ತೆಲಂಗಾಣದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದ ಸಂದರ್ಭದಲ್ಲಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದ ನಟಿ ಪೂನಮ್ ಕೌರ್ ಅವರ ಕೈಯನ್ನು ರಾಹುಲ್ ಗಾಂಧಿ ಹಿಡಿದುಕೊಂಡಿರುವ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ಪೂನಮ್ ಅವರ ಎಡಗೈಯನ್ನು, ರಾಹುಲ್ ಗಾಂಧಿ ತಮ್ಮ ಬಲಗೈಯಿಂದ ಭದ್ರವಾಗಿ ಹಿಡಿದುಕೊಂಡಿವ ಫೋಟೋವನ್ನು ಬಿಜೆಪಿ ಕಾರ್ಯಕರ್ತೆ ಪ್ರೀತಿ ಗಾಂಧಿ ಎಂಬುವರು ಟ್ವೀಟ್ ಮಾಡಿ, ‘ರಾಹುಲ್ ಗಾಂಧಿ ತನ್ನ ಅಜ್ಜ (ನೆಹರೂ)ನ ಹಾದಿಯಲ್ಲೇ ಸಾಗುತ್ತಿದ್ದಾರೆ..!!’ ಎಂದು ವ್ಯಂಗ್ಯವಾಗಿ ಕಮೆಂಟ್ ಮಾಡಿದ್ದರು. ಹೀಗೆ ಅನೇಕರು ಈ ಫೋಟೋ ನೋಡಿ ಕೀಳಾಗಿ ಕ್ಯಾಪ್ಷನ್ ಹಾಕಿದ್ದರು.
ಅದರ ಬೆನ್ನಲ್ಲೇ ಈಗ ನಟಿ ಪೂನಮ್ ಕೌರ್ ಟ್ವೀಟ್ ಮಾಡಿ, ರಾಹುಲ್ ಗಾಂಧಿ ಯಾವ ಸಂದರ್ಭದಲ್ಲಿ ತಮ್ಮ ಕೈ ಹಿಡಿದುಕೊಂಡರು ಎಂಬುದನ್ನು ವಿವರಿಸಿದ್ದಾರೆ. ಪ್ರೀತಿ ಗಾಂಧಿ ಟ್ವೀಟ್ನ್ನು ರೀಟ್ವೀಟ್ ಮಾಡಿಕೊಂಡ ಪೂನಮ್ ‘ನೋಡಿ, ಇಂಥ ಮಾತುಗಳನ್ನು ಆಡುವುದು ನಿಮಗೇ ಅವಮಾನ. ಪ್ರಧಾನಮಂತ್ರಿಯವರು ನಾರಿಶಕ್ತಿ ಬಗ್ಗೆ ಮಾತನಾಡಿದ್ದನ್ನು ಒಮ್ಮೆ ನೆನಪಿಸಿಕೊಳ್ಳಿ. ಪಾದಯಾತ್ರೆಯಲ್ಲಿ ನನ್ನ ಕಾಲು ಎಡವಿ, ಬೀಳುವವಳಿದ್ದೆ. ಆಗ ರಾಹುಲ್ ಗಾಂಧಿ ನನ್ನ ಕೈ ಹಿಡಿದುಕೊಂಡರು’ ಎಂದು ಹೇಳಿದ್ದಾರೆ.
ಹಾಗೇ, ಪ್ರೀತಿ ಗಾಂಧಿ ಟ್ವೀಟ್ಗೆ ಕಾಂಗ್ರೆಸ್ನ ಹಲವು ಪ್ರಮುಖರು ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರೀತಿಯವರದ್ದು ವಿಕೃತ ಮತ್ತು ಅಸ್ವಸ್ಥ ಮನಸು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. ಹಾಗೇ, ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಥ್ ಪ್ರತಿಕ್ರಿಯೆ ನೀಡಿ, ‘ಹೌದು ರಾಹುಲ್ ಗಾಂಧಿ ತಮ್ಮ ತಾತನ ಹಾದಿಯಲ್ಲೇ ಸಾಗುತ್ತಿದ್ದಾರೆ. ಅವರಂತೆ ಇವರೂ ಇಡೀ ದೇಶವನ್ನು ಒಗ್ಗೂಡಿಸುತ್ತಿದ್ದಾರೆ. ನಿಮ್ಮ ಮಾನಸಿಕ ಸ್ಥಿತಿಯೇ ಸರಿಯಾಗಿಲ್ಲ, ಅದಕ್ಕೆ ಮೊದಲು ಚಿಕಿತ್ಸೆ ಕೊಡಿಸಿ. ಇಲ್ಲದೆ ಹೋದರೆ ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ತೊಂದರೆಯಾಗಬಹುದು’ ಎಂದು ವ್ಯಂಗ್ಯವಾಡಿದ್ದಾರೆ.
ಶಿವಸೇನೆ ನಾಯಕಿ, ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಕೂಡ ಪ್ರೀತಿ ಗಾಂಧಿ ಟ್ವೀಟ್ನ್ನು ಖಂಡಿಸಿದ್ದಾರೆ. ‘ಈ ರಾಷ್ಟ್ರವನ್ನು ಮುನ್ನಡೆಸಲು ಪುರುಷರೊಂದಿಗೆ ಮಹಿಳೆಯರು ಹೆಗಲಿಗೆ ಹೆಗಲು ಕೊಟ್ಟು, ಪರಸ್ಪರ ಕೈ ಹಿಡಿದು ನಡೆಯಬೇಕು ಎಂಬುದನ್ನೂ ಈ ಫೋಟೋ ಪ್ರತಿಬಿಂಬಿಸುತ್ತದೆ. ಹೀಗಾದಾಗಲೇ ಭಾರತದಲ್ಲಿ ಸಮಾನತೆ ಮೂಡಬೇಕು ಎಂಬುದು ಜವಾಹರ್ ಲಾಲ್ ನೆಹರೂ ಮಾತ್ರವಲ್ಲ, ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಇತರ ಅನೇಕರ ಕನಸು ನನಸಾಗುತ್ತದೆ. ನೀವು ಸುಮ್ಮನೆ ಕುಳಿಕುಕೊಳ್ಳಿ’ ಎಂದು ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Bharat Jodo | ರಾಹುಲ್ ಪಾದಯಾತ್ರೆಯಲ್ಲಿ ರಮ್ಯಾ ಅಚ್ಚರಿಯ ಎಂಟ್ರಿ, ರಾಜ್ಯ ಕಾಂಗ್ರೆಸ್ ನಾಯಕರು ತಬ್ಬಿಬ್ಬು!