ಚಂಡೀಗಢ: ನೂತನ ಸಂಸತ್ ಭವನದ ಉದ್ಘಾಟನೆಗೆ ತೆರಳದೆ, ನೀತಿ ಆಯೋಗದ ಸಭೆಗೂ ಹಾಜರಾಗದೆ ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಈಗ ಕೇಂದ್ರ ಸರ್ಕಾರದ ಝೆಡ್ ಪ್ಲಸ್ ಸೆಕ್ಯುರಿಟಿಯನ್ನೂ ನಿರಾಕರಿಸಿದ್ದಾರೆ. ಹಾಗೆಯೇ, “ನನಗೆ ಪಂಜಾಬ್ ಪೊಲೀಸರ ಮೇಲೆ ವಿಶ್ವಾಸ ಇದೆ” ಎಂದು ಕೂಡ ಹೇಳಿದ್ದಾರೆ.
ಝಡ್ ಪ್ಲಸ್ ಭದ್ರತೆ ನಿರಾಕರಣೆ ಕುರಿತು ಪಂಜಾಬ್ ಮುಖ್ಯಮಂತ್ರಿ ಕಚೇರಿಯಿಂದ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ. ಪಂಜಾಬ್ ಹಾಗೂ ದೆಹಲಿಯಲ್ಲಿ ಝೆಡ್ ಪ್ಲಸ್ ಸೆಕ್ಯುರಿಟಿ ನೀಡುವುದಾಗಿ ಕೇಂದ್ರ ಗೃಹ ಸಚಿವಾಲಯ ತಿಳಿಸಿತ್ತು. ಆದರೆ, ಪಂಜಾಬ್ ಪೊಲೀಸರ ಭದ್ರತೆಯೇ ಸಾಕು ಎಂದು ಸಿಎಂ ಕಚೇರಿಯು ಗೃಹ ಸಚಿವಾಲಯಕ್ಕೆ ಸ್ಪಷ್ಟನೆ ನೀಡಿದೆ.
“ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಪಂಜಾಬ್ ಹಾಗೂ ದೆಹಲಿಯಲ್ಲಿ ಕೇಂದ್ರೀಯ ಏಜೆನ್ಸಿಯ ಭದ್ರತೆ ಪಡೆದರೆ ಪಂಜಾಬ್ ಪೊಲೀಸರ ಮೇಲೆ ವಿಶ್ವಾಸ ಇಲ್ಲ ಎಂಬ ಸಂದೇಶ ರವಾನೆಯಾದಂತಾಗುತ್ತದೆ. ತಮ್ಮದೇ ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂಬ ಸಂದೇಶ ರವಾನೆಯಾಗಲು ಮುಖ್ಯಮಂತ್ರಿಯು ಇಷ್ಟಪಡುತ್ತಿಲ್ಲ. ಹಾಗಾಗಿ ಝೆಡ್ ಪ್ಲಸ್ ಭದ್ರತೆಯನ್ನು ಪಡೆಯುತ್ತಿಲ್ಲ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಪಂಜಾಬ್ ಸಿಎಂ ಭಗವಂತ್ ಮಾನ್ ಬಾಳ ಸಂಗಾತಿ ಡಾ. ಗುರುಪ್ರೀತ್ ಕೌರ್: ಯಾರೀ ಚೆಲುವೆ, ಮೊದಲ ಭೇಟಿ ಎಲ್ಲಿ?
ಭಗವಂತ್ ಮಾನ್ ಅವರಿಗೆ ದೇಶದಲ್ಲಿ ಹಾಗೂ ವಿದೇಶದಿಂದ ಬೆದರಿಕೆ ಇರುವ ಕಾರಣ ಅವರಿಗೆ ಝೆಡ್ ಪ್ಲಸ್ ಸೆಕ್ಯುರಿಟಿ ನೀಡಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿತ್ತು ಎಂದು ತಿಳಿದುಬಂದಿದೆ. ಭಗವಂತ್ ಮಾನ್ ಅವರು ಝೆಡ್ ಪ್ಲಸ್ ಸೆಕ್ಯುರಿಟಿ ಪಡೆದಿದ್ದರೆ ಅವರಿಗೆ ಎನ್‌ಎಸ್‌ಜಿಯ 10 ಕಮಾಂಡೋಗಳು ಸೇರಿ ಒಟ್ಟು 55 ಸಿಬ್ಬಂದಿಯು ಕಾವಲು ಕಾಯುತ್ತಿದ್ದರು. ದೇಶದಲ್ಲಿಯೇ ಝೆಡ್ ಪ್ಲಸ್ ಭದ್ರತೆಯು ಗರಿಷ್ಠ ಮಟ್ಟದ ಸೆಕ್ಯುರಿಟಿ ಎನಿಸಿದೆ.