ನವದೆಹಲಿ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ನೀಡುವ ಕಾನೂನು ಜಾರಿಗೊಳಿಸಬೇಕು ಎಂಬುದು ಸೇರಿ ಹಲವು ಬೇಡಿಕೆಗಳ ಈಡೇರಿಕೆಗಾಗಿ ರೈತ ಸಂಘಟನೆಗಳು ಆಗ್ರಹಿಸುತ್ತಲೇ ಇವೆ. ಇದರ ಮಧ್ಯೆಯೇ, ಸಂಸತ್‌ನಲ್ಲಿ ರೈತರು (Farmers) ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ಭೇಟಿಯಾಗಿದ್ದಾರೆ. ಕಾಂಗ್ರೆಸ್ ನಾಯಕನನ್ನು ಭೇಟಿಯಾದ ಸುಮಾರು 12 ರೈತ ಸಂಘಟನೆಗಳ ಮುಖಂಡರ ನಿಯೋಗವು, ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂಬುದಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಕೋರಿದರು. ಇದಕ್ಕೆ ರಾಹುಲ್ ಗಾಂಧಿ ಅವರೂ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಸಂಸತ್ ಭವನದಲ್ಲಿರುವ ರಾಹುಲ್ ಗಾಂಧಿ ಕಚೇರಿಗೆ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಹಾಗೂ ಕಿಸಾನ್ ಮಜ್ದೂರ್ ಸೇರಿ ಹಲವು ರೈತ ಸಂಘಟನೆಗಳ 12 ಮುಖಂಡರು ರಾಹುಲ್ ಗಾಂಧಿ ಅವರನ್ನು ಭೇಟಿಯಾದರು. ರೈತರ ಬೇಡಿಕೆಗಳು ಸುದೀರ್ಘ ಅವಧಿಯಿಂದ ಬಾಕಿ ಉಳಿದಿವೆ. ಇವುಗಳನ್ನು ಈಡೇರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಕನಿಷ್ಠ ಬೆಂಬಲ ಬೆಲೆಯ ಕಾನೂನು ಜಾರಿಗೆ ತರಬೇಕು. ಅಷ್ಟೇ ಅಲ್ಲ, ಸಂಸತ್ ಅಧಿವೇಶನದಲ್ಲಿ ಎಂಎಸ್‌ಪಿ ಜಾರಿ ಕುರಿತು ಖಾಸಗಿ ವಿಧೇಯಕ ಮಂಡಿಸಬೇಕು ಎಂಬುದಾಗಿ ರೈತ ಮುಖಂಡರು ಮನವಿ ಮಾಡಿದರು.
MSP की कानूनी गारंटी किसानों का हक़ है।
— Rahul Gandhi (@RahulGandhi) July 24, 2024
INDIA ये हक़ उनको दिला कर रहेगा। pic.twitter.com/q2IQU57nJF
ಬಳಿಕ ರಾಹುಲ್ ಗಾಂಧಿ ಹೇಳಿದ್ದಿಷ್ಟು…
ರೈತರ ಜತೆ ಸಮಾಲೋಚನೆ ನಡೆಸಿದ ಬಳಿಕ ರಾಹುಲ್ ಗಾಂಧಿ ಅವರು ಮಾತನಾಡಿದರು. “ಲೋಕಸಭೆ ಚುನಾವಣೆ ವೇಳೆ ನಾವು ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಎಂಎಸ್‌ಪಿಗೆ ಕಾನೂನು ಗ್ಯಾರಂಟಿ ನೀಡಲಾಗುವುದು ಎಂದು ಘೋಷಿಸಿದ್ದೆವು. ಇದರ ಕುರಿತು ಅಧ್ಯಯನ ಮಾಡಿದ್ದು, ಸುಲಭವಾಗಿ ಜಾರಿಗೆ ತರಬಹುದಾಗಿದೆ. ಇನ್ನು, ಮುಂದಿನ ದಿನಗಳಲ್ಲಿ ಎಂಎಸ್‌ಪಿ ಕಾನೂನು ಜಾರಿಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಇಂಡಿಯಾ ಒಕ್ಕೂಟದ ನಾಯಕರ ಜತೆ ಚರ್ಚಿಸಿ ಮುಂದಿನ ತೀರ್ಮಾಣ ತೆಗೆದುಕೊಳ್ಳಲಾಗುವುದು” ಎಂದು ಹೇಳಿದರು.
ಆಗಸ್ಟ್ 15ರಂದು ದೇಶಾದ್ಯಂತ ರ‍್ಯಾಲಿ
ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಆಗಸ್ಟ್ 15ರಂದು ದೇಶಾದ್ಯಂತ ಟ್ರ್ಯಾಕ್ಟರ್ ರ‍್ಯಾಲಿ ಕೈಗೊಳ್ಳಲಾಗುವುದು ಎಂದು ರಾಹುಲ್ ಗಾಂಧಿ ಜತೆ ಮಾತುಕತೆ ನಡೆಸಿದ ಬಳಿಕ ರೈತ ಸಂಘಟನೆಗಳ ನಾಯಕರು ತಿಳಿಸಿದ್ದಾರೆ. ರೈತರು ಕೈಗೊಂಡ ದೆಹಲಿ ಚಲೋ ಹೋರಾಟವು ಆಗಸ್ಟ್ 31ಕ್ಕೆ 200 ದಿನ ಪೂರೈಸುತ್ತದೆ. ಹಾಗಾಗಿ, ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ಹೇರಲು ತೀರ್ಮಾನಿಸಲಾಗಿದೆ. ಪಂಜಾಬ್ ಹಾಗೂ ಹರಿಯಾಣದ ಗಡಿಗೆ ರೈತರು ಆಗಮಿಸಿ, ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂಬುದಾಗಿ ರೈತ ಸಂಘಟನೆಗಳು ಮನವಿ ಮಾಡಿದವು.
ಇದನ್ನೂ ಓದಿ: NEET UG 2024: ಅಧಿವೇಶನದಲ್ಲಿ ‘ನೀಟ್’ ಪ್ರಸ್ತಾಪಿಸಿದ ರಾಹುಲ್ ಗಾಂಧಿ; ಪ್ರತ್ಯುತ್ತರ ಕೊಟ್ಟ ಕೇಂದ್ರ ಸಚಿವ