ಇಂದೋರ್: ವಿವಾದಿತ ಹಿಂದಿ ಸಿನಿಮಾ ಪಠಾಣ್ ಬುಧವಾರ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಶಾರುಖ್ ಖಾನ್- ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾ (Pathaan Movie)ದಲ್ಲಿನ ‘ಬೇಷರಮ್ ರಂಗ್ (ನಾಚಿಕೆಯಿಲ್ಲದ ಬಣ್ಣ)’ (Besharam Rang) ಎಂಬ ಹಾಡು ಮತ್ತು ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿದ್ದು ಹಿಂದು ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಕೇಸರಿ ಬಣ್ಣ ಹಿಂದುಗಳ ಭಾವನೆಗೆ ಹತ್ತಿರವಾದ ಬಣ್ಣ. ಆದರೆ ಪಠಾಣ್ ಸಿನಿಮಾ(Pathaan Film)ದಲ್ಲಿ ಅದೇ ಬಣ್ಣದ ತುಂಡುಡುಗೆ ಹಾಕಿಸಿ, ಅವಮಾನಿಸಲಾಗಿದೆ ಎಂಬುದೇ ಹಿಂದೂ ಪರ ಸಂಘಟನೆಗಳ ತೀವ್ರ ಅಸಮಾಧಾನವಾಗಿತ್ತು.
ವಿವಾದಗಳ ಮಧ್ಯೆಯೇ ಇಂದು ಪಠಾಣ್ ತೆರೆಕಂಡಿದೆ. ಚಿತ್ರದಲ್ಲಿ ಕೆಲವು ತುಣುಕುಗಳನ್ನು ಕತ್ತರಿಸಿ, ತೆರೆಗೆ ಬಿಡಲಾಗಿದೆ ಎಂದು ಹೇಳಲಾಗಿದೆ. ಆದರೂ, ಇಂದು ಚಿತ್ರ ಬಿಡುಗಡೆಯಾಗುತ್ತಿದ್ದಂತೆ ದೇಶದ ಹಲವು ಕಡೆಗಳಲ್ಲಿ ವಿವಿಧ ಹಿಂದು ಪರ ಸಂಘಟನೆಗಳವರು ದೊಡ್ಡಮಟ್ಟದ ಪ್ರತಿಭಟನೆಯನ್ನೂ ಮಾಡಿದ್ದಾರೆ. ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶದಲ್ಲೆಲ್ಲ ಪ್ರತಿಭಟನೆಯಾಗಿದೆ.
ಇಂದು ಬೆಳಗ್ಗೆ ಪಠಾಣ್ ಬಿಡುಗಡೆಯಾಗುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಜರಂಗ ದಳದ ಕೆಲವು ಸದಸ್ಯರು ಆಕ್ಷೇಪಾರ್ಹ ಘೋಷಣೆ ಕೂಗಿದ್ದಾರೆ. ಈ ವಿಡಿಯೊ ವೈರಲ್ ಆದ ಬೆನ್ನಲ್ಲೇ ಮುಸ್ಲಿಂ ಜನಾಂಗದವರು ಕಿಡಿಕಾರಿದರು. ನೂರಾರು ಮುಸ್ಲಿಮರು ಇಂದೋರ್ನಲ್ಲಿರುವ ಚಂದನ್ ನಗರ ಪೊಲೀಸ್ ಸ್ಟೇಶನ್ ಸುತ್ತುವರಿದರು. ಅನೇಕ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನೆಲ್ಲ ಮುಚ್ಚಿ ಪ್ರತಿಭಟನೆಗೆ ಆಗಮಿಸಿ, ಬಜರಂಗದಳದ ಕಾರ್ಯಕರ್ತರನ್ನು ಬಂಧಿಸುವಂತೆ ಆಗ್ರಹಿಸಿದರು. ಇನ್ನು ವೈರಲ್ ವಿಡಿಯೊವನ್ನು ಸುಮೊಟೊ ಕ್ರಮಕ್ಕೆ ಕೈಗೆತ್ತಿಕೊಂಡ ಇಂದೋರ್ ಪೊಲೀಸ್ ಆಯುಕ್ತರು, ಆಕ್ಷೇಪಾರ್ಹ ಘೋಷಣೆ ಕೂಗಿದವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸೂಚಿಸಿದರು. ಅದರ ಅನ್ವಯ ಈಗ ಅವರೆಲ್ಲರ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಂತರ ಮುಸ್ಲಿಮರು ಪ್ರತಿಭಟನೆ ನಿಲ್ಲಿಸಿದ್ದಾರೆ.
ಬಿಹಾರದಲ್ಲಿ ಪಠಾಣ್ ಪೋಸ್ಟರ್ಗೆ ಬೆಂಕಿ
ಬೆಳಗ್ಗೆ ಪಠಾಣ್ ಬಿಡುಗಡೆಯಾಗುತ್ತಿದ್ದಂತೆ ಬಿಹಾರದಲ್ಲೂ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿದೆ. ಬಹುತೇಕ ಎಲ್ಲ ಸಿನಿಮಾ ಹಾಲ್ಗ ಹೊರಗೂ ಪ್ರತಿಭಟನೆ ನಡೆಸಿದ್ದಾರೆ. ಅದರಲ್ಲೂ ಬಾಗಲ್ಪುರದ ಸಿನಿಮಾ ಥಿಯೇಟರ್ ಹೊರಗೆ ಇನ್ನಷ್ಟು ತೀವ್ರ ಸ್ವರೂಪದ ಪ್ರತಿಭಟನೆ ನಡೆದಿದೆ. ಅಲ್ಲಿ ಹಾಕಿದ್ದ ಪಠಾಣ್ ಪೋಸ್ಟರ್ಗಳನ್ನು ಹರಿದು ಬಿಸಾಕಿ ಅದಕ್ಕೆ ಬೆಂಕಿ ಹಾಕಿದ್ದಾರೆ. ಪೊಲೀಸರು ಪರಿಸ್ಥಿತಿ ನಿಯಂತ್ರಣ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ