ನವ ದೆಹಲಿ: ‘ಎಲ್ಲ ಕಳ್ಳರ ಉಪನಾಮವೂ ಮೋದಿ ಎಂದೇ ಇರುತ್ತದೆ’ ಎಂದು 2019ರ ಲೋಕಸಭೆ ಚುನಾವಣೆ ವೇಳೆ ಹೇಳಿಕೆ ನೀಡಿದ್ದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ದೋಷಿ ಎಂದು ಗುಜರಾತ್ನ ಸೂರತ್ ನ್ಯಾಯಾಲಯ ಮಾರ್ಚ್ 23ರಂದು ತೀರ್ಪು ನೀಡಿತ್ತು. ಹಾಗೇ, ಅವರಿಗೆ 2ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಜಾಮೀನು ಪಡೆದು ಹೊರಗಿದ್ದ ರಾಹುಲ್ ಗಾಂಧಿ ಸೂರತ್ನ ಸೆಷನ್ಸ್ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ, ತಮಗೆ ನೀಡಲಾಗಿದ್ದ ಜೈಲು ಶಿಕ್ಷೆಯನ್ನು ಪ್ರಶ್ನೆ ಮಾಡಿದ್ದರು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಸೂರತ್ ಸೆಷನ್ಸ್ ಕೋರ್ಟ್ ರಾಹುಲ್ ಗಾಂಧಿಯವರಿಗೆ ನೀಡಲಾಗಿದ್ದ ಜೈಲು ಶಿಕ್ಷೆಗೆ ತಡೆ ನೀಡಿತ್ತು. ಹಾಗೇ ಮುಂದಿನ ವಿಚಾರಣೆಯನ್ನು ಏಪ್ರಿಲ್ 13 (ಇಂದು)ಕ್ಕೆ ನಿಗದಿಪಡಿಸಿ, ಅಷ್ಟರೊಳಗೆ ದೂರುದಾರ ಪೂರ್ಣೇಶ್ ಮೋದಿ ಅವರು ರಾಹುಲ್ ಗಾಂಧಿ ಅರ್ಜಿಗೆ ಪ್ರತಿಯಾಗಿ ಕೋರ್ಟ್ಗೆ ಪ್ರತಿಕ್ರಿಯೆ ನೀಡಬೇಕು ಎಂದೂ ಸೂಚನೆ ನೀಡಿತ್ತು.
ಸೂರತ್ ಸೆಷನ್ಸ್ ಕೋರ್ಟ್ನ ಸೂಚನೆ ಅನ್ವಯ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ರಾಹುಲ್ ಗಾಂಧಿಯವರ ಮೇಲ್ಮನವಿಗೆ ಪ್ರತಿಯಾಗಿ ಕೋರ್ಟ್ಗೆ ಪ್ರತಿದೂರು ನೀಡಿದ್ದು ‘ರಾಹುಲ್ ಗಾಂಧಿಯವರು ಪುನರಾವರ್ತಿತ ಅಪರಾಧಿ. ಹಲವು ಸಂದರ್ಭಗಳಲ್ಲಿ ಕಾನೂನಿಗೆ ವಿರೋಧವಾಗಿ ನಡೆದುಕೊಂಡಿದ್ದಾರೆ. ಸೆಷನ್ಸ್ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಬರುವಾಗಲೂ ಅವರು ಪಕ್ಷದ ಇನ್ನಿತರ ನಾಯಕರೊಂದಿಗೆ ಬಂದಿದ್ದಾರೆ. ಈ ಮೂಲಕ ರಾಹುಲ್ ಗಾಂಧಿ ತಮ್ಮ ಬಾಲಿಶ ಅಹಂಕಾರದ ಕೊಳಕನ್ನು ತೋರಿಸಿದ್ದಾರೆ. ನ್ಯಾಯಾಲಯದ ಮೇಲೆ ಒತ್ತಡ ಹೇರಲು ಹೀಗೆ ಅಪ್ರಬುದ್ಧವಾಗಿ ವರ್ತಿಸಿದ್ದಾರೆ ’ ಎಂದು ಹೇಳಿದ್ದಾರೆ.
ಇನ್ನೊಬ್ಬರ ಮಾನಹಾನಿ ಮಾಡುವುದನ್ನು ಆರೋಪಿ (ರಾಹುಲ್ ಗಾಂಧಿ) ಹವ್ಯಾಸ ಮಾಡಿಕೊಂಡು ಬಿಟ್ಟಿದ್ದಾರೆ. ಒಂದೋ ಇನ್ನೊಬ್ಬರ ಮಾನಹಾನಿ ಮಾಡುವಂಥ ಅಥವಾ ಇನ್ನೊಬ್ಬರ ಮನಸು ನೋಯಿಸುವ ಹೇಳಿಕೆಗಳನ್ನು ಕೊಡುವುದನ್ನು ಕಾಯಕ ಮಾಡಿಕೊಂಡು ಬಿಟ್ಟಿದ್ದಾರೆ. ಅವರು ವಾಕ್ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ರಾಜಕೀಯ ಟೀಕೆ, ಭಿನ್ನಾಭಿಪ್ರಾಯಗಳ ಹೆಸರಲ್ಲಿ ಮನಸಿಗೆ ಬಂದಂತೆ ಮಾತನಾಡುತ್ತಾರೆ ಎಂದೂ ಪೂರ್ಣೇಶ್ ಮೋದಿ ಅವರು ತಮ್ಮ ಪ್ರತಿ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ರಾಹುಲ್ ಗಾಂಧಿಯವರು ಸೂರತ್ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಬರುವಾಗ ಜತೆಗೆ ಪಕ್ಷದ ಮುಖಂಡರೊಂದಿಗೆ ಬಂದಿದ್ದನ್ನೂ ಪೂರ್ಣೇಶ್ ಮೋದಿ ತಮ್ಮ ಅರ್ಜಿಯಲ್ಲಿ ಖಂಡಿಸಿದ್ದಾರೆ. ಅದು ನ್ಯಾಯಾಲಯದ ಮೇಲೆ ಒತ್ತಡ ಹೇರುವ ಪ್ರಯತ್ನ ಎಂದೂ ಹೇಳಿದ್ದಾರೆ. ಹಾಗೇ, ಮೋದಿ ಉಪನಾಮಕ್ಕೆ ಅವಮಾನ ಮಾಡುವಾಗ ಆರೋಪಿಯು ಸಂಸದನಾಗಿದ್ದ. ಹೀಗಾಗಿ ಒಬ್ಬ ಸಂಸದ ಕಾನೂನು ಉಲ್ಲಂಘನೆ ಮಾಡಿದರೆ, ಕಾನೂನಿನಡಿ ಯಾವ ಕ್ರಮ ಅನ್ವಯ ಆಗುತ್ತದೆಯೋ ಅದೇ ಕ್ರಮಕ್ಕೆ ಅವನು ಹೊಣೆಯಾಗುತ್ತಾನೆ’ ಎಂದೂ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Modi Surname Row: ರಾಹುಲ್ ಗಾಂಧಿಗೆ ಮತ್ತೊಂದು ಸಂಕಷ್ಟ, ಏ.25ಕ್ಕೆ ಹಾಜರಾಗುವಂತೆ ಪಟನಾ ಕೋರ್ಟ್ ಸೂಚನೆ