Site icon Vistara News

Prophet Remarks | ರಾಜಾ ಸಿಂಗ್​ ಕಂಡಲ್ಲಿ ಹೊಡೆಯಿರಿ ಎಂದು ಮುಸ್ಲಿಮರಿಗೆ ಕರೆಕೊಟ್ಟ ಕಾಂಗ್ರೆಸ್​ ಶಾಸಕ

T Raja

ಹೈದರಾಬಾದ್​: ಪ್ರವಾದಿ ಮೊಹಮ್ಮದ್​ ವಿರುದ್ಧ ಮಾತನಾಡಿ (Prophet Remarks) ವಿವಾದ ಹುಟ್ಟುಹಾಕಿ, ಬಂಧಿತರಾದ್ದ ತೆಲಂಗಾಣ ಬಿಜೆಪಿ ಮಾಜಿ ನಾಯಕ ಟಿ.ರಾಜಾ ಸಿಂಗ್​​ ಬಗ್ಗೆ ಕಾಂಗ್ರೆಸ್​ ನಾಯಕ ಫಿರೋಜ್​ ಖಾನ್ ಆಡಿರುವ ಮಾತಿನ ವಿಡಿಯೋ ಈಗ ಎಲ್ಲ ಕಡೆ ವೈರಲ್ ಆಗುತ್ತಿದೆ. ‘ಪ್ರವಾದಿ ಮೊಹಮ್ಮದ್​ರು ಮುಸ್ಲಿಂ ಸಮುದಾಯದ ಅತ್ಯಂತ ಪ್ರಮುಖ ನಾಯಕ. ಅವರಿಗೇ ಅವಹೇಳನ ಮಾಡಿದ ಟಿ.ರಾಜಾ ಸಿಂಗ್ ಕೂಡಲೇ ಕ್ಷಮೆ ಕೇಳಬೇಕು’ ಎಂದು ಫಿರೋಜ್​ ಖಾನ್​ ಆಗ್ರಹಿಸಿದ್ದಾರೆ. ಅದರ ಜತೆಗೆ, ‘ಹಾಗೊಮ್ಮೆ ರಾಜಾ ಸಿಂಗ್ ಕ್ಷಮೆ ಕೇಳದೆ ಇದ್ದರೆ, ಅವರು ಕಂಡಲ್ಲಿ ಹೊಡೆಯಿರಿ. ನಾವು ಈ ವಿಚಾರದಲ್ಲಿ ಎಷ್ಟು ಸಲ ಬೇಕಾದರೂ ಕಾನೂನು ಕೈಗೆತ್ತಿಕೊಳ್ಳಬಹುದು’ ಎಂದೂ ಹೇಳಿದ್ದನ್ನು ವಿಡಿಯೋದಲ್ಲಿ ಕೇಳಬಹುದು.

‘ಪ್ರವಾದಿ ಮೊಹಮ್ಮದ್​​ರು ನಮ್ಮ ಪಾಲಿನ ಹೀರೋ. ಆದರೆ ಪ್ರವಾದಿ ವಿಚಾರವನ್ನು ಟಿ ರಾಜಾ ಸಿಂಗ್​ ಅವರು ರಾಜಕೀಯಗೊಳಿಸುತ್ತಿದ್ದಾರೆ. ಆದಷ್ಟು ಶೀಘ್ರವೇ ಅವರು ಕ್ಷಮೆ ಯಾಚಿಸಬೇಕು. ಹಾಗೊಮ್ಮೆ ಅವರು ಕ್ಷಮೆ ಕೇಳದೆ ಇದ್ದರೆ, ಕಂಡಲ್ಲಿ ಹೊಡೆಯಿರಿ ಎಂದು ಹೈದರಾಬಾದ್​ನ ಪ್ರತಿಯೊಬ್ಬ ಮುಸ್ಲಿಮರಿಗೂ ನಾನು ಹೇಳುತ್ತಿದ್ದೇನೆ. ಈ ವಿಚಾರದಲ್ಲಿ ಒಂದು ಸಲ ಅಲ್ಲ, ನಾವೆಷ್ಟು ಬಾರಿ ಬೇಕಾದರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಹುದು’ ಎಂದು ಅವರು ಸ್ಪಷ್ಟವಾಗಿ ಹೇಳುವುದು ವಿಡಿಯೋದಲ್ಲಿ ಕೇಳಿಸುತ್ತದೆ.

ರಾಜಾ ಸಿಂಗ್​ ಬಿಜೆಪಿ ಶಾಸಕರಾಗಿದ್ದರು. ಅವರು ಪ್ರವಾದಿ ಮೊಹಮ್ಮದ್​ ವಿರುದ್ಧ ಮಾತನಾಡಿದ ವಿಡಿಯೋ ಮಂಗಳವಾರ (ಆಗಸ್ಟ್​ 23) ಭರ್ಜರಿ ವೈರಲ್ ಆಗಿತ್ತು. ಅಷ್ಟಾದ ಬೆನ್ನಲ್ಲೇ ಹೈದರಾಬಾದ್​ನ ಅನೇಕ ಕಡೆಗಳಲ್ಲಿ ಮುಸ್ಲಿಮರು ತೀವ್ರ ಪ್ರತಿಭಟನೆ ನಡೆಸಿದ್ದರು. ರಾಜಾ ಸಿಂಗ್​ ಶಿರಚ್ಛೇದ ಮಾಡಬೇಕು ಎಂಬ ಕೂಗು ಕೇಳಿಬಂದಿತ್ತು. ರಾಜಾ ಸಿಂಗ್​ ವಿರುದ್ಧ ಮುಸ್ಲಿಂ ಮುಖಂಡರು ದೂರು ಕೂಡ ಕೊಟ್ಟಿದ್ದರು. ಎಫ್​ಐಆರ್ ದಾಖಲಿಸಿದ ಪೊಲೀಸರು ಅವರನ್ನು ಬಂಧಿಸಿ ಕರೆದುಕೊಂಡು ಹೋಗಿದ್ದರು. ರಾಜಾ ಸಿಂಗ್ ಬಂಧನದ ಬೆನ್ನಲ್ಲೇ ಅವರನ್ನು ಬಿಜೆಪಿ ಪಕ್ಷದಿಂದ ಅಮಾನತು ಮಾಡಿದೆ.

ಟಿ.ರಾಜಾ ಸಿಂಗ್​ ವಿರುದ್ಧದ ಪ್ರತಿಭಟನೆ ಕಾವು ಇಂದು ಕೂಡ ಹೈದರಾಬಾದ್​ನಲ್ಲಿ ಮುಂದುವರಿದಿದೆ. ರಾಜಾ ಸಿಂಗ್​​​ಗೆ ಸ್ಥಳೀಯ ನ್ಯಾಯಾಲಯ ಮಂಗಳವಾರ ರಾತ್ರಿಯೇ ಜಾಮೀನು ನೀಡಿದೆ. ಇದು ಮುಸ್ಲಿಂ ಸಮುದಾಯದವರನ್ನು ಮತ್ತಷ್ಟು ಕೆರಳಿಸಿದೆ. ರಾಜಾ ಸಿಂಗ್​​ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಹೈದರಾಬಾದ್​ನ ಅನೇಕ ಕಡೆಗಳಲ್ಲಿ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿದ್ದಾರೆ. ರಾಜಾ ಸಿಂಗ್​ ಅವರ ಪ್ರತಿಕೃತಿಗಳನ್ನು ದಹಿಸಿದ್ದಾರೆ.

ನಾನೇನೂ ತಪ್ಪು ಮಾಡಿಲ್ಲವೆಂದ ರಾಜಾ ಸಿಂಗ್​
ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ರಾಜಾ ಸಿಂಗ್​​ ಹೇಳಿಕೆ ನೀಡಿ, ‘ನಾನು ಯಾವುದೇ ಧರ್ಮ ಅಥವಾ ವ್ಯಕ್ತಿಯ ಬಗ್ಗೆ ಅವಹೇಳನ ಮಾಡಿಲ್ಲ. ನನ್ನನ್ನು ನನ್ನ ಪಕ್ಷ ಅರ್ಥ ಮಾಡಿಕೊಳ್ಳುತ್ತದೆ ಎಂಬ ನಂಬಿಕೆ ಖಂಡಿತ ಇದೆ ಎಂದು ಹೇಳಿದ್ದಾರೆ. ಬಿಜೆಪಿ ನೀಡಿರುವ ಶೋಕಾಸ್​ ನೋಟಿಸ್ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜಾ ಸಿಂಗ್​, ‘ನಾನು ಕೊಟ್ಟಿರುವ ಸ್ಪಷ್ಟನೆಯನ್ನು ಪಕ್ಷ ಒಪ್ಪಿಕೊಳ್ಳುತ್ತದೆ. ನನ್ನನ್ನು ಕೈಬಿಡುವುದಿಲ್ಲ ಎಂಬ ಭರವಸೆ ನನಗೆ ಇದೆ. ಹಾಗೊಮ್ಮೆ ಮನವರಿಕೆ ಆಗದೆ ಇದ್ದಲ್ಲಿ, ನಾನೇನೂ ಮಾಡಲು ಸಾಧ್ಯವಿಲ್ಲ’ ಎಂದೂ ತಿಳಿಸಿದ್ದಾರೆ.

‘ನಿನ್ನನ್ನು ಕೊಲ್ಲುತ್ತೇವೆ ಎಂದು ಹೇಳಿ ಇದುವರೆಗೆ ಸುಮಾರು 4 ಸಾವಿರ ಕರೆಗಳು, ಮೆಸೇಜ್​ಗಳು ಬಂದಿವೆ. ಇದು ಈಗಿನ ಕಥೆಯಲ್ಲ. ಹಲವು ವರ್ಷಗಳಿಂದ ನನಗೆ ಈ ಬೆದರಿಕೆ ಸಾಮಾನ್ಯವಾಗಿಬಿಟ್ಟಿದೆ. ನಾನು ಅದನ್ನೆಲ್ಲ ನಿರ್ಲಕ್ಷ್ಯ ಮಾಡುತ್ತಲೇ ಬಂದಿದ್ದೇನೆ. ಅಲ್ಲೆಲ್ಲೋ ಕುಳಿತು ಕರೆ ಮಾಡುವವರು, ಇವತ್ತಿನವರೆಗೆ ನನ್ನ ಮನೆಯನ್ನಾಗಿ, ನಾನಿರುವ ಏರಿಯಾ ಪ್ರವೇಶಿಸುವುದಕ್ಕಾಗಲೀ ಇದುವರೆಗೆ ಧೈರ್ಯ ತೋರಿಸಿಲ್ಲ’ ಎಂದೂ ರಾಜಾ ಸಿಂಗ್​ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಪ್ರವಾದಿ ಮೊಹಮ್ಮದ್​ಗೆ ಅವಹೇಳನ; ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ಪಕ್ಷದಿಂದಲೇ ಅಮಾನತು

Exit mobile version