕಳನ್ನೂ ಬಳಸಿಕೊಳ್ಳುತ್ತಿವೆ. ಸುಮಾರು 29 ಕಾಯ್ದೆಗಳಡಿ ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ತನಿಖೆಯೂ ಪ್ರಾರಂಭವಾಗಿದೆʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೂಪುರ್‌ ಶರ್ಮಾಗೆ ನೆದರ್‌ಲ್ಯಾಂಡ್‌ ಸಂಸದನ ಬೆಂಬಲ; ಭಾರತೀಯರು ಒಗ್ಗಟ್ಟಾಗಲು ಕರೆ

ಪ್ರಯಾಗ್‌ ರಾಜ್‌ನಲ್ಲಿ ಶುಕ್ರವಾರ ಪರಿಸ್ಥಿತಿ ಗಂಭೀರವಾಗಿತ್ತು. ಪ್ರತಿಭಟನಾಕಾರರು ಅಕ್ಷರಶಃ ರೊಚ್ಚಿಗೆದ್ದಿದ್ದು. ಸಿಕ್ಕಸಿಕ್ಕ ಬೈಕ್‌, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಮುಖ್ಯ ರಸ್ತೆಗಳು ಸೇರಿ ಬಹುತೇಕ ಕಡೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇಲ್ಲಿ ನಡೆದ ಹಿಂಸಾಚಾರದ ಮುಖ್ಯ ರೂವಾರಿ ಮೊಹಮ್ಮದ್ ಜಾವೇದ್ ಅಲಿಯಾಸ್ ಜಾವೇದ್ ಪಂಪ್ ಎಂಬಾತ ಎಂದು ಪೊಲೀಸರು ಗುರುತಿಸಿದ್ದು, ಈತನ ವಿರುದ್ಧ ಗ್ಯಾಂಗ್‌ಸ್ಟರ್‌ ಕಾಯ್ದೆಯಡಿ ಕೇಸ್‌ ದಾಖಲು ಮಾಡಿದ್ದಾರೆ. ಗಲಭೆಗೆ ಸಂಬಂಧಪಟ್ಟಂತೆ ಇಲ್ಲಿಯವರೆಗೆ 37 ಮಂದಿಯನ್ನು ಬಂಧಿಸಲಾಗಿದೆ. 500ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಇದರಲ್ಲಿ ಅಪ್ರಾಪ್ತರೂ ಸೇರಿದ್ದಾರೆ.

ಇದನ್ನೂ ಓದಿ: ನೂಪುರ್‌ ಶರ್ಮಾ ಬಂಧನ ಆಗ್ರಹಿಸಿ ರಾಜ್ಯದ ಹಲವೆಡೆ ಪ್ರತಿಭಟನೆ, ಬೆಳಗಾವಿಯಲ್ಲಿ ಪ್ರತಿಕೃತಿಗೆ ಗಲ್ಲು

Exit mobile version