Site icon Vistara News

Bharat Jodo Yatra | ಭಾರತ್​ ಜೋಡೋ ಯಾತ್ರೆ ಮಧ್ಯೆ ರಾಹುಲ್​ ಗಾಂಧಿ ಡಾನ್ಸ್​, ಡೋಲು ವಾದನ !

Rahul Gandhi

ತೆಲಂಗಾಣ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್​ ಜೋಡೋ ಯಾತ್ರೆ ತೆಲಂಗಾಣದಲ್ಲಿ ನಡೆಯುತ್ತಿದೆ. ಅಕ್ಟೋಬರ್​ 22ರಂದು ಕರ್ನಾಟಕವನ್ನು ನಿರ್ಗಮಿಸಿ, ಸದ್ಯ ತೆಲಂಗಾಣದಲ್ಲಿ ಪಾದಯಾತ್ರೆ ನಡೆಯುತ್ತಿದ್ದು, ರಾಹುಲ್​ ಗಾಂಧಿ ಯಥಾಪ್ರಕಾರ ಸ್ಥಳೀಯರೊಂದಿಗೆ ಸಂವಾದ, ಮಾತುಕತೆ ನಡೆಸುತ್ತ, ಅವರ ಕುಂದುಕೊರತೆ ಆಲಿಸುತ್ತ ಹೆಜ್ಜೆಹಾಕುತ್ತಿದ್ದಾರೆ. ಈ ಮಧ್ಯೆ ಶನಿವಾರ ರಾಹುಲ್ ಗಾಂಧಿ ಅವರು ತೆಲಂಗಾಣದ ಧರ್ಮಾಪುರದಲ್ಲಿ ಯಾತ್ರೆ ಮಧ್ಯೆ, ಬುಡಕಟ್ಟು ಜನಾಂಗದವರೊಂದಿಗೆ ನೃತ್ಯ ಮಾಡಿ ಗಮನ ಸೆಳೆದರು.

ರಾಹುಲ್​ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್​ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ 50ದಿನ ಪೂರೈಸಿದೆ. ಅಕ್ಟೋಬರ್​ 17ರಂದು ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ನಿಮಿತ್ತ ಯಾತ್ರೆಗೆ ಬ್ರೇಕ್ ಸಿಕ್ಕಿತ್ತು. ಅದಾದ ಬಳಿಕ ದೀಪಾವಳಿ ಹಬ್ಬಕ್ಕಾಗಿ ಮೂರು ದಿನ ಬ್ರೇಕ್​ ನೀಡಲಾಗಿತ್ತು. ಹೀಗೆ ಮೂರು ದಿನಗಳ ಬ್ರೇಕ್​ ನಂತರ ಮತ್ತೆ ಯಾತ್ರೆ ಶುರು ಮಾಡಿದ್ದ ರಾಹುಲ್​ ಗಾಂಧಿ ಎರಡು ದಿನಗಳ ಹಿಂದೆ ತೆಲಂಗಾಣದ ನಾರಾಯಣಪೇಟ್​ ಜಿಲ್ಲೆಯಲ್ಲಿ ಸ್ಥಳೀಯ ಕಲಾವಿದರೊಂದಿಗೆ ಢೋಲ್ ಬಾರಿಸಿ ಸಂಭ್ರಮಿಸಿದ್ದರು. ​

ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾದ ಕಾಂಗ್ರೆಸ್​ನ ಭಾರತ್​ ಜೋಡೋ ಯಾತ್ರೆ ಇಲ್ಲಿಯವರೆಗೆ 1230 ಕಿಮೀ ದೂರ ಕ್ರಮಿಸಿದೆ. ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶಗಳ 18 ಜಿಲ್ಲೆಗಳನ್ನು ದಾಟಿದೆ. ತೆಲಂಗಾಣದಲ್ಲಿ 11 ದಿನ ಇರಲಿದ್ದು, ಇಲ್ಲಿನ 8 ಜಿಲ್ಲೆಗಳಲ್ಲಿ ಕ್ರಮಿಸಲಿದೆ. ಬಳಿಕ ನಾಂದೇಡ್ ಮೂಲಕ ಮಹಾರಾಷ್ಟ್ರಕ್ಕೆ ಪ್ರವೇಶ ಮಾಡಲಿದೆ.

Exit mobile version