Site icon Vistara News

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಅಧಿಕೃತ ಫಲಿತಾಂಶ ಘೋಷಣೆಗೂ ಅರ್ಧಗಂಟೆ ಮುನ್ನವೇ ಹೊಸ ಅಧ್ಯಕ್ಷರ ಹೆಸರು ಹೇಳಿದ್ದರು ರಾಹುಲ್ !

Rahul Gandhi Announced Congress President Name Before Results

ಕರ್ನೂಲ್​​: ಕಾಂಗ್ರೆಸ್​​ (ಎಐಸಿಸಿ) ಅಂತೂ 22 ವರ್ಷಗಳ ನಂತರ ಗಾಂಧಿಯೇತರ ಕುಟುಂಬದವರೊಬ್ಬರು ಅಧ್ಯಕ್ಷರಾಗಿದ್ದಾರೆ. ಕರ್ನಾಟಕದ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆ ಪಟ್ಟ ಒಲಿದಿದೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್​ 17ರಂದು ಚುನಾವಣೆ ನಡೆದಿತ್ತು. ಇಂದು (ಅ.19) ಮಧ್ಯಾಹ್ನ 1.30ರ ಹೊತ್ತಿಗೆ ಅಧ್ಯಕ್ಷರು ಯಾರು ಎಂದು ಫಲಿತಾಂಶ ಹೊರಬಿದ್ದಿದೆ. ಮಲ್ಲಿಕಾರ್ಜುನ್​ ಖರ್ಗೆಯವರೇ ಎಐಸಿಸಿಗೆ ಮುಂದಿನ ಅಧ್ಯಕ್ಷರು ಎಂದು ಎಐಸಿಸಿ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್​ ಮಿಸ್ತ್ರಿ ಅಧಿಕೃತವಾಗಿ ಘೋಷಿಸಿದರು.

ಆದರೆ ಹೀಗೆ ಕಾಂಗ್ರೆಸ್ ಅಧ್ಯಕ್ಷರ ಅಧಿಕೃತ ಘೋಷಣೆಗೂ ಅರ್ಧಗಂಟೆ ಮೊದಲೇ ರಾಹುಲ್​ ಗಾಂಧಿ ‘ಎಐಸಿಸಿಗೆ ಮುಂದಿನ ಅಧ್ಯಕ್ಷರು ಮಲ್ಲಿಕಾರ್ಜುನ್​ ಖರ್ಗೆಯೇ’ ಎಂಬುದನ್ನು ಹೇಳಿಬಿಟ್ಟಿದ್ದರು. ಅವರು ಊಹಾಪೋಹದ ಹೇಳಿಕೆ ನೀಡಿರಲಿಲ್ಲ, ಬದಲಿಗೆ ಖರ್ಗೆಯೇ ಅಧ್ಯಕ್ಷರು ಎಂಬುದನ್ನು ನಿಶ್ಚಿತವಾಗಿ ಹೇಳಿದ್ದರು.

ಭಾರತ್​ ಜೋಡೋ ಯಾತ್ರೆ ನಿಮಿತ್ತ ಆಂಧ್ರಪ್ರದೇಶದ ಕುಲ್ನೂರ್​​ನಲ್ಲಿರುವ ರಾಹುಲ್ ಗಾಂಧಿ ಅಲ್ಲಿ 1.30ಕ್ಕೂ ಮೊದಲೇ ಮಾಧ್ಯಮದವರ ಜತೆ ಮಾತನಾಡಿದ್ದರು. ಈ ವೇಳೆ ಮಾಧ್ಯಮ ಸಿಬ್ಬಂದಿ, ‘ಪಕ್ಷದಲ್ಲಿ ನಿಮ್ಮ ಪಾತ್ರ, ಹೊಣೆಗಾರಿಕೆ ಇನ್ನು ಮುಂದೆ ಏನಾಗಿರುತ್ತದೆ’ ಎಂದು ಕೇಳಿದರು. ಆಗ ಉತ್ತರಿಸಿದ ರಾಹುಲ್ ಗಾಂಧಿ ‘ಎಐಸಿಸಿಗೆ ಇಂದು ಹೊಸದಾಗಿ ನೇಮಕ ಆಗಲಿರುವ ಅಧ್ಯಕ್ಷರು ನನ್ನ ಹೊಣೆಗಾರಿಕೆಯನ್ನು ನಿರ್ಧಾರ ಮಾಡುತ್ತಾರೆ. ಕಾಂಗ್ರೆಸ್​​ನಲ್ಲಿ ನನ್ನ ಪಾತ್ರ ಏನಾಗಿರಲಿದೆ ಎಂಬುದನ್ನು ಖರ್ಗೆ ಅವರ ಬಳಿಯೋ, ಸೋನಿಯಾ ಗಾಂಧಿಯವರ ಬಳಿಯೋ ಕೇಳಬೇಕು’ ಎಂದು ಹೇಳಿದ್ದಾರೆ. ಆಗಿನ್ನೂ ಹೊಸ ಅಧ್ಯಕ್ಷರು ಮಲ್ಲಿಕಾರ್ಜುನ್​ ಖರ್ಗೆ ಎಂದು ಘೋಷಣೆ ಆಗಿರಲಿಲ್ಲ. ಹೀಗಿರುವಾಗಲೇ ರಾಹುಲ್ ಗಾಂಧಿ ನೂತನ ಅಧ್ಯಕ್ಷರ ಬಗ್ಗೆ ಮಾತನಾಡುತ್ತ, ಮಲ್ಲಿಕಾರ್ಜುನ್​ ಖರ್ಗೆ ಹೆಸರನ್ನು ಹೇಳಿಬಿಟ್ಟಿದ್ದರು.

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಮತ್ತು ಶಶಿ ತರೂರ್​ ಸ್ಪರ್ಧೆ ಮಾಡಿದ್ದರು. ಇವತ್ತು ಮತ ಎಣಿಕೆ ನಡೆದಿತ್ತು. ಆದರೆ ಮತ ಎಣಿಕೆ ನಡೆಯುತ್ತಿರುವಾಗಲೇ ಇತ್ತ ರಾಹುಲ್ ಗಾಂಧಿ ಮುಂದಿನ ಅಧ್ಯಕ್ಷರು ‘ಮಲ್ಲಿಕಾರ್ಜುನ್ ಖರ್ಗೆ’ ಯೇ ಎಂದು ನಿಶ್ಚಿತ ಅರ್ಥದಲ್ಲಿ ಹೇಳಿದ್ದು, ರಾಜಕೀಯ ವಲಯದಲ್ಲಿ ಈಗಾಗಲೇ ಇದ್ದ ಅನುಮಾನಗಳಿಗೆ ಪುಷ್ಟಿ ನೀಡುವಂತಿದೆ. ಮೊದಲು ಶಶಿ ತರೂರ್​ ಮತ್ತು ದಿಗ್ವಿಜಯ ಸಿಂಗ್​ ಕಣದಲ್ಲಿದ್ದರು. ಆದರೆ ಪ್ರಮಾಣಪತ್ರ ಸಲ್ಲಿಕೆಯ ಕೊನೇ ದಿನ ಖರ್ಗೆಯವರು ನಾಮಪತ್ರ ಸಲ್ಲಿಸಿದ್ದರು. ದಿಗ್ವಿಜಯ ಸಿಂಗ್​ ಹೊರಬಿದ್ದಿದ್ದರು. ಮಲ್ಲಿಕಾರ್ಜುನ್​ ಖರ್ಗೆಯವರನ್ನು ಅಧ್ಯಕ್ಷ ಸ್ಥಾನಕ್ಕೆ ಏರಿಸಲೆಂದೇ ಹೀಗೆ ಕೊನೇ ಕ್ಷಣದ ಬದಲಾವಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಅದೀಗ ನಿಜವೇ ಎನ್ನಿಸುತ್ತಿದೆ.

ಇದನ್ನೂ ಓದಿ: Kharge Congress President | ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಗೆಲುವು

Exit mobile version