ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದುಗೊಳಿಸಿದ (Article 370) ಕೇಂದ್ರ ಸರ್ಕಾರದ ತೀರ್ಮಾನ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ 11ನೇ ದಿನ ಮುಂದುವರಿಸಿದೆ. ಇದೇ ವೇಳೆ ಕೇಂದ್ರ ಸರ್ಕಾರವು ವಿಧಿ ರದ್ದುಗೊಳಿಸಲು ಏನು ಕಾರಣ ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸಿದೆ. “ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ಆತ್ಮಾಹುತಿ ದಾಳಿಯೇ (Pulwama Terror Attack) 370ನೇ ವಿಧಿ ರದ್ದುಗೊಳಿಸಲು ಕಾರಣ” ಎಂದು ತಿಳಿಸಿದೆ.
ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಇದೇ ವೇಳೆ ಅವರು, “ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ 40 ಯೋಧರು ಹುತಾತ್ಮರಾದರು. ಇದು ದೇಶದ ಸಮಗ್ರತೆ ಹಾಗೂ ಸಾರ್ವಭೌಮತೆಗೆ ಧಕ್ಕೆ ತರುವಂತಹ ವಿಷಯವಾಗಿತ್ತು. ಇದರಿಂದಾಗಿ ಕೇಂದ್ರ ಸರ್ಕಾರವು 370ನೇ ವಿಧಿ ರದ್ದುಗೊಳಿಸುವ ತೀರ್ಮಾನ ತೆಗೆದುಕೊಂಡಿತು” ಎಂದು ತಿಳಿಸಿದರು.
ವಾದ-ಪ್ರತಿವಾದ
ವಿಚಾರಣೆ ವೇಳೆ ಸಿಜೆಐ ಚಂದ್ರಚೂಡ್ ಅವರು 35 ಎ ವಿಧಿ ಕುರಿತು ಪ್ರಸ್ತಾಪಿಸಿದರು. “ಜಮ್ಮು-ಕಾಶ್ಮೀರ ನಿವಾಸಿಗಳಿಗೆ 35ಎ ವಿಧಿಯು ವಿಶೇಷ ಸ್ಥಾನಮಾನವನ್ನೇನೋ ನೀಡುತ್ತಿತ್ತು. ಆದರೆ, ಜಮ್ಮು-ಕಾಶ್ಮೀರ ನಿವಾಸಿಗಳು ಅಲ್ಲದವರಿಗೆ ಅವಕಾಶಗಳು ಸಿಗುವಲ್ಲಿ ಸಮಾನತೆ, ರಾಜ್ಯ ಸರ್ಕಾರಿ ನೌಕರಿ ಹಾಗೂ ಭೂಮಿ ಖರೀದಿಸುವ ಹಕ್ಕುಗಳನ್ನು ಕಸಿಯುತ್ತಿತ್ತು” ಎಂದು ಹೇಳಿದರು. ಇದೇ ವೇಳೆ, “ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಪ್ರತ್ಯೇಕ ಸಂವಿಧಾನಕ್ಕಿಂತ ಭಾರತದ ಸಂವಿಧಾನ ಶ್ರೇಷ್ಠ” ಎಂಬ ಕೇಂದ್ರ ಸರ್ಕಾರದ ವಾದವನ್ನು ಕೂಡ ಅವರು ಒಪ್ಪಿದರು.
ಇದನ್ನೂ ಓದಿ: Article 35A: 35ಎ ವಿಧಿಯಿಂದ ಜನರ ಮೂಲಭೂತ ಹಕ್ಕು ಕಸಿತ: ರದ್ದಾದ ವಿಧಿ ಕುರಿತು ಸಿಜೆಐ ಚಂದ್ರಚೂಡ್ ಮಹತ್ವದ ಹೇಳಿಕೆ
ಕೇಂದ್ರ ಸರ್ಕಾರವು 2019ರ ಆಗಸ್ಟ್ 5ರಂದು 370ನೇ ವಿಧಿ ರದ್ದುಗೊಳಿಸಿದೆ. ಇದನ್ನು ಪ್ರಶ್ನಿಸಿ 23 ಅರ್ಜಿಗಳು ಸಲ್ಲಿಕೆಯಾದ ಕಾರಣ ಎಲ್ಲ ಅರ್ಜಿಗಳ ವಿಚಾರಣೆಯನ್ನು ಪ್ರತಿದಿನ ನಡೆಸಲಾಗುತ್ತಿದೆ. ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜಯ್ ಖನ್ನಾ, ಬಿ.ಆರ್.ಗವಾಯಿ ಹಾಗೂ ಸೂರ್ಯಕಾಂತ್ ಅವರಿರುವ ಪಂಚ ಸದಸ್ಯರ ಪೀಠವು ಪ್ರತಿದಿನ ವಿಚಾರಣೆ ನಡೆಸುತ್ತಿದೆ.