Site icon Vistara News

Punjab Protest | ಎಲ್‌ಪಿ ವಿವಿ ವಿದ್ಯಾರ್ಥಿ ಆತ್ಮಹತ್ಯೆ, ಪಂಜಾಬ್‌ನಲ್ಲಿ ಸ್ಟೂಡೆಂಟ್ಸ್ ಪ್ರತಿಭಟನೆ

LPU

ನವ ದೆಹಲಿ: ಪಂಜಾಬ್‌(Punjab)ನ ಫಗವಾಡಾದಲ್ಲಿರುವ ಲವ್ಲೀ ಪ್ರೊಫೆಷನಲ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ, ವಿದ್ಯಾರ್ಥಿಗಳು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಹತ್ತು ದಿನಗಳ ಅಂತರದಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಆಕ್ರೋಶಕ್ಕೆ ಕಾರಣವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆಗೆ ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ.

ಕೇರಳ ಮೂಲದ 22 ವರ್ಷ ವಯಸ್ಸಿನ ಅಗ್ನಿ ಎಸ್ ದಿಲಿಪ್ ಅವರು ಈ ವಿಶ್ವವಿದ್ಯಾಲಯದಲ್ಲಿ ಡಿಸೈನ ಪದವಿ ಓದುತ್ತಿದ್ದರು. ಆದರೆ, ಕೆಲವು ವೈಯಕ್ತಿಕ ಸಮಸ್ಯೆಗಳಿಂದ ಅವರು ಬಳಲುತ್ತಿದ್ದರು ಎಂದು ಪೊಲೀಸರು, ಡೆತ್ ನೋಟ್ ಆಧಾರವಾಗಿಟ್ಟುಕೊಂಡು ಹೇಳುತ್ತಿದ್ದಾರೆ.

ಮಂಗಳವಾರ ಮಧ್ಯಾಹ್ನ ಈ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೇಲ್ನೋಟಕ್ಕೆ ಈ ವಿದ್ಯಾರ್ಥಿ ಕೆಲವು ವೈಯಕ್ತಿಕ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂಬುದು ಗೊತ್ತಾಗಿದೆ. ಈ ವಿಷಯ ಅವರು ಬಿಟ್ಟು ಹೋದ ಡೆತ್ ನೋಟ್‌ನಲ್ಲೂ ಇದೆ ಎಂದು ಫಗವಾಡಾ ಡಿಎಸ್‌ಪಿ ತಿಳಿಸಿದ್ದಾರೆ. ವಿಶ್ವವಿದ್ಯಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲೂ ಇದೇ ವಿಷಯವನ್ನು ತಿಳಿಸಲಾಗಿದೆ.

ಆದರೆ, ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಮಾತ್ರ ಪೊಲೀಸ್ ಮತ್ತು ವಿಶ್ವವಿದ್ಯಾಲಯದ ವಾದವನ್ನು ಒಪ್ಪುತ್ತಿಲ್ಲ. ಈ ಆತ್ಮಹತ್ಯೆಗಳ ಬಗ್ಗೆ ಸಮಗ್ರ ಮತ್ತು ಸ್ವತಂತ್ರವಾಗಿ ತನಿಖೆಯಾಗಬೇಕು. ಅಧಿಕಾರಿಗಳ ಮೂಲಕ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಈ ಹಿಂದಿನ ಪ್ರಕರಣವನ್ನು ಇದೇ ರೀತಿಯಲ್ಲಿ ರಹಸ್ಯವಾಗಿ ಬಗೆಹರಿಸಿಕೊಳ್ಳಲಾಗಿತ್ತು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸಿತ್ತಿದ್ದಾರೆ.

ಇದನ್ನೂ ಓದಿ | Punjab MMS Scandal | ಎಸ್ಐಟಿ ರಚನೆ, ಮೂವರ ಬಂಧನ: ಪ್ರತಿಭಟನೆ ಕೈ ಬಿಟ್ಟ ವಿದ್ಯಾರ್ಥಿಗಳು

Exit mobile version