Site icon Vistara News

ನಿಮ್ಮ ಆದೇಶವನ್ನು ವಿಧೇಯತೆಯಿಂದ ಪಾಲಿಸುತ್ತೇನೆ; ಬಂಗಲೆ ಖಾಲಿ ಮಾಡಿ ಎಂದ ಲೋಕಸಭೆಗೆ ಪತ್ರ ಬರೆದ ರಾಹುಲ್ ಗಾಂಧಿ

Rahul Gandhi to visit Karnataka on April 16, 17, Jai Bharat rally launched in Kolar

ರಾಹುಲ್‌ ಗಾಂಧಿ

ನವ ದೆಹಲಿ: ‘ನಾನು ಕಳೆದ ನಾಲ್ಕು ಅವಧಿಯಲ್ಲಿ ಲೋಕಸಭಾ ಸದಸ್ಯನಾಗಿ ಆಯ್ಕೆಯಾದೆ. ಜನರು ಕೊಟ್ಟ ಆದೇಶಕ್ಕೆ ಬದ್ಧನಾಗಿ ಕೆಲಸ ಮಾಡಿದೆ. ಸಂಸದನಾಗಿ ಸೇವೆ ಸಲ್ಲಿಸಿದ ಇಷ್ಟು ವರ್ಷದಲ್ಲಿ ಅನೇಕ ಸಂತೋಷದ ನೆನಪುಗಳು ನನ್ನ ಪಾಲಿಗೆ ಒದಗಿವೆ. ನೀವು ನನಗೆ ಕೊಟ್ಟ ಪತ್ರದಲ್ಲಿ ಇರುವ ಆದೇಶವನ್ನು, ಯಾವುದೇ ಪೂರ್ವಾಗ್ರಹ ಪೀಡಿತನಾಗದೆ, ವಿಧೇಯನಾಗಿ ಪಾಲಿಸುತ್ತೇನೆ. ನಿಮ್ಮ ಪತ್ರಕ್ಕೆ ಧನ್ಯವಾದಗಳು’..ಹೀಗೆಂದು ರಾಹುಲ್ ಗಾಂಧಿ (Rahul Gandhi)ಯವರು ಲೋಕಸಭೆಗೆ ಪತ್ರ ಬರೆದಿದ್ದಾರೆ.

2019ರಲ್ಲಿ ಮೋದಿ ಉಪನಾಮದ ಬಗ್ಗೆ ಅವಹೇಳನ ಮಾಡಿದ್ದ ರಾಹುಲ್​ ಗಾಂಧಿ ಕೋರ್ಟ್​ನಿಂದ ದೋಷಿ ಎಂದು ಪರಿಗಣಿತರಾಗಿದ್ದಾರೆ. ಅಷ್ಟೇ ಅಲ್ಲ, ಲೋಕಸಭೆಯಿಂದ ಅನರ್ಹಗೊಂಡಿದ್ದಾರೆ. ಹೀಗೆ ಸಂಸದನ ಸ್ಥಾನ ಕಳೆದುಕೊಂಡ ಹಿನ್ನೆಲೆಯಲ್ಲಿ ಅವರಿಗೆ ಸರ್ಕಾರಿ ಬಂಗಲೆ ತೆರವುಗೊಳಿಸುವಂತೆ ಲೋಕಸಭೆ ವಸತಿ ಸಮಿತಿ ನೋಟಿಸ್​ ಕಳಿಸಿತ್ತು. ಅದಕ್ಕೆ ಉತ್ತರವಾಗಿ ರಾಹುಲ್ ಗಾಂಧಿ ಹೀಗೆ ಬರೆದುಕೊಂಡಿದ್ದಾರೆ. 2004ರಿಂದಲೂ ಸಂಸದನಾಗಿರುವ ರಾಹುಲ್ ಗಾಂಧಿ 2005ರಿಂದ ದೆಹಲಿಯಲ್ಲಿ 12 ತುಘಲಕ್ ಮಾರ್ಗದಲ್ಲಿರುವ ಬಂಗಲೆಯಲ್ಲಿ ವಾಸವಾಗಿದ್ದರು. ಅದನ್ನೀಗ ಅವರು 30 ದಿನಗಳ ಒಳಗೆ ಅಂದರೆ ಏಪ್ರಿಲ್​ 22ರೊಳಗೆ ಖಾಲಿ ಮಾಡಬೇಕಿದೆ.

2019ರ ಲೋಕಸಭೆ ಚುನಾವಣೆ ವೇಳೆ ಕೋಲಾರದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ‘ಎಲ್ಲ ಕಳ್ಳರ ಉಪನಾಮವೂ ಒಂದೇ ಇರುತ್ತದೆ ಎಂದಿದ್ದರು. ರಾಹುಲ್ ಗಾಂಧಿ ಮೋದಿ ಉಪನಾಮಕ್ಕೆ ಅವಮಾನ ಮಾಡಿದ್ದಾರೆ ಎಂದು ಗುಜರಾತ್ ಶಾಸಕ ಪೂರ್ಣೇಶ್ ಮೋದಿ ಸೂರತ್​ ಕೋರ್ಟ್​​ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಮಾರ್ಚ್​ 23ರಂದು ತೀರ್ಪು ನೀಡಿದ ಕೋರ್ಟ್​ ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿ, 2ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಕೋರ್ಟ್​ನಿಂದ 2 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ರಾಹುಲ್ ಗಾಂಧಿಯವರನ್ನು ಸಂವಿಧಾನದ ಪ್ರಜಾಪ್ರತಿನಿಧಿಗಳ ಕಾಯ್ದೆ 1951ರ ಅನ್ವಯ ಸಂಸದನ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.

ಇದನ್ನೂ ಓದಿ: ಕಾನೂನು ಪಾಲನೆ ಪ್ರಜಾಪ್ರಭುತ್ವದ ಮೂಲಾಧಾರ; ರಾಹುಲ್ ಗಾಂಧಿ ಅನರ್ಹತೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅಮೆರಿಕ

ರಾಹುಲ್ ಗಾಂಧಿಯವರಿಗೆ ಬಂಗಲೆ ತೆರವು ಮಾಡುವಂತೆ ಲೋಕಸಭೆ ನೋಟಿಸ್ ಕೊಟ್ಟಿದ್ದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಖಂಡಿಸಿದ್ದಾರೆ. ‘ರಾಹುಲ್ ಗಾಂಧಿಯವರಿಗೆ ಅವಮಾನ ಮಾಡಲಾಗುತ್ತಿದೆ. ಇಂಥದ್ದನ್ನೆಲ್ಲ ಮಾಡುವ ಮೂಲಕ ಅವರನ್ನು ದುರ್ಬಲಗೊಳಿಸುವ ಯತ್ನ ಮಾಡಲಾಗುತ್ತಿದೆ. ರಾಹುಲ್ ಗಾಂಧಿಯವರು ಇದಕ್ಕೆ ಹೆದರುವುದಿಲ್ಲ. ಅವರು ಅವರ ತಾಯಿಯೊಂದಿಗೆ ವಾಸಿಸುತ್ತಾರೆ ಅಥವಾ ನನ್ನೊಂದಿಗೂ ಬಂದು ನೆಲೆಸಬಹುದು’ ಎಂದಿದ್ದಾರೆ.

ಸ್ಮೃತಿ ಇರಾನಿ ತಿರುಗೇಟು
ರಾಹುಲ್ ಗಾಂಧಿಯವರಿಗೆ ಬಂಗಲೆ ತೆರವು ಮಾಡಿ ಎಂದಿದ್ದಕ್ಕೆ ಕಾಂಗ್ರೆಸ್ ವಲಯದಿಂದ ವಿರೋಧ ವ್ಯಕ್ತವಾಗುತ್ತಿರುವುದನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಖಂಡಿಸಿದ್ದಾರೆ. ‘ಬಂಗಲೆ ರಾಹುಲ್ ಗಾಂಧಿಗೆ ಸೇರಿದ್ದಲ್ಲ, ಅದು ಸಾಮಾನ್ಯ ಜನರಿಗೆ ಸೇರಿದ್ದು’ ಎಂದು ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಅವರು, ‘ರಾಹುಲ್ ಗಾಂಧಿಯವರು ಮೋದಿ ಉಪನಾಮದ ಬಗ್ಗೆ ಅವಹೇಳನ ಮಾಡಿದ್ದು ತಪ್ಪು. ಅವರು ಅದೇ ಮೊದಲೂ ಅಲ್ಲ, ಇಡೀ ಗಾಂಧಿ ಕುಟುಂಬ ಹಲವು ಬಾರಿ ದಲಿತ ಮತ್ತು ಹಿಂದುಳಿದ ವರ್ಗದವರಿಗೆ ಅಪಮಾನಿಸಿದೆ. ಇತ್ತೀಚೆಗೆ ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ರಾಷ್ಟ್ರಪತಿಯಾದಾಗಲೂ ಕಾಂಗ್ರೆಸ್​ನ ಕೆಲವರು ಅದನ್ನು ವ್ಯಂಗ್ಯ ಮಾಡಿದ್ದರು. ಅದೂ ಕೂಡ ಗಾಂಧಿ ಕುಟುಂಬದ ನಿರ್ದೇಶನದಂತೆಯೇ ಅವರು ಮಾತನಾಡಿದ್ದರು ಎಂದು ಸ್ಮೃತಿ ಹೇಳಿದ್ದಾರೆ.

Exit mobile version