ಅಮೃತ್‌ಸರ್: ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದಿರುವ ನೂತನ ಆಮ್ ಆದ್ಮಿ ಸರ್ಕಾರ ಇಂದು ವಿಧಾನಸಭೆಯಲ್ಲಿ ಮೊದಲ ಬಜೆಟ್ ಮಂಡನೆ ಮಾಡಿದ್ದು, ಅದರಲ್ಲಿ ರಾಜ್ಯದ ರೈತರು ಮತ್ತು ವಿದ್ಯಾರ್ಥಿಗಳಿಗೆ ಬಂಪರ್ ಬಹುಮಾನ ಕೊಟ್ಟಿದೆ. ಕೃಷಿ ವಲಯ ಸುಧಾರಣೆಗಾಗಿ 11,560 ಸಾವಿರ ಕೋಟಿ ರೂಪಾಯಿ ಮತ್ತು ಪ್ರತಿವರ್ಷ ಬೆಳೆ ಕೊಳೆ ಸುಡುವಿಕೆಯಿಂದ ಉಂಟಾಗುತ್ತಿರುವ ವಾಯುಮಾಲಿನ್ಯ ಸಮಸ್ಯೆ ಪರಿಹಾರಕ್ಕಾಗಿ 200ಕೋಟಿ ರೂ. ಮೀಸಲಿಟ್ಟಿದೆ. ಇನ್ನು ಕೃಷಿಭೂಮಿ ಕೊಳವೆಬಾವಿಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಲು 6,947 ಕೋಟಿ ರೂ.ಮೀಸಲಿಟ್ಟಿದೆ. ಇನ್ನೊಂದೆಡೆ ಶಿಕ್ಷಣಕ್ಷೇತ್ರಕ್ಕೂ ಬಜೆಟ್‌ನಲ್ಲಿ ಮಹತ್ವ ನೀಡಲಾಗಿದೆ. ಸಾಮಾನ್ಯವಾಗಿ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣಕ್ಕೆ ಪ್ರತಿವರ್ಷ ಬಜೆಟ್‌ನಲ್ಲಿ ಮೀಸಲಿಡುವ ಹಣಕ್ಕಿಂತ ಈ ಬಾರಿ ಶೇ.೧೬ರಷ್ಟು ಹೆಚ್ಚು ಹಂಚಿಕೆ ಮಾಡಲಾಗಿದೆ. ವಿದ್ಯಾರ್ಥಿ ವೇತನಕ್ಕಾಗಿಯೇ 30 ಕೋಟಿ ರೂಪಾಯಿ ಮೀಸಲಾಗಿಡಲಾಗಿದೆ.
ಇಂದು ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ತಮ್ಮ ಮೊದಲ ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಜೆಟ್ ಮೊತ್ತ 1.55860 ಕೋಟಿ ರೂಪಾಯಿಯಾಗಿದ್ದು, ಕಳೆದ ವರ್ಷಕ್ಕಿಂತ ಶೇ.47ರಷ್ಟು ಹೆಚ್ಚು. ಈ ಬಜೆಟ್‌ನಲ್ಲಿ ಬಹುಮುಖ್ಯವಾಗಿ ಕೃಷಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಸಿಕ್ಕಿದೆ. ʼಇನ್ನು 5ವರ್ಷಗಳಲ್ಲಿ 16 ಮೆಡಿಕಲ್ ಕಾಲೇಜುಗಳನ್ನು ರಾಜ್ಯದಲ್ಲಿ ನಿರ್ಮಾಣ ಮಾಡಲಾಗುವುದು. ಅದಾದರೆ ವೈದ್ಯಕೀಯ ಕಾಲೇಜುಗಳ ಸಂಖ್ಯೆ 25ಕ್ಕೆ ಏರಿಕೆಯಾಗಲಿದೆʼ ಎಂದು ಬಜೆಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಹಾಗೇ, ಎಲ್ಲ ಸರ್ಕಾರಿ ಶಾಲೆಗಳ ಛಾವಣಿ ಮೇಲೆ ಸೋಲಾರ್ ವ್ಯವಸ್ಥೆ ಅಳವಡಿಸಲು ೧೦೦ ಕೋಟಿ ರೂ. ಮೀಸಲಿಡಲಾಗಿದೆ.
ಇದನ್ನೂ ಓದಿ: ಬಿಹಾರ, ಕೇರಳ, ಪಂಜಾಬ್, ರಾಜಸ್ಥಾನ, ಪಶ್ಚಿಮ ಬಂಗಾಳದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರ ಎಂದ ಆರ್‌ಬಿಐ
ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ನಿರ್ವಹಣೆಗಾಗಿ ಎಲ್ಲ ಜಿಲ್ಲೆಗಳಲ್ಲೂ ಸೈಬರ್ ಕಂಟ್ರೋಲ್ ರೂಮ್‌ಗಳನ್ನು ರಚಿಸಲು ಮತ್ತು ಎಲ್ಲ ಪೊಲೀಸ್ ಮಹಿಳಾ ಮಿತ್ರ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು 30 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಹಾಗೇ, ೨೦೨೪ರೊಳಗೆ ಪಟಿಯಾಲಾ ಮತ್ತು ಫರೀದ್‌ಕೋಟ್‌ಗಳಲ್ಲಿ ತಲಾ ಒಂದು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಳ ನಿರ್ಮಾಣ ಮಾಡುವುದಾಗಿ ಪಂಜಾಬ್ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ. ಹಾಗೇ, ೨೦೨೭ರ ಹೊತ್ತಿಗೆ ಇನ್ನೂ ಮೂರು ಸೂಪರ್ ಸ್ಪೆಶಾಲಿಟಿ ಹಾಸ್ಟಿಟಲ್‌ಗಳನ್ನು ನಿರ್ಮಿಸುವುದಾಗಿಯೂ ತಿಳಿಸಿದೆ. ದೆಹಲಿ ಮಾದರಿಯಲ್ಲೇ ಪಂಜಾಬ್‌ನಲ್ಲೂ ಮೊಹಲ್ಲಾ ಕ್ಲಿನಿಕ್‌ಗಳನ್ನು ಸ್ಥಾಪಿಸಲು ಆಪ್ ಸರ್ಕಾರ ನಿರ್ಧರಿಸಿದ್ದು, ಅದಕ್ಕಾಗಿ 77ಕೋಟಿ ರೂಪಾಯಿ ಮೀಸಲಾಗಿಟ್ಟಿದೆ. ಈ ವರ್ಷ ಒಟ್ಟು ೧೧೭ ಕ್ಲಿನಿಕ್‌ಗಳು ಸ್ಥಾಪನೆಯಾಗಲಿವೆ. ಅದರಲ್ಲಿ 75 ಆಗಸ್ಟ್‌ನಿಂದ ಕಾರ್ಯಾರಂಭ ಮಾಡಲಿವೆ. ಮೊಹಲ್ಲಾ ಕ್ಲಿನಿಕ್‌ಗಳು ಪ್ರಾಥಮಿಕ ಆರೋಗ್ಯಕೇಂದ್ರಗಳಾಗಿದ್ದು, ವೈದ್ಯರು, ನರ್ಸ್ ಇರುತ್ತಾರೆ. ವೈದ್ಯಕೀಯ ಸೌಲಭ್ಯಗಳು ಹೆಚ್ಚಾಗಿರುತ್ತವೆ. ಇಲ್ಲಿ ಕನ್ಸಲ್ಟೇಶನ್ ಉಚಿತವಾಗಿರಲಿದ್ದು, ಬಡವರಿಗೆ ಅನುಕೂಲವಾಗಲಿದೆ.
ಇದನ್ನೂ ಓದಿ: ಬಿಹಾರ, ಕೇರಳ, ಪಂಜಾಬ್, ರಾಜಸ್ಥಾನ, ಪಶ್ಚಿಮ ಬಂಗಾಳದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರ ಎಂದ ಆರ್‌ಬಿಐ