Site icon Vistara News

Rahul Gandhi : ರಾಹುಲ್‌ ದೇಶವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದ ಸಚಿವ ಕಿರಣ್‌ ರಿಜಿಜು

#image_title

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಕುರಿತಾಗಿ ಕೇಂದ್ರ ಸಚಿವ ಕಿರಣ್‌ ರಿಜಿಜು ಕೆಂಡ ಕಾರಿದ್ದಾರೆ. ರಾಹುಲ್‌ ಅವರು ಇತ್ತೀಚೆಗೆ ಯುನೈಟೆಡ್‌ ಕಿಂಗ್‌ಡಂನಲ್ಲಿ ಮಾಡಿರುವ ಭಾಷಣ ಭಾರತವನ್ನು ಪ್ರತ್ಯೇಕಿಸುವಂತಹ ಭಾಷಣ ಎಂದು ಅವರು ದೂರಿದ್ದಾರೆ.

ಇದನ್ನೂ ಓದಿ: Rahul Gandhi In UK:‌ ಆರ್‌ಎಸ್‌ಎಸ್‌ ಮೂಲಭೂತವಾದಿ, ಸರ್ವಾಧಿಕಾರಿ: ಲಂಡನ್‌ನಲ್ಲಿ ಕಿಡಿ ಕಾರಿದ ರಾಹುಲ್‌ ಗಾಂಧಿ

ಈ ಬಗ್ಗೆ ಟ್ವಿಟರ್‌ನಲ್ಲಿ ಟ್ವೀಟ್‌ ಮಾಡಿರುವ ಸಚಿವರು, “ಕಾಂಗ್ರೆಸ್‌ನ ಸ್ವಯಂ ಘೋಷಿತ ರಾಜಕುಮಾರ್‌ ಎಲ್ಲ ಎಲ್ಲೆಯನ್ನು ಮೀರಿದ್ದಾರೆ. ಭಾರತದ ಸಮಗ್ರತೆಗೆ ಇವರು ಅತ್ಯಂತ ದೊಡ್ಡ ಅಪಾಯವಾಗಿದ್ದಾರೆ. ಈಗ ಇವರು ಭಾರತವನ್ನು ಪ್ರತ್ಯೇಕಿಸಲೂ ಉತ್ತೇಜಿಸಲಾರಂಭಿಸಿದ್ದಾರೆ. ಭಾರತದ ಸುಪ್ರಸಿದ್ಧ ಮತ್ತು ಎಲ್ಲರ ಪ್ರೀತಿಯ ಪ್ರಧಾನಿ ನರೇಂದ್ರ ಮೋದಿ ಅವರು ʼಏಕ್‌ ಭಾರತ್‌ ಶ್ರೇಷ್ಠ ಭಾರತ್‌ʼ ಎನ್ನುವ ಮಂತ್ರವನ್ನು ಪಾಲಿಸುವವರು” ಎಂದು ಬರೆದುಕೊಂಡಿದ್ದಾರೆ.


ಹಾಗೆಯೇ “ಭಾರತೀಯರಿಗೆ ರಾಹುಲ್‌ ಗಾಂಧಿ ಒಬ್ಬ ಪಪ್ಪು ಎನ್ನುವ ವಿಚಾರ ಗೊತ್ತಾಗಿದೆ. ಆದರೆ ವಿದೇಶಿಯರಿಗೆ ಅದು ಗೊತ್ತಿಲ್ಲ. ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸುವ ಅವಶ್ಯಕತೆ ನಿಜಕ್ಕೂ ಇಲ್ಲ. ಆದರೆ ಈ ರೀತಿಯ ಭಾರತ ವಿರೋಧಿ ಹೇಳಿಕೆಗಳನ್ನು ಭಾರತ ವಿರೋಧಿ ಸಂಘಟನೆಗಳು ಉಪಯೋಗಿಸಿಕೊಂಡು, ಭಾರತದ ಮೌಲ್ಯವನ್ನು ಹಾಳುಗೆಡವಲು ಯತ್ನಿಸುತ್ತಾರೆ” ಎಂದೂ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: Rahul Gandhi In UK Parliament: ಭಾರತದಲ್ಲಿ ಪ್ರತಿಪಕ್ಷಗಳ ಧ್ವನಿ ದಮನ, ಬ್ರಿಟನ್‌ ಸಂಸತ್ತಲ್ಲಿ ರಾಹುಲ್‌ ಗಾಂಧಿ ಹೇಳಿಕೆ
ಇತ್ತೀಚೆಗೆ ಯುನೈಟೆಡ್‌ ಕಿಂಗ್‌ಡಂನಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ, “ಭಾರತ ಹಲವಾರು ರಾಜ್ಯಗಳ ಒಕ್ಕೂಟ. ಅಲ್ಲಿ ಸಿಖ್ಖರಿದ್ದಾರೆ. ಮುಸ್ಲಿಮರಿದ್ದಾರೆ. ಹಲವಾರು ಧರ್ಮಗಳಿವೆ. ಹಲವಾರು ಭಾಷೆಗಳಿವೆ. ಅವೆಲ್ಲವೂ ಭಾರತ ಎಂದು ನಾನು ಭಾವಿಸುತ್ತೇನೆ. ಆದರೆ ಪ್ರಧಾನಿ ಮೋದಿ ಹಾಗೆಂದುಕೊಂಡಿಲ್ಲ. ಅವರೆಲ್ಲರೂ ಭಾರತದ ಸೆಕೆಂಡ್‌ ಕ್ಲಾಸ್‌ ನಾಗರಿಕರು ಎಂದು ಅವರು ಹೇಳುತ್ತಾರೆ. ಅದನ್ನು ನಾನು ಒಪ್ಪುವುದಿಲ್ಲ” ಎಂದು ಹೇಳಿದ್ದರು. ಅದರ ವಿಡಿಯೊವನ್ನು ಹಂಚಿಕೊಂಡಿರುವ ಸಚಿವ ರಾಹುಲ್‌ ಮಾತಿಗೆ ಆಕ್ರೋಶ ಹೊರಹಾಕಿದ್ದಾರೆ.

Exit mobile version