ಸಂಘರ್ಷ ಪೀಡಿತ ಮಣಿಪುರದಲ್ಲಿ (Manipur violence) ರಾಹುಲ್ ಗಾಂಧಿ (Rahul Gandhi) ಕಾಲಿಡುತ್ತಿದ್ದಂತೆ ಅಲ್ಲಿ ಪ್ರತಿಭಟನೆಯೂ ನಡೆದಿದೆ. ರಾಹುಲ್ ಗಾಂಧಿ ಇಂಫಾಲ್ ತಲುಪುತ್ತಿದ್ದಂತೆ (Rahul Gandhi Manipur Visit) ಒಂದಷ್ಟು ಜನರು ‘ಗೋ ಬ್ಯಾಕ್ ರಾಹುಲ್ ಗಾಂಧಿ’ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಇನ್ನು ರಾಹುಲ್ ಗಾಂಧಿಯವರು ಇಂಫಾಲ್ನಿಂದ ಚುರಾಚಾಂದ್ಪುರದಲ್ಲಿರುವ ಆಶ್ರಯ ಕೇಂದ್ರಗಳಿಗೆ ಹೊರಟಾಗ ಅವರನ್ನು ಬಿಷ್ಣುಪುರ ಎಂಬಲ್ಲಿ ಮಣಿಪುರ ಪೊಲೀಸರು ತಡೆದಿದ್ದಾರೆ. ಭದ್ರತೆಯ ಕಾರಣಕ್ಕೆ ರಾಹುಲ್ ಗಾಂಧಿ ಚುರಾಚಾಂದ್ಪುರಕ್ಕೆ (Rahul Gandhi Churachandpur Visit) ಹೋಗುವುದನ್ನು ತಡೆದಿದ್ದೇವೆ ಎಂದು ಪೊಲೀಸರು ಹೇಳಿದ್ದರು.
ಆದರೆ ಅಲ್ಲಿನ ಮಹಿಳೆಯರು ಪೊಲೀಸರ ವಿರುದ್ಧವೇ ತಿರುಗಿಬಿದ್ದಿದ್ದಾರೆ. ರಾಹುಲ್ ಗಾಂಧಿಯನ್ನು ಚುರಾಚಾಂದ್ಪುರಕ್ಕೆ ಹೋಗಲು ಬಿಡಬೇಕು. ಅವರನ್ನು ತಡೆದಿದ್ದೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ವಾಪಸ್ ಹೋಗಲಿ ಎಂದು ಒಂದಷ್ಟು ಜನರು ಪ್ರತಿಭಟಿಸಿದರೆ, ಅವರನ್ನು ಚುರಾಚಾಂದ್ಪುರಕ್ಕೆ ಹೋಗಲು ಬಿಡಿ ಎಂದು ಇನ್ನೊಂದಷ್ಟು ಮಂದಿ ಪೊಲೀಸರನ್ನು ಆಗ್ರಹಿಸಿದರು. ಈ ವೇಳೆ ದೊಡ್ಡಮಟ್ಟದಲ್ಲಿ ಗಲಾಟೆ-ಗಲಭೆ ನಡೆದ ಕಾರಣ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಅಶ್ರುವಾಯು ಪ್ರಯೋಗ ಮಾಡಿದರು. ರಾಹುಲ್ ಗಾಂಧಿ ಮಣಿಪುರಕ್ಕೆ ಕಾಲಿಡುತ್ತಿದ್ದಂತೆ ಪ್ರತಿಭಟನೆ ಮತ್ತೊಂದು ಸ್ವರೂಪವನ್ನೇ ಪಡೆಯಿತು. ಅದಾದ ಮೇಲೆ ರಾಹುಲ್ ಗಾಂಧ ಬಿಷ್ಣುಪುರದಿಂದ ವಾಪಸ್ ಕಾರಿನಲ್ಲಿ ಇಂಫಾಲ್ಗೆ ಬಂದಿದ್ದಾರೆ. ಇಂಫಾಲ್ನಿಂದ ಅವರು ಹೆಲಿಕಾಪ್ಟರ್ ಮೂಲಕ ಚುರಾಚಾಂದ್ಪುರ ಆಶ್ರಯ ಕೇಂದ್ರಕ್ಕೆ ಹೋಗಲಿದ್ದಾರೆ.
ಇಂದೂ ಒಬ್ಬನ ಸಾವು
ಮೈತೈ ಸಮುದಾಯಕ್ಕೆ ಎಸ್ಟಿ ಸ್ಥಾನಮಾನ ಕೊಡುವ ವಿಷಯದಲ್ಲಿ ಶುರುವಾದ ಪ್ರತಿಭಟನೆ ಇದೀಗ ಹಿಂಸಾಚಾರದ ಮಿತಿಮೀರಿದ ಹಂತ ತಲುಪಿದೆ. ಮೇ 3ರಿಂದ ಶುರುವಾದ ಕುಕಿ ಸಮುದಾಯ ಮತ್ತು ಮೈತೈಗಳ ನಡುವಿನ ಕಾದಾಟ ಇಡೀ ಮಣಿಪುರವನ್ನು ಕಿತ್ತು ತಿನ್ನುತ್ತಿದೆ. ಇಂದು ಬೆಳಗ್ಗೆ ಕೂಡ ಇಂಫಾಲ್ನ ಪಶ್ಚಿಮ ಜಿಲ್ಲೆಯ ಹಳ್ಳಿಯೊಂದರಲ್ಲಿ ಫೈರಿಂಗ್ ಆಗಿದೆ. ಈ ಹಿಂಸಾಚಾರದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಈ ಘಟನೆ ನಡೆದು ಕೆಲವೇ ಹೊತ್ತಲ್ಲಿ ರಾಹುಲ್ ಗಾಂಧಿ ಮಣಿಪುರಕ್ಕೆ ತಲುಪಿದ್ದಾರೆ.
ಬಿಜೆಪಿ ವಾಗ್ದಾಳಿ
ರಾಹುಲ್ ಗಾಂಧಿಯವರನ್ನು ರಸ್ತೆ ಮಾರ್ಗವಾಗಿ ಬಿಡದ ಪೊಲೀಸರ ವಿರುದ್ಧ, ಮಣಿಪುರ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಬಿಷ್ಣುಪುರಕ್ಕಿಂತಲೂ ಮುಂದೆ ಇದೇ ಮಾರ್ಗದಲ್ಲಿ ಟೈಯರ್ ಸುಡಲಾಗುತ್ತಿದೆ. ಗ್ರೆನೇಡ್ ಎಸೆಯುವ ಸಾಧ್ಯತೆಯೂ ಇದೆ. ಹೀಗಾಗಿ ನಾವು ರಾಹುಲ್ ಗಾಂಧಿಯನ್ನು ತಡೆಯುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದರೂ ಕಾಂಗ್ರೆಸ್ ಕಿಡಿ ಕಾರಿದೆ. ರಾಹುಲ್ ಗಾಂಧಿ ಮಣಿಪುರಕ್ಕೆ ಬಂದಿದ್ದು ಇಲ್ಲಿನ ಜನರ ಕಣ್ಣೀರು ಒರೆಸಲು. ನಾವು ನಿಮ್ಮೊಂದಿಗೆ ಇದ್ದೇವೆ ಎಂಬ ಭರವಸೆಯನ್ನು ಕೊಡಲು. ಆದರೂ ಇಲ್ಲಿನ ಸರ್ಕಾರ, ಪೊಲೀಸರು ಅವರನ್ನು ತಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Rahul Gandhi: ಮೋದಿ ಚಾಯ್‌ವಾಲಾ ಆದರೆ, ರಾಹುಲ್ ಗಾಂಧಿ ಬೈಕ್ ರಿಪೇರಿವಾಲಾ; ಸಿಕ್ಕಿದೆ ಸಾಕ್ಷಿ
ಹಾಗೇ ಇನ್ನೊಂದೆಡೆ ಬಿಜೆಪಿ ರಾಹುಲ್ ಗಾಂಧಿ ಭೇಟಿಯನ್ನು ವ್ಯಂಗ್ಯ ಮಾಡಿದೆ. ’ಈ ಹಿಂದೆ ಕಾಂಗ್ರೆಸ್ ಮಾಡಿದ ಎಡವಟ್ಟುಗಳ ಕಾರಣಕ್ಕೇ ಇಂದು ಮಣಿಪುರ ಹೊತ್ತಿ ಉರಿಯುತ್ತಿದೆ. ಈಗ ರಾಹುಲ್ ಗಾಂಧಿ ಮತ್ತೆ ಇಲ್ಲಿಗೆ ಬಂದಿದ್ದಾರೆ. ರಾಹುಲ್ ಗಾಂಧಿ ಮತ್ತು ಜವಾಬ್ದಾರಿ ಎರಡೂ ಒಟ್ಟಿಗೇ ಪ್ರಯಾಣ ಮಾಡಲು ಎಂದಿಗೂ ಸಾಧ್ಯವಿಲ್ಲ. ಇಲ್ಲಿನ ಆಲ್ ಮಣಿಪುರ ಸ್ಟುಡೆಂಟ್ಸ್ ಯೂನಿಯನ್ನವರು ನಿನ್ನೆಯೇ ಸುದ್ದಿಗೋಷ್ಠಿ ನಡೆಸಿ, ರಾಹುಲ್ ಗಾಂಧಿ ಮಣಿಪುರಕ್ಕೆ ಬರುವುದನ್ನು ವಿರೋಧಿಸಿದ್ದರು’ ಎಂದು ಬಿಜೆಪಿ ನಾಯಕ ಸಂಬಿತ್ ಪಾತ್ರ ಹೇಳಿದ್ದಾರೆ.