ಅಮೃತ್‌ಸರ: ಪಂಜಾಬ್ ಮುಖ್ಯಮಂತ್ರಿ ಭಗಂವತ್ ಮಾನ್ ಆರೋಗ್ಯ ಹದಗೆಟ್ಟಿದೆ. ಬುಧವಾರ ರಾತ್ರಿ ವಿಪರೀತ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಟ್ಟೆಯಲ್ಲಿ ಇನ್‌ಫೆಕ್ಷನ್ ಆಗಿದೆ ಎಂದು ವೈದ್ಯರು ಹೇಳಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಭಗವಂತ್ ಮಾನ್ ಎರಡು ದಿನಗಳ ಹಿಂದೆ ಸುಲ್ತಾನ್‌ಪುರ ಲೋಧಿಗೆ ಭೇಟಿ ನೀಡಿ, ಅಲ್ಲಿನ ಪವಿತ್ರ ನದಿ ಕಾಳಿ ಬೆನ್‌ನ ನೀರನ್ನು ಕುಡಿದಿದ್ದರು. ಈದೀಗ ಹೊಟ್ಟೆ ನೋವಿಗೆ ಆ ನೀರು ಕುಡಿದಿದ್ದೇ ಕಾರಣ ಎಂದು ಸ್ಪಷ್ಟವಾಗದೆ ಇದ್ದರೂ ಅದೂ ಆಗಿರಬಹುದು ಎಂದು ಹೇಳಲಾಗಿದೆ.
ಬುಧವಾರ ಪಂಜಾಬ್ ಪೊಲೀಸರು ಸಿಧು ಮೂಸೆ ವಾಲಾ ಅವರ ಹಂತಕರಲ್ಲಿ ಇಬ್ಬರನ್ನು ಶೂಟ್ ಮಾಡಿ ಕೊಂದಿದ್ದರು. ಘಟನೆಯಾದ ಬಳಿಕ ಸಿಎಂ ರಾಜ್ಯದ ಪೊಲೀಸ್ ಮುಖ್ಯಸ್ಥರಿಗೆ ಕರೆ ಮಾಡಿ ಅಭಿನಂದಿಸಿದ್ದರು. ಆದರೆ ರಾತ್ರಿ ಹೊತ್ತಿಗೆ ಚಂಡಿಗಢದ ನಿವಾಸದಲ್ಲಿ ಇದ್ದಾಗ ಏಕಾಏಕಿ ಸಿಕ್ಕಾಪಟೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಅವರನ್ನು ಅಲ್ಲಿಂದ ಸೀದಾ ದೆಹಲಿಗೆ ಕರೆದುಕೊಂಡು ಹೋಗಲಾಯಿತು. ಸಾಮಾನ್ಯವಾಗಿ ಸಿಎಂ ಜತೆ ಯಾವಾಗಲೂ ಇರುವಷ್ಟು ಭದ್ರತಾ ಸಿಬ್ಬಂದಿ ಇಲ್ಲದೆ ಅವರನ್ನು ರಾಷ್ಟ್ರರಾಜಧಾನಿಗೆ ಶಿಫ್ಟ್ ಮಾಡಲಾಗಿದೆ ಮತ್ತು ಅವರ ಅನಾರೋಗ್ಯದ ವಿಷಯವನ್ನು ಗುಟ್ಟಾಗಿಯೇ ಇಡಲಾಗಿತ್ತು. ಮುಖ್ಯಮಂತ್ರಿ ಭಗವಂತ್ ಮಾನ್‌ಗೆ ಅನಾರೋಗ್ಯವಾಗಿದೆ, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ವಿಷಯವನ್ನು ಪಂಜಾಬ್ ಮುಖ್ಯಮಂತ್ರಿ ಕಚೇರಿ ಇನ್ನೂ ದೃಢಪಡಿಸಿಲ್ಲ. ಇನ್ನು ಇಂದು ಕೂಡ ಮಾನ್‌ಗೆ ಸಾಲುಸಾಲು ಮೀಟಿಂಗ್‌ಗಳು ಇತ್ತು. ಅವು ಯಾವುದಕ್ಕೂ ಅವರು ಹಾಜರಾಗುತ್ತಿಲ್ಲ.
ಇನ್ನು ಭಗವಂತ್ ಮಾನ್ ಭಾನುವಾರ ಕಾಳಿ ಬೆನ್ ಸ್ವಚ್ಛತಾ ಕಾರ್ಯಕ್ರಮದ 22ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಸುಲ್ತಾನ್‌ಪುರ ಲೋಧಿಗೆ ಹೋಗಿದ್ದರು. ಅಲ್ಲಿ ಅವರು ಒಂದು ಗ್ಲಾಸ್‌ನಲ್ಲಿ ನದಿಯಿಂದ ನೀರು ತೆಗೆದುಕೊಂಡು ನೇರವಾಗಿ (ಅದನ್ನು ಫಿಲ್ಟರ್ ಮಾಡದೆ) ಕುಡಿದಿದ್ದ ಫೋಟೋವನ್ನೂ ಪಂಜಾಬ್ ಸರ್ಕಾರ ಬಿಡುಗಡೆ ಮಾಡಿತ್ತು. ಬಳಿಕ ಅವರು ಅಲ್ಲಿ ಸಸಿಯನ್ನೂ ನೆಟ್ಟಿದ್ದರು.
ಇದನ್ನೂ ಓದಿ: ಪಂಜಾಬ್ ಸಿಎಂ ಭಗವಂತ್ ಮಾನ್ ಬಾಳ ಸಂಗಾತಿ ಡಾ. ಗುರುಪ್ರೀತ್ ಕೌರ್: ಯಾರೀ ಚೆಲುವೆ, ಮೊದಲ ಭೇಟಿ ಎಲ್ಲಿ?