ನವ ದೆಹಲಿ: ಭಾರತ್ ಜೋಡೋ ಯಾತ್ರೆ ಡಿಸೆಂಬರ್ 24ರಂದು ರಾಷ್ಟ್ರರಾಜಧಾನಿ ದೆಹಲಿಗೆ ಆಗಮಿಸಿದಾಗಿನಿಂದಲೂ ಹಲವು ಬಾರಿ ರಾಹುಲ್ ಗಾಂಧಿ ಭದ್ರತೆಯಲ್ಲಿ ವೈಫಲ್ಯ ಉಂಟಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕು ಮತ್ತು ರಾಹುಲ್ ಗಾಂಧಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಗೃಹ ಸಚಿವ ಅಮಿತ್ ಶಾ ಅವರಿಗೆ ಕಾಂಗ್ರೆಸ್ನಿಂದ ಪತ್ರ ಬರೆಯಲಾಗಿದೆ.
ಈ ಪತ್ರದಲ್ಲಿ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಹೆಸರು-ಸಹಿ ಇದೆ. ‘ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಡಿಸೆಂಬರ್ 24ರಂದು ದೆಹಲಿ ಪ್ರವೇಶಿಸಿದೆ. ಆಗಿನಿಂದಲೂ ರಾಹುಲ್ ಗಾಂಧಿ ಭದ್ರತೆ ವಿಷಯದಲ್ಲಿ ನಾವು ಹಲವು ಬಾರಿ ರಾಜಿಯಾಗಿದ್ದೇವೆ. ರಾಹುಲ್ ಗಾಂಧಿಗೆ Z ಪ್ಲಸ್ ಕೆಟೆಗರಿ ಭದ್ರತೆ ಇದ್ದಾಗ್ಯೂ, ಅವರಿಗೆ ಸೂಕ್ತ ರಕ್ಷಣೆ ಸಿಗಲಿಲ್ಲ. ರಾಹುಲ್ ಗಾಂಧಿ ಯಾತ್ರೆ ನಡೆಯುತ್ತಿದ್ದಾಗ ಉಂಟಾದ ಜನದಟ್ಟಣೆಯನ್ನು ತಡೆಯಲು ದೆಹಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ. ಆ ಜನಸಂದಣಿ ಮಧ್ಯೆ ಯಾತ್ರೆಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕರ್ತರೇ ರಾಹುಲ್ ಗಾಂಧಿ ಸುತ್ತ ಭದ್ರತಾ ವಲಯ ಸೃಷ್ಟಿಸಿದರು. ಈ ಮೂಲಕ ಅವರಿಗೆ ರಕ್ಷಣೆ ಒದಗಿಸಿದರು. ಅದೆಲ್ಲವನ್ನೂ ದೆಹಲಿ ಪೊಲೀಸರು ಸುಮ್ಮನೆ ನಿಂತು ನೋಡುತ್ತಿದ್ದರು. ಇಷ್ಟೆಲ್ಲದರ ಮಧ್ಯೆ ಪಾದಯಾತ್ರೆಯಲ್ಲಿ ಪಾಲ್ಗೊಂಡವರನ್ನೇ ಗುಪ್ತಚರ ಇಲಾಖೆ ವಿಚಾರಣೆ ನಡೆಸಿದೆ ಎಂದು ವೇಣುಗೋಪಾಲ್ ಅವರು ಪತ್ರದಲ್ಲಿ ದೂರಿದ್ದಾರೆ.
ಈ ದೇಶದಲ್ಲಿ ಸಾಮರಸ್ಯ ಮತ್ತು ಶಾಂತಿ ಸ್ಥಾಪನೆಗಾಗಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ನಡೆಸುತ್ತಿದೆ. ಇದರಲ್ಲಿ ಬಿಜೆಪಿ ರಾಜಕೀಯ ದ್ವೇಷ ತೋರಿಸಬಾರದು. ಮುಂದಿನ ದಿನಗಳಲ್ಲಿ ಭಾರತ್ ಜೋಡೋ ಯಾತ್ರೆ ಪಂಜಾಬ್-ಜಮ್ಮು ಮತ್ತು ಕಾಶ್ಮೀರದಂಥ ಸೂಕ್ಷ್ಮ ಪ್ರದೇಶಗಳಿಗೆ ಕಾಲಿಡಲಿದೆ. ಹೀಗಾಗಿ ರಾಹುಲ್ ಗಾಂಧಿ ಭದ್ರತೆ ವಿಷಯದಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ‘ಸಚಿನ್ ಪೈಲಟ್ರಂಥ ಸಿಎಂ ಬೇಕು’; ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಎದುರೇ ಮೊಳಗಿತು ಯುವಕರ ಘೋಷಣೆ