ನವ ದೆಹಲಿ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾರನ್ನು ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಕ್ಕೆ ರಾಜಸ್ಥಾನದಲ್ಲಿ ಹಿಂದು ವ್ಯಕ್ತಿಯೊಬ್ಬನ ಶಿರಚ್ಛೇದ ಮಾಡಲಾಗಿದ್ದು, ಅದನ್ನು ತೀವ್ರವಾಗಿ ಖಂಡಿಸಿ ರಾಷ್ಟ್ರಾದ್ಯಂತ ಹಲವು ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಹಾಗೆಯೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಜೆಪಿ ಸಂಸದ ಗೌತಮ್ ಗಂಭೀರ್ ಸೇರಿ ವಿವಿಧ ರಾಜಕೀಯ ನಾಯಕರು ಈ ಕೃತ್ಯವನ್ನು ಖಂಡಿಸಿದ್ದಾರೆ.
ಮೃತ ವ್ಯಕ್ತಿ ಟೇಲರ್ ಆಗಿದ್ದ. ಈತನ ಅಂಗಡಿಗೆ ಗಿರಾಕಿಗಳಂತೆ ನುಗ್ಗಿದ್ದ ದುಷ್ಕರ್ಮಿಗಳು ಮೊದಲು ಚಾಕುವಿನಿಂದ ಹಲ್ಲೆ ಮಾಡಿ, ನಂತರ ತಲೆ ಕಡಿದಿದ್ದರು. ಅಷ್ಟಲ್ಲದೆ, ತಮ್ಮ ಕೃತ್ಯದ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಇವರಿಬ್ಬರೂ ಸೆರೆ ಸಿಕ್ಕಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ರಾಜಸ್ಥಾನದಲ್ಲಿ ನಡೆದ ಶಿರಚ್ಛೇದವನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟ್ವೀಟ್ ಮೂಲಕ ಖಂಡಿಸಿದ್ದಾರೆ. “”ಉದಯಪುರದಲ್ಲಿ ನಡೆದ ಭೀಕರ ಹತ್ಯೆಯಿಂದ ನಾನು ತೀವ್ರ ಆಘಾತಕ್ಕೊಳಗಾಗಿದ್ದೇನೆ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಸಹಿಸಲು ಸಾಧ್ಯವೇ ಇಲ್ಲ. ಇಂಥ ಕ್ರೌರ್ಯ ಕೃತ್ಯಗಳ ಮೂಲಕ ಭಯೋತ್ಪಾದನೆ ಪಸರಿಸುತ್ತಿರುವವರಿಗೆ ಕಠಿಣ ಶಿಕ್ಷೆಯಾಗಬೇಕು. ದ್ವೇಷವನ್ನು ತೊಡೆದುಹಾಕಲು ನಾವೆಲ್ಲರೂ ಒಟ್ಟಾಗಬೇಕು. ದಯವಿಟ್ಟು, ಶಾಂತಿ- ಭ್ರಾತೃತ್ವವನ್ನು ಕಾಪಾಡಿಕೊಳ್ಳಿ” ಎಂದು ಹೇಳಿದ್ದಾರೆ.
ಅತ್ಯಂತ ಭಯಾನಕವೆಂದ ಕೇಜ್ರಿವಾಲ್
ಉದಯಪುರದಲ್ಲಿ ನಡೆದ ಘಟನೆ ಅತ್ಯಂತ ಭಯಾನಕ ಮತ್ತು ಭೀಕರ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಟ್ವೀಟ್ ಮಾಡಿರುವ ಅವರು “ಇಷ್ಟು ಹೀನ-ಭಯಂಕರ ಕೃತ್ಯಗಳು ನಾಗರಿಕ ಸಮಾಜದಲ್ಲಿ ನಡೆಯಬಾರದು. ಹಿಂದು ವ್ಯಕ್ತಿಯ ಶಿರಚ್ಛೇದ ಮಾಡಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲೇಬೇಕು. ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಹೇಳಿದ್ದಾರೆ.
ಕಾನೂನು ಕೈಗೆತ್ತಿಕೊಳ್ಳಬಾರದು
ಆಲ್ ಇಂಡಿಯಾ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ರಾಜಸ್ಥಾನ ಘಟನೆ ಬಗ್ಗೆ ತೀವ್ರವಾಗಿ ಕಿಡಿಕಾರಿದ್ದಾರೆ. “ಉದಯ್‌ಪುರದಲ್ಲಿ ನಡೆದ ಭಯಾನಕ ಕೊಲೆಯನ್ನು ಸಮರ್ಥಿಸಲು ಸಾಧ್ಯವೇ ಇಲ್ಲ. ಹಿಂಸಾಚಾರವನ್ನು ನಮ್ಮ ಪಕ್ಷ ಯಾವಾಗಲೂ ವಿರೋಧಿಸುತ್ತದೆ. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಧರ್ಮಾಂದರ ವಿರುದ್ಧ ರಾಜಸ್ಥಾನ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ. ಅಂತಿಮವಾಗಿ ಕಾನೂನು ಎಲ್ಲರಿಗೂ ಒಂದೇ ಆಗಿರುತ್ತದೆ ಎಂಬುದನ್ನು ತೋರಿಸಬೇಕು” ಎಂದು ಹೇಳಿದ್ದಾರೆ.
ಸಚಿನ್ ಪೈಲಟ್-ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್
ರಾಜಸ್ಥಾನ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಟ್ವೀಟ್ ಮಾಡಿ “ಉದಯಪುರದಲ್ಲಿ ನಡೆದಿದ್ದು ಹೃದಯ ವಿದ್ರಾವಕ ಹತ್ಯೆ. ನಾನಿದನ್ನು ತೀವ್ರವಾಗಿ ಖಂಡಿಸುತ್ತೇನೆ. ಮನುಷ್ಯತ್ವವೇ ಇಲ್ಲದ ಆರೋಪಿಗಳಿಗೆ ಗಂಭೀರ ರೂಪದ ಶಿಕ್ಷೆಯಾಗಬೇಕು” ಎಂದು ಹೇಳಿದ್ದಾರೆ. ಹಾಗೇ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಟ್ವೀಟ್ ಮಾಡಿ ಘಟನೆಯನ್ನು ಖಂಡಿಸಿದ್ದಾರೆ. “ಉದಯಪುರ ಶಿರಚ್ಛೇದ ಘಟನೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಧರ್ಮದ ಹೆಸರಲ್ಲಿ ದ್ವೇಷ-ಹಿಂಸೆ ಬಿತ್ತುವವರು ನಮ್ಮ ದೇಶಕ್ಕೇ ಮಾರಕ. ಶಾಂತಿ ಮತ್ತು ಅಹಿಂಸೆಯನ್ನು ಸಾರಲು ನಾವೆಲ್ಲರೂ ಒಂದಾಗಬೇಕು” ಎಂದು ಹೇಳಿದ್ದಾರೆ.
ದೇಶದ ಅವಸಾನ!
ಬಿಜೆಪಿ ಸಂಸದ, ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಅವರು ತುಂಬ ಕಟು ಶಬ್ದಗಳಿಂದ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಕ್ಕೆ ಶಿರಚ್ಛೇದ ಮಾಡುತ್ತಾರೆ ಮತ್ತು ಇಂಥ ದುಷ್ಕೃತ್ಯ ಎಸಗಿಯೂ ಅವರು ಬದುಕುತ್ತಾರೆ ಎಂದಾದರೆ ಅದು ಈ ದೇಶದ ಅವಸಾನ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರ, ಕೇರಳ, ಪಂಜಾಬ್, ರಾಜಸ್ಥಾನ, ಪಶ್ಚಿಮ ಬಂಗಾಳದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರ ಎಂದ ಆರ್‌ಬಿಐ