ನವದೆಹಲಿ: ಪತಿ-ಪತ್ನಿ ವಿಚ್ಛೇದನ ಪಡೆದ ಬಳಿಕ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆ ಪ್ರಕಾರ ಪತಿಯಾದವನು ಮಾಜಿ ಪತ್ನಿಗೆ ಜೀವನಾಂಶ ನೀಡಬೇಕು. ಕೆಲವು ಸಂದರ್ಭಗಳಲ್ಲಿ ಜೀವನಾಂಶ ನೀಡಲು ಪತಿಯು ನಿರಾಕರಿಸುವ ಕಾರಣ ಪತ್ನಿಯು ಕೋರ್ಟ್ ಮೊರೆ ಹೋಗುತ್ತಾರೆ. ಅಲ್ಲಿ ನ್ಯಾಯ ಪಡೆಯುತ್ತಾರೆ. ಆದರೆ, ದೆಹಲಿಯಲ್ಲಿ ಮಹಿಳೆಯೊಬ್ಬರು ಪತಿಯಿಂದ ಮಧ್ಯಂತರ ಜೀವನಾಂಶ ನೀಡುವಂತೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ಹಾಗೆಯೇ, “ದುಡಿದು ತಿನ್ನಿ” ಎಂಬ ಸಲಹೆ ನೀಡಿದೆ.
ಪತಿಯಿಂದ ನನಗೆ ಮಾಸಿಕ 50 ಸಾವಿರ ರೂಪಾಯಿ ಮಧ್ಯಂತರ ಜೀವನಾಂಶ ನೀಡುವಂತೆ ಆದೇಶಿಸಬೇಕು ಎಂಬುದಾಗಿ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮೆಟ್ರೋಪಾಲಿಟನ್ ನ್ಯಾಯಾಧೀಶ ಸ್ವಯಂ ಸಿದ್ಧ ತ್ರಿಪಾಠಿ, “ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ ಮಹಿಳೆಯು ಶೈಕ್ಷಣಿಕವಾಗಿ ಹಾಗೂ ದೈಹಿಕವಾಗಿ ಉದ್ಯೋಗ ಮಾಡಲು ಅರ್ಹರಾಗಿದ್ದಾರೆ. ಹಾಗಾಗಿ, ಅವರ ಅರ್ಜಿಯನ್ನು ಪರಿಗಣಿಸಲು ಆಗುವುದಿಲ್ಲ” ಎಂದರು.
“ವಿಚ್ಛೇದನ ಪಡೆದ ಮಹಿಳೆಯು ಎಂಬಿಎ ಪದವೀಧರೆಯಾಗಿದ್ದಾರೆ. ಅವರು ದುಡಿದು ತಿನ್ನಲು ಸಕಲ ರೀತಿಯಲ್ಲಿ ಅರ್ಹರಾಗಿದ್ದಾರೆ. ಹೀಗಿರುವಾಗ ಪತಿಯಿಂದ ಜೀವನಾಂಶ ಪಡೆದರೆ ಅದು ಮಹಿಳೆಯನ್ನು ಆಲಸ್ಯಕ್ಕೆ ದೂಡುತ್ತದೆ. ಹಾಗೆಯೇ, ಪತಿಯ ಮೇಲೆ ಹೆಚ್ಚು ಅವಲಂಬಿತಳಾಗಿ ಇರುವಂತೆ ಮಾಡುತ್ತದೆ. ಮಹಿಳೆಯು ದುಡಿದು ಜೀವನ ಸಾಗಿಸಲು ಅರ್ಹರಾಗಿರುವ ಕಾರಣ ಪರಿಹಾರ ಕೊಡಬೇಕು ಎಂಬುದಾಗಿ ಆದೇಶಿಸುವುದಿಲ್ಲ” ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.
“ವಿಚ್ಛೇದನ ಪಡೆದ ಮಾತ್ರಕ್ಕೆ, ಪತಿಯಿಂದ ಬೇರಾದ ಮಾತ್ರಕ್ಕೆ ಆತನಿಂದ ಜೀವನಾಂಶ ಪಡೆಯಬೇಕು ಎಂಬ ಹಕ್ಕು ಇದ್ದರೂ, ಅದು ನಿಶ್ಚಿತವಾಗಿಲ್ಲ. ಪತಿಯ ಆದಾಯ ಉತ್ತಮವಾಗಿದ್ದು, ಪತ್ನಿಯು ಜೀವನ ಸಾಗಿಸಲು ಕಷ್ಟ ಅನುಭವಿಸುತ್ತಿರಬೇಕು. ಆಕೆಯು ತನಗೆ ಬೇಕಾದ ಅವಶ್ಯತೆಗಳ ಬಗ್ಗೆ ಮಾಹಿತಿ ನೀಡಬೇಕು. ಆಗ ಮಾತ್ರ ಆಕೆಯು ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಾಗುತ್ತಾಳೆ” ಎಂದು ಹೇಳಿದರು.
ಪತಿಗೆ ಉದ್ಯೋಗವಿಲ್ಲ
ಮಹಿಳೆಯ ಪತಿಯು ವೃತ್ತಿಯಲ್ಲಿ ವೈದ್ಯರಾಗಿದ್ದರೂ ಅವರು ಈಗ ಯಾವುದೇ ಉದ್ಯೋಗದಲ್ಲಿಲ್ಲ ಹಾಗೂ ಐಷಾರಾಮಿ ಜೀವನ ಸಾಗಿಸುತ್ತಿಲ್ಲ ಎಂಬ ವಿಷಯವನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿತು. “ಪತ್ನಿಯು ಪತಿಯಷ್ಟೇ ವಿದ್ಯಾರ್ಹತೆ ಹೊಂದಿದ್ದಾರೆ. ಹಾಗೆಯೇ, ಅವರು ತಮಗಿರುವ ಅವಶ್ಯಕತೆಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ಎಂಬಿಎ ಓದಿದರೂ ಉದ್ಯೋಗ ಹುಡುಕಿಲ್ಲ ಎಂಬ ಮಾಹಿತಿಯೂ ಇದೆ. ಹಾಗಾಗಿ, ಜೀವನಾಂಶ ನೀಡಬೇಕು ಎಂಬುದಾಗಿ ಆದೇಶಿಸಲು ಆಗುವುದಿಲ್ಲ” ಎಂದು ತಿಳಿಸಿದರು.
ಇದನ್ನೂ ಓದಿ: ವೃತ್ತಿಪರ ಭಿಕ್ಷುಕನಾಗಿದ್ದರೂ ಹೆಂಡತಿಗೆ ಜೀವನಾಂಶ ನೀಡಲೇಬೇಕು: ಹೈಕೋರ್ಟ್