ಜೈಪುರ: ಭಾರತ್ ಜೋಡೋ ಯಾತ್ರೆ ರಾಜಸ್ಥಾನದಲ್ಲಿ ಸಾಗುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೊಂದಿಗೆ ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಸೇರಿ ಹಲವರು ಪಾದಯಾತ್ರೆ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ ಈ ಪಾದಯಾತ್ರೆ ನಡೆಸುತ್ತಿರುವ ಲಾಗಾಯ್ತಿನಿಂದಲೂ ಜನಸಾಮಾನ್ಯರ ಬಳಿ ಮಾತನಾಡುತ್ತ, ಅವರ ಕಷ್ಟಸುಖ, ಕುಂದುಕೊರತೆ ಆಲಿಸುತ್ತ ಸಾಗುತ್ತಿದ್ದಾರೆ. ಮಧ್ಯೆಮಧ್ಯೆ ಆಯಾ ಸ್ಥಳದ ಸಾಂಪ್ರದಾಯಿಕ ನೃತ್ಯ, ಆಚರಣೆಗಳಲ್ಲಿ ಪಾಲ್ಗೊಂಡಿದ್ದನ್ನೂ ನೋಡಿದ್ದೇವೆ. ಈಗ ಅವರು ರಾಜಸ್ಥಾನದಲ್ಲಿ ರೈತರೊಂದಿಗೆ ಸೇರಿ, ಮಶಿನ್ ನಲ್ಲಿ ಮೇವು ಕತ್ತರಿಸಿದ್ದಾರೆ.
ಸದ್ಯ ದೌಸಾದಲ್ಲಿ ಭಾರತ್ ಜೋಡೋ ಯಾತ್ರೆ ಸಾಗುತ್ತಿದೆ. ಗುರುವಾರ ಸಂಜೆ ಇವರೆಲ್ಲ ಸಾಗುತ್ತಿದ್ದ ಮಾರ್ಗ ಮಧ್ಯೆ ಒಂದಷ್ಟು ರೈತರು ಜಾನುವಾರುಗಳಿಗಾಗಿ ಹುಲ್ಲು ಕತ್ತರಿಸುತ್ತಿದ್ದರು. ಅದೊಂದು ಕೈ ಚಾಲಿತ ಯಂತ್ರವಾಗಿದ್ದು, ಒಂದೆಡೆ ಹುಲ್ಲು ಹಾಕಿ, ಇನ್ನೊಂದೆಡೆ ಗಾಲಿ ತಿರುಗಿಸಬೇಕು. ರಾಹುಲ್ ಗಾಂಧಿ ಮೊದಲು ಮೇವು ಕತ್ತರಿಸಿದರು. ಬಳಿಕ ಅಶೋಕ್ ಗೆಹ್ಲೊಟ್ ಕೂಡ ಈ ಪ್ರಯತ್ನ ಮಾಡಿದರು. ಈ ಫೋಟೋವನ್ನು ಕಾಂಗ್ರೆಸ್ ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದೆ.
ಸೆಪ್ಟೆಂಬರ್ ನಲ್ಲಿ ಪ್ರಾರಂಭವಾದ ಭಾರತ್ ಜೋಡೋ ಯಾತ್ರೆ ಇಂದು 100 ನೇ ದಿನ ಪೂರೈಸಲಿದೆ. ತನ್ನಿಮಿತ್ತ ಜೈಪುರದಲ್ಲಿ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇಷ್ಟೂ ದಿನ ರಾಹುಲ್ ಗಾಂಧಿ ಮತ್ತು ಇತರ ಕೈ ನಾಯಕರು ದಿನಕ್ಕೆ 20-25 ಕಿಮಿ ದೂರ ನಡೆಯುತ್ತಿದ್ದಾರೆ. ಇತರ ಕ್ಷೇತ್ರಗಳ ಗಣ್ಯರೂ ಸಾಥ್ ನೀಡುತ್ತಿದ್ದಾರೆ.
ಇದನ್ನೂ ಓದಿ: Bharath Jodo Yatra | ಕಾಂಗ್ರೆಸ್‌ನ ಟ್ವಿಟರ್ ಹ್ಯಾಂಡಲ್ ಸ್ಥಗಿತ ಆದೇಶ ವಜಾಗೊಳಿಸಿದ ಹೈಕೋರ್ಟ್