ನವ ದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯನ್ನು ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಇ ಡಿ ವಿಚಾರಣೆಗೆ ಒಳಪಡಿಸುತ್ತಿರುವುದನ್ನು ವಿರೋಧಿಸಿ ದೆಹಲಿ ವಿಜಯ ಚೌಕ್‌ನಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳಗ್ಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಂಸತ್ತಿನ ಎದುರಿನ ಗಾಂಧಿ ಪ್ರತಿಮೆಯಿಂದ ಮೆರವಣಿಗೆ ಹೊರಟು ವಿಜಯ್ ಚೌಕ್‌ಗೆ ಬಂದಿದ್ದ ಕಾಂಗ್ರೆಸ್ ಸಂಸದರು ಇಲ್ಲಿ ರಸ್ತೆಯ ಮೇಲೆ ಕುಳಿತು ಸತ್ಯಾಗ್ರಹ ನಡೆಸುತ್ತಿದ್ದಾರೆ. ಇವರೊಂದಿಗೆ ಅಪಾರ ಸಂಖ್ಯೆಯ ಕಾರ್ಯಕರ್ತರೂ ಕೂಡಿಕೊಂಡಿದ್ದರು. ಇದೀಗ ಪ್ರತಿಭಟನಾ ನಿರತರಾಗಿದ್ದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಸುರೇಶ್ ಸೇರಿ ಹಲವರನ್ನು ದೆಹಲಿ ಪೊಲೀಸರು ಬಂಧಿಸಿ, ಪಾರ್ಲಿಮೆಂಟ್ ಸ್ಟ್ರೀಟ್ ಠಾಣೆಗೆ ಕರೆದೊಯ್ದಿದ್ದಾರೆ.
ರಾಹುಲ್ ಗಾಂಧಿ ಮತ್ತು ಅನೇಕರು ವಿಜಯ ಚೌಕ್‌ದ ಬಳಿ ಕುಳಿತು ಪ್ರತಿಭಟನೆ ನಡೆಸಿ ಅವ್ಯವಸ್ಥೆ ಸೃಷ್ಟಿಸಿದ್ದರು. ಸ್ಥಳಕ್ಕೆ ಬಂದ ಪೊಲೀಸರು ರಾಹುಲ್ ಗಾಂಧಿಯನ್ನು ಬಂಧಿಸದೆ, ಅಲ್ಲಿಂದ ಸಭ್ಯವಾಗಿ ಕರೆದುಕೊಂಡು ಹೋಗಲು ಪ್ರಯತ್ನಿಸಿದರು. ಬಸ್‌ನಲ್ಲಿ ಕುಳಿತುಕೊಳ್ಳುವಂತೆ ಅವರ ಮನವೊಲಿಸಲು ಯತ್ನಿಸಿದರು. ಆದರೆ ರಾಹುಲ್ ಗಾಂಧಿ ಮಾತು ಕೇಳಲಿಲ್ಲ. ಎಷ್ಟೇ ಹೇಳಿದರೂ ಬಸ್‌ನಲ್ಲಿ ಕುಳಿತುಕೊಳ್ಳದೆ ಇದ್ದಾಗ ಬಂಧಿಸಿ, ಬಸ್‌ನಲ್ಲಿ ಬಲವಂತವಾಗಿ ಕೂರಿಸಿ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಸೋನಿಯಾ ಗಾಂಧಿ ವಿಚಾರಣೆ ಬಗ್ಗೆ ಕಿಡಿಕಾರಿದ ಮಲ್ಲಿಕಾರ್ಜುನ್ ಖರ್ಗೆ, ʼಪ್ರಧಾನಮಂತ್ರಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿಕೊಂಡು ಪ್ರತಿಪಕ್ಷಗಳನ್ನೇ ನಾಶ ಮಾಡುತ್ತಿದ್ದಾರೆ. ನಮ್ಮ ಧ್ವನಿಯನ್ನು ಹತ್ತಿಕ್ಕುತ್ತಿದ್ದಾರೆ. ಪೊಲೀಸರು ನೀಡಿದ ಸೂಚನೆಯನ್ನೆಲ್ಲ ಪಾಲಿಸಿಯೇ ನಾವು ಮತ್ತು ನಮ್ಮ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರೂ ಪೊಲೀಸರು ಬಂಧಿಸಲು ಬರುತ್ತಾರೆ. ಇವೆಲ್ಲವೂ ಕೇಂದ್ರ ಸರ್ಕಾರದ ಪಿತೂರಿ. ಆದರೆ ನಾವು ಯಾರಿಗೂ ಹೆದರುವುದಿಲ್ಲ. ನಮ್ಮ ಹೋರಾಟ ಮುಂದುವರಿಯುತ್ತದೆ ಎಂದಿದ್ದಾರೆ. ಇಂದು ಕಾಂಗ್ರೆಸ್ ನಾಯಕರು ಕಾರ್ಯಕರ್ತರು ಎಐಸಿಸಿ ಪ್ರಧಾನ ಕಚೇರಿ ಎದುರೂ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿ ಮಾತ್ರವಲ್ಲದೆ ಉತ್ತರ ಪ್ರದೇಶ, ಬಿಹಾರ ಸೇರಿ ದೇಶದ ಹಲವು ಭಾಗಗಳಲ್ಲಿ ಸತ್ಯಾಗ್ರಹ ಪ್ರಾರಂಭವಾಗಿದೆ. ಉತ್ತರ ಪ್ರದೇಶದ ಹಜ್ರತ್‌ಗಂಜ್‌ನಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯಿಂದ ಕಾಂಗ್ರೆಸ್ಸಿಗರು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಇ ಡಿ ವಿಚಾರಣೆ ಇಂದು; ರಾಜ್ ಘಾಟ್‌ನಲ್ಲಿ ಸೆಕ್ಷನ್ 144 ಜಾರಿ