Site icon Vistara News

ರಾಹುಲ್ ಗಾಂಧಿಯವರೇ ನೀವು ಸಾವರ್ಕರ್ ಆಗಲು ಸಾಧ್ಯವೇ ಇಲ್ಲ, ಯಾಕೆಂದರೆ..; ಅಜ್ಜಿಯನ್ನು ನೆನಪಿಸಿ ತಿರುಗೇಟು ಕೊಟ್ಟ ಅನುರಾಗ್ ಠಾಕೂರ್​

Anurag Thakur On Renaming India Name Row

India vs Bharat row: Centre rejects speculation as just rumours

ನವ ದೆಹಲಿ: ಮೋದಿ ಉಪನಾಮದ ಬಗ್ಗೆ ನೀಡಿದ ಹೇಳಿಕೆ ಬಗ್ಗೆ ಕ್ಷಮೆ ಕೇಳುವುದಿಲ್ಲ ಎಂದು ಹೇಳಿರುವ ರಾಹುಲ್ ಗಾಂಧಿ ‘ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ, ಗಾಂಧಿ’ ಎಂಬ ಮಾತನ್ನು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಹೀಗೆ ನಾನು ಸಾವರ್ಕರ್ ಅಲ್ಲ ಎಂದಿದ್ದ ರಾಹುಲ್ ಗಾಂಧಿಯವರಿಗೆ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್​ ತಿರುಗೇಟು ಕೊಟ್ಟಿದ್ದಾರೆ. ‘ನೀವು ಎಂದಿಗೂ ಸಾವರ್ಕರ್ ಆಗಲು ಸಾಧ್ಯವೇ ಇಲ್ಲ’ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಸಾಲುಸಾಲು ಟ್ವೀಟ್​​ನಲ್ಲಿ ಕೆಲವು ದಾಖಲೆಗಳನ್ನು ಶೇರ್ ಮಾಡಿಕೊಂಡು, ‘ರಾಹುಲ್ ಗಾಂಧಿ ಹೇಗೆ ಸಾವರ್ಕರ್ ಆಗಲು ಸಾಧ್ಯವೇ ಇಲ್ಲ’ ಎಂಬುದನ್ನು ವಿವರಿಸಿದ್ದಾರೆ. ಹಾಗೇ, ನಿಮ್ಮ ಅಜ್ಜಿ ಇಂದಿರಾಗಾಂಧಿಯವರಿಗೆ ಸಾವರ್ಕರ್ ಬೆಲೆ ಗೊತ್ತಿತ್ತು, ಅವರು ವೀರ ಸಾವರ್ಕರ್​​ರನ್ನು ಗೌರವಿಸಿದ್ದರು ಎಂದೂ ಅವರು ಹೇಳಿದ್ದಾರೆ.

ಟ್ವೀಟ್ ಮಾಡಿದ ಅನುರಾಗ್ ಠಾಕೂರ್​ ‘ಡಿಯರ್ ರಾಹುಲ್ ಗಾಂಧಿಯವರೇ, ನೀವೆಂದೂ ಸಾವರ್ಕರ್​ ಆಗಲು ಸಾಧ್ಯವೇ ಇಲ್ಲ. ನಿಮ್ಮ ಕನಸಲ್ಲೂ ನೀವು ಸಾವರ್ಕರ್ ಆಗಲಾರಿರಿ. ಸಾವರ್ಕರ್​ ಆಗಬೇಕೆಂದರೆ ದೃಢ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇರಬೇಕು. ಭಾರತದ ದೇಶವನ್ನು ಪ್ರೀತಿಸಬೇಕು. ನಿಸ್ವಾರ್ಥಿಯಾಗಬೇಕು ಮತ್ತು ಬದ್ಧತೆ ಇರಬೇಕು. ಆದರೆ ರಾಹುಲ್ ಗಾಂಧಿಯವರೇ ನಿಮಗೆ ಇದ್ಯಾವುದೂ ಇಲ್ಲ. ಹಾಗಾಗಿ ನೀವೆಂದೂ ಸಾವರ್ಕರ್ ಆಗಲಾರಿರಿ’ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲ, ರಾಹುಲ್ ಗಾಂಧಿಯವರ ಅಜ್ಜಿ, ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು, ವೀರ ಸಾವರ್ಕರ್​ ಅವರನ್ನು ಯಾವೆಲ್ಲ ಸಂದರ್ಭಗಳಲ್ಲಿ, ಹೇಗೆ ಗೌರವಿಸಿದ್ದರು. ಅವರಿಗೆ ಎಷ್ಟು ಮನ್ನಣೆ ಕೊಟ್ಟಿದ್ದರು ಎಂಬುದನ್ನೂ ಅನುರಾಗ್ ಠಾಕೂರ್​ ಟ್ವಿಟರ್​ನಲ್ಲಿ ವಿವರಿಸಿ, ರಾಹುಲ್ ಗಾಂಧಿಗೆ ಪಾಠ ಹೇಳಿದ್ದಾರೆ. ‘ವೀರ ಸಾವರ್ಕರ್ ಅವರು ಬರೆದ ಪುಸ್ತಕ ‘ಭಾರತದ ಮೊದಲ ಸ್ವಾತಂತ್ರ್ಯ ಹೋರಾಟ (India’s first freedom struggle) ಪಂಜಾಬಿ ಭಾಷೆಗೆ ತರ್ಜುಮೆಗೊಂಡಿದೆ. ಭಗತ್ ಸಿಂಗ್ ಕೂಡ ರತ್ನಗಿರಿಗೆ ಹೋಗಿ ವೀರ ಸಾವರ್ಕರ್ ಅವರನ್ನು ಭೇಟಿಯಾಗಿದ್ದರು. ಆ ಪುಸ್ತಕವನ್ನು ಮುದ್ರಿಸಿದ್ದರು. ತಾವು ಜೈಲಿನಲ್ಲಿದ್ದಾಗ, ಮರಣದಂಡನೆಗೆ ಒಳಗಾಗುವುದಕ್ಕೂ ಮೊದಲು ಸಾವರ್ಕರ್ ಪುಸ್ತಕದಲ್ಲಿರುವ ವಿಷಯಗಳನ್ನು ಡೈರಿಯಲ್ಲಿ ಬರೆದಿಟ್ಟುಕೊಳ್ಳುತ್ತಿದ್ದರು’ ಹೀಗೆಲ್ಲ ಇರುವಾಗ ಬುದ್ಧಿ ಇಲ್ಲದ ಕೆಲವರು ಮಾತ್ರ ವೀರ ಸಾವರ್ಕರ್ ಅವರನ್ನು ಟೀಕಿಸುತ್ತ, ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

ಮತ್ತೊಂದು ಟ್ವೀಟ್ ಮಾಡಿದ ಅನುರಾಗ್ ಠಾಕೂರ್ ಅವರು, ಇಂದಿರಾ ಗಾಂಧಿಯವರು ವೀರ ಸಾವರ್ಕರ್​​ಗೆ ಬರೆದಿದ್ದ ಪತ್ರವನ್ನು, ಅವರ ಆಡಳಿತದಲ್ಲಿ ಹೊರತರಲಾಗಿದ್ದ ಸಾವರ್ಕರ್ ಫೋಟೋ ಇರುವ ಅಂಚೆಚೀಟಿ (ಸ್ಟಾಂಪ್) ಯನ್ನು ಶೇರ್ ಮಾಡಿಕೊಂಡಿದ್ದಾರೆ. ‘ಸಾವರ್ಕರ್​ ಅವರನ್ನು ದೊಡ್ಡದೊಡ್ಡ ನಾಯಕರೂ ಗೌರವಿಸುತ್ತಾರೆ. ಅವರ ದೇಶಭಕ್ತಿ, ಶೌರ್ಯದ ಬಗ್ಗೆ ಎಲ್ಲರಿಗೂ ಗೊತ್ತು. ಇಂದಿರಾ ಗಾಂಧಿಯವರು ತಮ್ಮ ಆಡಳಿತ ಅವಧಿಯಲ್ಲಿ ಸಾವರ್ಕರ್ ಫೋಟೋ ಇರುವ ಅಂಚೆ ಚೀಟಿ ಹೊರತಂದಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನಿಮ್ಮ ಕೊಡುಗೆ ಅತ್ಯಂತ ದೊಡ್ಡದು ಎಂದು ಅವರಿಗೆ ಪತ್ರವನ್ನೂ ಬರೆದಿದ್ದರು. ಸಾವರ್ಕರ್ ಸಾಧನೆ ಮತ್ತು ಅವರೆಡೆಗೆ ದೇಶದ ಜನರೆಡೆಗೆ ಇದ್ದ ಗೌರವದ ಇತಿಹಾಸ ಇಲ್ಲಿಗೆ ಮುಗಿಯುವುದಿಲ್ಲ. ಹೀಗೆ ಬರುತ್ತಲೇ ಇರುತ್ತದೆ’ ಎಂದು ಹೇಳಿದ್ದಾರೆ.

‘ರಾಹುಲ್ ಗಾಂಧಿಯವರ ಅಜ್ಜಿ ಇಂದಿರಾ ಗಾಂಧಿಯವರು ಸಾವರ್ಕರ್ ಗೌರವಾರ್ಥವಾಗಿ ಏನೆನೆಲ್ಲ ಮಾಡಿದರು ಎಂಬುದು ದೇಶಕ್ಕೆ ಗೊತ್ತು. ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಕಾಲದಲ್ಲೂ, ಯಾರೂ ಸಾವರ್ಕರ್​ ಬಗ್ಗೆ ತಪ್ಪಾಗಿ ಮಾತನಾಡುತ್ತಿರಲಿಲ್ಲ. ಆದರೆ ಈಗ ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ಸಾವರ್ಕರ್​ಗೆ ಬೈಯ್ಯುವ ಮೂಲಕ ಅವರು ತಮ್ಮ ಅಜ್ಜಿಯವರಿಗೆ, ನೇತಾಜಿ ಬೋಸ್​, ಭಗತ್​ ಸಿಂಗ್​ ಮತ್ತು ಗಾಂಧಿಯವರಿಗೂ ಅಪಮಾನ ಮಾಡುತ್ತಿದ್ದಾರೆ’ ಎಂದು ಅನುರಾಗ್ ಠಾಕೂರ್​ ಹೇಳಿದ್ದಾರೆ.

Exit mobile version