ನವದೆಹಲಿ: ೨೦೦೨ರಲ್ಲಿ ಗೋಧ್ರಾ ಹತ್ಯಾಕಾಂಡದ ವೇಳೆ ಬಿಲ್ಕಿಸ್ ಬಾನೊ (Bilkis Bano Case) ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ೧೧ ಅಪರಾಧಿಗಳನ್ನು ಸ್ವಾತಂತ್ರ್ಯ ದಿನದಂದೇ ಗುಜರಾತ್ ಸರಕಾರ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ( Narendra Modi) ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. “ಮಹಿಳೆಯರಿಗೆ ನೀವು ನೀಡಿದ ಸಂದೇಶವಾದರೂ ಏನು” ಎಂದು ಪ್ರಶ್ನೆಸಿದಿದ್ದಾರೆ.
“ನರೇಂದ್ರ ಮೋದಿ ಅವರು ನಾರಿ ಶಕ್ತಿ ಬಗ್ಗೆ ಮಾತನಾಡುತ್ತಾರೆ. ಆದರೆ, ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಅಪರಾಧಿಗಳನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ದಿನದಂದೇ ಬಿಜೆಪಿ ಬಿಡುಗಡೆ ಮಾಡಿದೆ. ಹಾಗಾದರೆ, ನರೇಂದ್ರ ಮೋದಿ ಅವರು ಆಡುವ ಮಾತಿಗೂ, ನಡೆದುಕೊಳ್ಳುವ ರೀತಿಗೂ ಅಜಗಜಾಂತರ ಇದೆ ಎಂದಾಗುತ್ತದೆ. ಅಷ್ಟಕ್ಕೂ, ಬಿಜೆಪಿಯು ಮಹಿಳೆಯರಿಗೆ ನೀಡಿದ ಸಂದೇಶವಾದರೂ ಏನು” ಎಂದು ಪ್ರಶ್ನಿಸಿದ್ದಾರೆ.
ಗೋಧ್ರಾ ಹತ್ಯಾಕಾಂಡದ ವೇಳೆ ಬಿಲ್ಕಿಸ್ ಬಾನೊ ಎಂಬ ಐದು ತಿಂಗಳ ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಹಾಗೆಯೇ, ಅವರ ಮೂರು ವರ್ಷದ ಮಗಳನ್ನೂ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ದುಷ್ಕರ್ಮಿಗಳನ್ನು ಬಂಧಿಸಿ, ತನಿಖೆ ನಡೆದ ಬಳಿಕ ೨೦೦೮ರಲ್ಲಿ ನ್ಯಾಯಾಲಯವು ೧೧ ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಇದನ್ನೂ ಓದಿ | Bilkis Bano Case | ಬಿಲ್ಕೀಸ್ ಬಾನೋ ರೇಪ್ ಕೇಸ್ನ 11 ಆರೋಪಿಗಳು ಬಿಡುಗಡೆ; ಓವೈಸಿ ಆಕ್ರೋಶ