ನವ ದೆಹಲಿ: ಮೋದಿ ಸರ್ನೇಮ್ಗೆ ಅಪಮಾನ ಮಾಡಿದ ಕೇಸ್ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi)ಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಸೂರತ್ ಕೆಳ ನ್ಯಾಯಾಲಯ ವಿಧಿಸಿರುವ ಜೈಲು ಶಿಕ್ಷೆಗೆ ತಡೆಕೋರಿ ಅವರು ಗುಜರಾತ್ ಹೈಕೋರ್ಟ್ (Gujarat High Court) ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಯಾವುದೇ ಮಧ್ಯಂತರ ತಡೆ ನೀಡಲು ನಿರಾಕರಿಸಿದೆ. ನ್ಯಾಯಾಲಯದ ಬೇಸಿಗೆ ರಜಾ ಅವಧಿ ಮುಗಿದ ನಂತರ, ಜೂನ್ 4ರ ಬಳಿಕ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.
2019ರಲ್ಲಿ ಲೋಕಸಭೆ ಚುನಾವಣೆ ವೇಳೆ ಕೋಲಾರದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿಯವರು ಮೋದಿ ಎಂಬ ಉಪನಾಮ ಹೊಂದಿರುವವರೆಲ್ಲ ಕಳ್ಳರೇ ಆಗಿರುತ್ತಾರೆ ಎಂದು ಹೇಳಿದ್ದರು. ಈ ಹೇಳಿಕೆಯನ್ನು ವಿರೋಧಿಸಿ, ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಸೂರತ್ ಕೆಳ ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ಮಾರ್ಚ್ 23ರಂದು ತೀರ್ಪು ಪ್ರಕಟಿಸಿರುವ ಸೂರತ್ ಕೋರ್ಟ್ ರಾಹುಲ್ ಗಾಂಧಿಯವರು ದೋಷಿ ಎಂದು ಹೇಳಿ, 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಈ ಶಿಕ್ಷೆಯ ಕಾರಣಕ್ಕೆ ರಾಹುಲ್ ಗಾಂಧಿ ತಮ್ಮ ಲೋಕಸಭಾ ಸದಸ್ಯನ ಸ್ಥಾನವನ್ನೂ ಕಳೆದುಕೊಂಡಿದ್ದಾರೆ.
ಕಾನೂನು ಹೋರಾಟ ನಡೆಸುತ್ತಿರುವ ರಾಹುಲ್ ಗಾಂಧಿ ಸೂರತ್ ಕೆಳ ನ್ಯಾಯಾಲಯದ ತೀರ್ಪಿನ ವಿರುದ್ಧ ಮೊದಲು ಸೂರತ್ ಸೆಷನ್ಸ್ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ, ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೇಳಿದ್ದರು. ಆದರೆ ಸೆಷನ್ಸ್ ಕೋರ್ಟ್ನಲ್ಲಿ ಅವರಿಗೆ ಸೋಲಾಗಿತ್ತು. ಸೂರತ್ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದ ಸೆಷನ್ಸ್ ಕೋರ್ಟ್, ರಾಹುಲ್ ಗಾಂಧಿ ಅರ್ಜಿಯನ್ನು ವಜಾಗೊಳಿಸಿತ್ತು. ಹೈಕೋರ್ಟ್ಗೆ ಅರ್ಜಿ ಸಲ್ಲಿಸಲು 30ದಿನಗಳ ಅವಕಾಶ ಕೊಟ್ಟಿತ್ತು. ಬಳಿಕ ರಾಹುಲ್ ಗಾಂಧಿ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಏಪ್ರಿಲ್ 29ರಂದು ವಿಚಾರಣೆ ನಡೆಸಿದ್ದ ಗುಜರಾತ್ ಹೈಕೋರ್ಟ್ ಇಂದಿಗೆ (ಮೇ 2) ವಿಚಾರಣೆ ಮುಂದೂಡಿತ್ತು. ಆದರೆ ಇಂದು ಕೋರ್ಟ್ ಯಾವುದೇ ತೀರ್ಪು ನೀಡಿಲ್ಲ. ಅಂತಿಮ ತೀರ್ಪು ನೀಡುವವರೆಗೆ, ರಾಹುಲ್ ಗಾಂಧಿಯವರಿಗೆ ವಿಧಿಸಲಾದ ಜೈಲು ಶಿಕ್ಷೆಯಿಂದ ಮಧ್ಯಂತರ ರಕ್ಷಣೆಯನ್ನಾದರೂ ಕೊಡಿ ಎಂದು ಅವರ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಕೋರ್ಟ್ಗೆ ಮನವಿ ಮಾಡಿದ್ದರು. ಆದರೆ ಕೋರ್ಟ್ ಆ ಮಧ್ಯಂತರ ರಕ್ಷಣೆಯನ್ನೂ ನೀಡಲು ನಿರಾಕರಿಸಿದೆ.
ಗುಜರಾತ್ ಹೈಕೋರ್ಟ್ ಏನಾದರೂ ರಾಹುಲ್ ಗಾಂಧಿ ಶಿಕ್ಷೆಗೆ ತಡೆ ನೀಡಿದ್ದರೆ, ಅವರು ತಮ್ಮ ಲೋಕಸಭಾ ಸದಸ್ಯನ ಸ್ಥಾನವನ್ನು ಮರಳಿ ಪಡೆಯಲು ದಾರಿಯಾಗುತ್ತಿತ್ತು. ಇನ್ನು ಮೇ 5ರಿಂದ ಗುಜರಾತ್ ಹೈಕೋರ್ಟ್ಗೆ ರಜಾ ಶುರುವಾಗಲಿದ್ದು, ಮತ್ತೆ ಬಾಗಿಲು ತೆರೆಯುವುದು ಜೂ.5ಕ್ಕೆ.
ಇದನ್ನೂ ಓದಿ: ಮೋದಿ ಸರ್ನೇಮ್ಗೆ ಅವಮಾನ; ರಾಹುಲ್ ಗಾಂಧಿ ಮೇಲ್ಮನವಿ ವಿಚಾರಣೆ ನಡೆಸಲು ಒಪ್ಪದ ಗುಜರಾತ್ ಹೈಕೋರ್ಟ್ ಮಹಿಳಾ ಜಡ್ಜ್!