ನವ ದೆಹಲಿ: ಟಿವಿ ಡಿಬೇಟ್‌ನಲ್ಲಿ ಪ್ರವಾದಿ ಮೊಹಮ್ಮದ್ ವಿರುದ್ಧ ಮಾತನಾಡಿದ್ದ ನೂಪುರ್ ಶರ್ಮಾಗೆ ಇಂದು ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ದುರಹಂಕಾರದ ಅಮಲಿನಿಂದ ಆಕೆ ಕೊಟ್ಟ ಹೇಳಿಕೆ ಇಡೀ ದೇಶದ ಭದ್ರತಾ ವ್ಯವಸ್ಥೆಗೆ ಅಪಾಯ ತಂದೊಡ್ಡಿತು. ನೂಪುರ್ ಶರ್ಮಾ ಇಡೀ ದೇಶದ ಕ್ಷಮೆ ಯಾಚಿಸಬೇಕು ಎಂದು ಹೇಳಿದೆ. ಆಕೆಯ ಮಾತುಗಳಿಂದ ಏನೆಲ್ಲ ಪ್ರತಿಭಟನೆ-ಹಿಂಸಾಚಾರಗಳು ನಡೆದವೋ ಅವೆಲ್ಲವಕ್ಕೂ ಆಕೆಯೇ ಸಂಪೂರ್ಣ ಜವಾಬ್ದಾರಿ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಖಡಾಖಂಡಿತವಾಗಿ ಹೇಳಿದ್ದಾರೆ. ಅದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿ, ʼಈ ದೇಶದಲ್ಲಿ ದ್ವೇಷ-ಕ್ರೋಧ-ವೈಷಮ್ಯದ ವಾತಾವರಣ ಸೃಷ್ಟಿಸಿದ್ದು ಕೇಂದ್ರ ಸರ್ಕಾರ. ಹಾಗಾಗಿ ಗಲಾಟೆಗಳೆಲ್ಲ ಕೇವಲ ನೂಪುರ್ ಶರ್ಮಾ ಒಬ್ಬರಿಂದ ಆಗಿದ್ದಲ್ಲʼ ಎಂದು ಹೇಳಿದ್ದಾರೆ.
ಇಂದು ಕೇರಳದ ವಯಾನಾಡಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನ ಮಾಡಿದ್ದಕ್ಕೆ ಇಡೀ ದೇಶದಲ್ಲಿ ನಡೆದ ಪ್ರತಿಭಟನೆ-ಹಿಂಸಾಚಾರಕ್ಕೆ ನೂಪುರ್ ಶರ್ಮಾ ಒಬ್ಬರೇ ಹೊಣೆಯೆಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ ವಾಸ್ತವ ಬೇರೆ ಇದೆ. ಅವರು ಹೇಳಿಕೆ ಕೊಟ್ಟ ತಕ್ಷಣ ಇವೆಲ್ಲ ನಡೆದಿಲ್ಲ. ಕೇಂದ್ರದಲ್ಲಿ ಆಡಳಿತದಲ್ಲಿರುವ ಸರ್ಕಾರ ಅದಾಗಲೇ ಬಿತ್ತಿರುವ ದ್ವೇಷದಿಂದಾಗಿ ಆಗಿದ್ದು. ಘಟನೆಗಳಿಗೆ ಪ್ರಧಾನಮಂತ್ರಿ ಗೃಹ ಮಂತ್ರಿ, ಆರ್‌ಎಸ್‌ಎಸ್‌ಗಳೂ ಜವಾಬ್ದಾರರು. ಇವರೆಲ್ಲ ಸೇರಿ ಹಬ್ಬಿಸಿದ ವೈಷಮ್ಯ ಕಾರಣ. ಆದರೆ ಇದೆಲ್ಲವೂ ಈ ದೇಶದ, ಜನರ ಹಿತಾಸಕ್ತಿಗೆ ವಿರುದ್ಧವಾದ ಬೆಳವಣಿಗೆಗಳು” ಎಂದು ಹೇಳಿದ್ದಾರೆ.
ನಾವು ಸೇತುವೆಯಾಗಿದ್ದವು !
“ನಮ್ಮ ಕಾಂಗ್ರೆಸ್ ಪಕ್ಷ, ಸಮುದಾಯಗಳ ಮಧ್ಯೆ ಸೇತುವೆಯಾಗಿತ್ತು. ನಾವು ಜನರನ್ನು ಒಗ್ಗಟ್ಟಾಗಿಸಿದ್ದೆವು. ಆದರೆ ಈಗ ಆರ್‌ಎಸ್‌ಎಸ್ ಮತ್ತು ಬಿಜೆಪಿಗಳು ದೇಶದಲ್ಲಿ ಏನು ಮಾಡಿವೆ? ಮಾಡುತ್ತಿವೆ? ಎಂಬುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ನಾವು ಕಾಂಗ್ರೆಸ್ಸಿಗರು ಎಂದಿಗೂ ಸಮಸ್ಯೆಗಳನ್ನು ದ್ವೇಷ-ಸಿಟ್ಟಿನ ಮೂಲಕ ಬಗೆಹರಿಸುವುದಿಲ್ಲ. ಇವೆಲ್ಲವೂ ನಮ್ಮ ಸಿದ್ಧಾಂತಕ್ಕೆ ವಿರೋಧ. ಹೀಗೆ ಮುಂದುವರಿದರೆ ಮುಂದೊಂದು ದಿನ ದೊಡ್ಡ ದುರಂತವೇ ನಡೆಯಲಿದೆ” ಎಂದು ರಾಹುಲ್ ಗಾಂಧಿ ಹೇಳಿದರು.
ಇದನ್ನೂ ಓದಿ: ನೂಪುರ್ ಶರ್ಮಾಗೆ ಸುಪ್ರೀಂ ತಪರಾಕಿ: ನಾಲಿಗೆ ಹರಿಬಿಡುವವರಿಗೆ ಕಪಾಳಮೋಕ್ಷ