1988ರ ರಸ್ತೆ ಜಗಳ ಪ್ರಕರಣದಲ್ಲಿ ಸುಪ್ರೀಂಕೋರ್ಟ್ನಿಂದ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿ, ಪಟಿಯಾಲಾ ಜೈಲಿನಲ್ಲಿರುವ ಮಾಜಿ ಕ್ರಿಕೆಟರ್, ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ನಾಳೆ (ಏಪ್ರಿಲ್ 1) ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಈ ಬಗ್ಗೆ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ಮಾಡಿದ್ದಾರೆ. ‘ಸರ್ದಾರ್ ನವಜೋತ್ ಸಿಂಗ್ ಸಿಧು ಅವರು (ತಮ್ಮನ್ನು ತಾವು ಹೀಗೆ ಉಲ್ಲೇಖಿಸಿಕೊಂಡಿದ್ದಾರೆ) ನಾಳೆ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೇ ಮಾಹಿತಿ ಕೊಟ್ಟಿದ್ದಾರೆ’ ಎಂದು ಸಿಧು ಬರೆದುಕೊಂಡಿದ್ದಾರೆ. ನವಜೋತ್ ಸಿಂಗ್ ಸಿಧು ಬಿಡುಗಡೆಯನ್ನು ಅವರ ಪರ ವಕೀಲರಾದ ಎಚ್ಪಿಎಸ್ ವರ್ಮಾ ಕೂಡ ದೃಢಪಡಿಸಿದ್ದಾರೆ.
ಪಂಜಾಬ್ ಕಾಂಗ್ರೆಸ್ನ ಅಧ್ಯಕ್ಷರಾಗಿದ್ದ ನವಜೋತ್ ಸಿಂಗ್ ಸಿಧು ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್ನಲ್ಲಿ ಕಾಂಗ್ರೆಸ್ ಸೋತ ಬಳಿಕ, ಅಂದರೆ 2022ರ ಮಾರ್ಚ್ ತಿಂಗಳಲ್ಲಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷಕ್ಕೆ ನನ್ನ ಸೇವೆಯನ್ನು ಮುಂದುವರಿಸುತ್ತೇನೆ, ಆದರೆ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯುತ್ತಿದ್ದೇನೆ ಎಂದು ಸೋನಿಯಾ ಗಾಂಧಿಯವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದರು. ಅದಾಗಿ ಎರಡು ತಿಂಗಳ ನಂತರ ಅಂದರೆ ಮೇ ತಿಂಗಳಲ್ಲಿ ಸುಪ್ರೀಂಕೋರ್ಟ್ನಿಂದ ಶಿಕ್ಷೆಯಾಗಿತ್ತು.
ಏನಿದು ರಸ್ತೆ ರಗಳೆ?
1988ರ ಡಿಸೆಂಬರ್‌ನಲ್ಲಿ ಪಟಿಯಾಲಾದ ಪಾರ್ಕಿಂಗ್ ಸ್ಥಳವೊಂದರಲ್ಲಿ ನವಜೋತ್ ಸಿಂಗ್ ಸಿಧು ಮತ್ತು ಅವರ ಸಹಚರ ರೂಪಿಂದರ್ ಸಿಂಗ್ ಸಂಧು ಸೇರಿ, ಹಿರಿಯ ನಾಗರಿಕ ಗುರ್ನಾಮ್ ಸಿಂಗ್‌ರಿಗೆ ಬೈದಿದ್ದಲ್ಲದೆ, ಅವರನ್ನು ಕಾರಿನಿಂದ ಕೆಳಗೆ ಇಳಿದು ತಲೆಗೆ ಹೊಡೆದಿದ್ದರು. ಅದಾದ ಕೆಲವು ದಿನಗಳಲ್ಲಿ ಗುರ್ನಾಮ್ ಸಿಂಗ್ ಮೃತಪಟ್ಟಿದ್ದರು. ಬಳಿಕ ಗುರ್ನಾಮ್ ಸಿಂಗ್ ಕುಟುಂಬದವರು ಕೋರ್ಟ್ ಮೆಟ್ಟಿಲೇರಿದ್ದರು. ಮೊದಲು ಸೆಷನ್ಸ್ ಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಅರ್ಜಿ, ಯಾವುದೇ ಸೂಕ್ತ ದಾಖಲೆಯಿಲ್ಲ ಎಂಬ ಕಾರಣಕ್ಕೆ ವಜಾಗೊಂಡಿತ್ತು. ನಂತರ ಕುಟುಂಬದವರು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಇದೊಂದು ಶಿಕ್ಷಾರ್ಹ ನರಹತ್ಯೆ ಎಂದು ತೀರ್ಪುಕೊಟ್ಟಿದ್ದಲ್ಲದೆ, ಸಿಧುಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ಹೈಕೋರ್ಟ್ ತೀರ್ಪಿನ ವಿರುದ್ಧ ನವಜೋತ್ ಸಿಂಗ್ ಸಿಧು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. 2018ರಲ್ಲಿ ತೀರ್ಪು ನೀಡಿದ್ದ ಸರ್ವೋಚ್ಛ ನ್ಯಾಯಾಲಯ, ಗುರ್ನಾಮ್ ಸಿಂಗ್ ಮೃತಪಟ್ಟಿದ್ದು ಸಿಧು ನೀಡಿದ ಏಟಿನಿಂದಲೇ ಎಂಬುದಕ್ಕೆ ಸಾಕ್ಷಿಯಿಲ್ಲ ಎಂದು ಹೇಳಿ ಸಿಧು ವಿರುದ್ಧ ದಾಖಲಾಗಿದ್ದ ನರಹತ್ಯೆ ಕೇಸ್‌ನ್ನು ಖುಲಾಸೆಗೊಳಿಸಿತ್ತು. ಆದರೆ ಹಿರಿಯ ನಾಗರಿಕರ ಮೇಲೆ ಹಲ್ಲೆ ಮಾಡಿದ್ದು ತಪ್ಪು ಎಂದು ಹೇಳಿ, ಒಂದು ಸಾವಿರ ರೂಪಾಯಿ ದಂಡ ವಿಧಿಸಿತ್ತು. ಆದರೆ ಸುಪ್ರೀಂಕೋರ್ಟ್‌ನ ಈ ತೀರ್ಪು ತೃಪ್ತಿ ತಂದಿಲ್ಲವೆಂದು ಗುರ್ನಾಮ್ ಕುಟುಂಬ ಮತ್ತೆ ಸುಪ್ರೀಂಕೋರ್ಟ್‌ಗೇ ಮೇಲ್ಮನವಿ ಸಲ್ಲಿಸಿತ್ತು. ಅದರ ಆದೇಶ 2022ರ ಮೇ 19ರಂದು ಹೊರಬಿದ್ದಿತ್ತು. ಸಿಧುಗೆ ಜೈಲಾಗಿತ್ತು.
ಪತ್ನಿಗೆ ಕ್ಯಾನ್ಸರ್
ವಾರದ ಹಿಂದೆ ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಟ್ವೀಟ್ ಮಾಡಿ, ತಮಗೆ ಸ್ತನ ಕ್ಯಾನ್ಸರ್ ಇರುವುದಾಗಿ ಪತ್ತೆಯಾಗಿದೆ. ಈ ಹೊತ್ತಲ್ಲಿ ಪತಿ ನವಜೋತ್ ಸಿಂಗ್ ಸಿಧು ತುಂಬ ನೆನಪಾಗುತ್ತಾರೆ ಎಂದು ಭಾವನಾತ್ಮಕವಾಗಿ ಹೇಳಿದ್ದರು. ನಾನು ನಿಮಗಾಗಿ ಕಾಯುತ್ತಲೇ ಇದ್ದೇನೆ. ಆದರೆ, ಸತ್ಯ ಯಾವಾಗಲೂ ತುಂಬ ಪ್ರಬಲವಾಗಿರುತ್ತದೆ. ಹಾಗಾಗಿ ನಿಮಗೆ ಅಷ್ಟೊಂದು ಅಗ್ನಿಪರೀಕ್ಷೆಗಳು ಎದುರಾಗಿವೆ. ಅಷ್ಟಕ್ಕೂ ಇದು ಕಲಿಯುಗ. ಆದರೆ, ನಾವು ಯಾರನ್ನೂ ದೂರುವಂತಿಲ್ಲ. ಏಕೆಂದರೆ, ಇದು ದೇವರ ಆಟ ಎಂದಿದ್ದರು. ಪತ್ನಿಯ ಈ ಭಾವನಾತ್ಮಕ ಟ್ವೀಟ್ ಬೆನ್ನಲ್ಲೇ, ನವಜೋತ್ ಸಿಂಗ್ ಸಿಧು ಬಿಡುಗಡೆಯ ಸುದ್ದಿಯೂ ಹೊರಬಿದ್ದಿದೆ.