2019ರಲ್ಲಿ ಮೋದಿ ಸರ್ನೇಮ್ಗೆ (Modi Sirname) ಮಾಡಿದ ಅಪಮಾನದ ಕೇಸ್ಗೆ ಸಂಬಂಧಪಟ್ಟಂತೆ ಕಾನೂನು ಹೋರಾಟದಲ್ಲಿ ನಿರಂತರವಾಗಿ ಸೋಲು ಕಾಣುತ್ತಿರುವ ರಾಹುಲ್ ಗಾಂಧಿ (Rahul Gandhi) ಈಗ ಸುಪ್ರೀಂಕೋರ್ಟ್ (Supreme Court) ಮೆಟ್ಟಿಲೇರಿದ್ದಾರೆ. ಸೂರತ್ ಕೋರ್ಟ್ ವಿಧಿಸಿರುವ 2ವರ್ಷ ಜೈಲು ಶಿಕ್ಷೆಗೆ ತಡೆ ನೀಡುವಂತೆ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ. 2019ರ ಲೋಕಸಭೆ ಚುನಾವಣೆ ವೇಳೆ ಕೋಲಾರದಲ್ಲಿ ಭಾಷಣ ಮಾಡಿದ್ದ ರಾಹುಲ್ ಗಾಂಧಿ ನೀರವ್ ಮೋದಿ, ಲಲಿತ್ ಮೋದಿಯನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ವ್ಯಂಗ್ಯ ಮಾಡಿದ್ದರು. ಮೋದಿ ಎಂಬ ಉಪನಾಮ ಹೊಂದಿರುವವರೆಲ್ಲ ಕಳ್ಳರೇ ಎಂದಿದ್ದರು.
ರಾಹುಲ್ ಗಾಂಧಿ ಈ ಮಾತಿನ ವಿರುದ್ಧ ಬಿಜೆಪಿ ನಾಯಕ ಸೂರತ್ ಕೋರ್ಟ್‌ನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ್ದ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಚ್.ಎಚ್.ವರ್ಮಾ ಅವರು ಮಾರ್ಚ್ 23ರಂದು ‘ರಾಹುಲ್ ಗಾಂಧಿ ದೋಷಿ’ ಎಂದು ತೀರ್ಪು ನೀಡಿದ್ದರು. 2ವರ್ಷ ಜೈಲು ಶಿಕ್ಷೆ ವಿಧಿಸಿದ್ದರು. ಅದರ ಬೆನ್ನಲ್ಲೇ ರಾಹುಲ್ ಗಾಂಧಿ ಸಂಸದನ ಸ್ಥಾನದಿಂದ ಅನರ್ಹಗೊಂಡಿದ್ದರು. ಈ ಶಿಕ್ಷೆಗೆ ತಡೆ ನೀಡುವಂತೆ ರಾಹುಲ್ ಗಾಂಧಿ ಗುಜರಾತ್ ಸೆಷನ್ಸ್ ಕೋರ್ಟ್ಗೆ ಮನವಿ ಸಲ್ಲಿಸಿ, ಅಲ್ಲಿ ಸೋಲಾದ ಬಳಿಕ ಗುಜರಾತ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದರು. ಜುಲೈ 7ರಂದು ಗುಜರಾತ್ ನ್ಯಾಯಾಲಯ ರಾಹುಲ್ ಗಾಂಧಿ ಅರ್ಜಿಯನ್ನು ತಿರಸ್ಕಾರ ಮಾಡಿತ್ತು. ರಾಹುಲ್ ಗಾಂಧಿ ದೋಷಿ ಎಂಬ ಸೂರತ್ ಕೋರ್ಟ್ನ ತೀರ್ಪನ್ನು ಎತ್ತಿ ಹಿಡಿದಿತ್ತು.
ಇದನ್ನೂ ಓದಿ: ರಾಹುಲ್ ಗಾಂಧಿಗಿಂತ ಮುಂಚೆಯೇ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಹಾಕಿದ ಮೋದಿ!
ಮೋದಿ ಸರ್ನೇಮ್ಗೆ ಮಾಡಿದ ಅಪಮಾನದಡಿ ರಾಹುಲ್ ಗಾಂಧಿ ವಿರುದ್ಧ ದೇಶಾದ್ಯಂತ ಸುಮಾರು 10 ಕೇಸ್ಗಳು ದಾಖಲಾಗಿವೆ. ಕಳೆದ ವಾರ ತೀರ್ಪು ಕೊಡುವ ವೇಳೆ ಗುಜರಾತ್ ಹೈಕೋರ್ಟ್ ಜಡ್ಜ್ ಹೇಮಂತ್ ಪ್ರಾಚಕ್ ಅವರು ಇದನ್ನೂ ಉಲ್ಲೇಖಿಸಿದ್ದರು. ಅಲ್ಲದೆ, ಕೆಳ ನ್ಯಾಯಾಲಯ ಕೊಟ್ಟ ತೀರ್ಪು ಸೂಕ್ತವಾಗಿದೆ. ಕಾನೂನಾತ್ಮಕವಾಗಿದೆ. ರಾಹುಲ್ ಗಾಂಧಿಯವರಿಗೆ ವಿಧಿಸಲಾದ ಶಿಕ್ಷೆಗೆ ತಡೆ ನೀಡಲು ಯಾವುದೇ ಸೂಕ್ತವಾದ ಕಾರಣ ಸಿಗುತ್ತಿಲ್ಲ, ಯಾವ ಆಧಾರದ ಮೇಲೆ ತಡೆ ನೀಡಬೇಕು? ಎಂದು ಪ್ರಶ್ನಿಸಿದ್ದರು. ಸದ್ಯ ಜಾಮೀನಿನ ಮೇಲೆ ಜೈಲಿಂದ ಹೊರಗೆ ಇರುವ ರಾಹುಲ್ ಗಾಂಧಿ ಜೈಲು ಶಿಕ್ಷೆಯಿಂದ ಪಾರಾಗಬೇಕಾದರೆ ಸುಪ್ರೀಂಕೋರ್ಟ್ ತಡೆ ನೀಡಲೇಬೇಕಾಗಿದೆ.