ನವ ದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಪದಾಧಿಕಾರಿ ಗೌರವ್ ಪಾಂಡಿ ಅವರು, ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ವಿವಾದಾತ್ಮಕವಾಗಿ ಟ್ವೀಟ್ ಮಾಡಿ, ಬಳಿಕ ಡಿಲೀಟ್ ಮಾಡಿದ್ದಾರೆ. ಅದರ ಬೆನ್ನಲ್ಲೇ ಇಂದು ರಾಹುಲ್ ಗಾಂಧಿ ಸದೈವ್ ಅಟಲ್ಗೆ ಭೇಟಿ ಕೊಟ್ಟು ವಾಜಪೇಯಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದ್ದಾರೆ.
ಡಿ.25ರಂದು ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಇತ್ತು. ದೇಶಕಂಡ ಮುತ್ಸದ್ದಿ ನಾಯಕ, ಅಜಾತ ಶತ್ರು ವಾಜಪೇಯಿ ಅವರಿಗೆ ಪಕ್ಷಾತೀತವಾಗಿ ಅಭಿಮಾನಿಗಳು, ಅನುಯಾಯಿಗಳು ಇದ್ದಾರೆ. ಈ ಮಧ್ಯೆ ಕಾಂಗ್ರೆಸ್ ನಾಯಕ ಗೌರವ್ ಪಾಂಡಿ ಟ್ವೀಟ್ ಮಾಡಿ ‘1942ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯನ್ನು ಅಂದು ಆರ್ಎಸ್ಎಸ್ನ ಎಲ್ಲ ಸದಸ್ಯರ ಜತೆ ಅಟಲ್ ಬಿಹಾರಿ ವಾಜಪೇಯಿ ಅವರೂ ಬಹಿಷ್ಕರಿಸಿದ್ದರು ಮತ್ತು ಬ್ರಿಟಿಷ್ರಿಗೆ ಮಾಹಿತಿ ಕೊಡುವವರಾಗಿ ಕೆಲಸ ಮಾಡಿದ್ದರು. ಕ್ವಿಟ್ ಇಂಡಿಯಾ ಆಂದೋಲನದಲ್ಲಿ ಪಾಲ್ಗೊಂಡವರ ಬಗ್ಗೆ ಬ್ರಿಟಿಷರಿಗೆ ಮಾಹಿತಿ ಕೊಡುತ್ತಿದ್ದರು. ನೆಲ್ಲಿ ಹತ್ಯಾಕಾಂಡ (1983) ಮತ್ತು ಬಾಬರಿ ಮಸೀದಿ ಧ್ವಂಸ(1992)ದ ಸಂದರ್ಭದಲ್ಲಿ ಗುಂಪುಗಳನ್ನು ಪ್ರಚೋದಿಸುವಲ್ಲಿ ವಾಜಪೇಯಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವತ್ತು ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿಯವರನ್ನು ಗಾಂಧಿಗೆ, ಸರ್ದಾರ್ ವಲ್ಲಭಭಾಯಿ ಪಟೇಲ್ಗೆ ಹೋಲಿಸುತ್ತಾರೆಯೇ ಹೊರತು ಸಾವರ್ಕರ್, ವಾಜಪೇಯಿ ಮತ್ತು ಎಂ.ಎಸ್.ಗೋಳ್ವಾಲ್ಕರ್ ಅವರ ಜತೆ ಹೋಲಿಕೆ ಮಾಡುವುದಿಲ್ಲ. ಯಾಕೆಂದರೆ ಬಿಜೆಪಿ ನಾಯಕರಿಗೂ ಸತ್ಯ ಗೊತ್ತು’ ಎಂದು ಹೇಳಿದ್ದರು.
ಗೌರವ್ ಪಾಂಡಿ ಟ್ವೀಟ್ಗೆ ಬಿಜೆಪಿಯ ಹಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿಯೇ ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ತಾವು ಡಿ.26ರಂದು ವಾಜಪೇಯಿ ಸಮಾಧಿಗೆ ಭೇಟಿ ನೀಡುವುದಾಗಿಯೂ ಹೇಳಿದ್ದರು. ಈ ಮಧ್ಯೆ ವಿವಾದ ಹೆಚ್ಚಿದ ಬೆನ್ನಲ್ಲೇ ಗೌರವ್ ಪಾಂಡಿ ತಮ್ಮ ಟ್ವೀಟ್ನ್ನು ಡಿಲೀಟ್ ಮಾಡಿದ್ದಾರೆ.
ಇಂದು ಬೆಳಗ್ಗೆ ರಾಹುಲ್ ಗಾಂಧಿ ಅವರು ಸದೈವ್ ಅಟಲ್ಗೆ ಭೇಟಿ ಕೊಟ್ಟ ನಂತರ ಟ್ವೀಟ್ ಮಾಡಿದ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ‘ಒಂದು ಕಡೆ ರಾಹುಲ್ ಗಾಂಧಿಯವರು ತಮಗೆ ವಾಜಪೇಯಿ ಮೇಲೆ ಅಪಾರ ಗೌರವ ಇರುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಅವರದ್ದೇ ಪಕ್ಷದ ನಾಯಕ ಗೌರವ್ ಪಾಂಡಿ ಅವರು ವಾಜಪೇಯಿ ಅವರನ್ನು ಅವಮಾನಿಸುತ್ತಿದ್ದಾರೆ. ರಾಹುಲ್ ಗಾಂಧಿ ಮತ್ತು ಅವರ ಪಕ್ಷದ ಬೂಟಾಟಿಕೆ ಬಯಲಾಗಿದೆ. ನಿಜಕ್ಕೂ ರಾಹುಲ್ ಗಾಂಧಿಗೆ ವಾಜಪೇಯಿ ಮೇಲೆ ಗೌರವ ಇದ್ದಿದ್ದೇ ಆದರೆ, ಕೂಡಲೇ ಗೌರವ್ರನ್ನು ಪಕ್ಷದಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಅಂದಹಾಗೇ, ಗೌರವ್ ಪಾಂಡಿ ವಾಜಪೇಯಿ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡುವುದಕ್ಕೂ ಮೊದಲೇ ರಾಹುಲ್ ಗಾಂಧಿಯವರು, ತಾವು ಡಿ.26ರಂದು ಸದೈವ್ ಅಟಲ್ಗೆ ಭೇಟಿ ಕೊಡುವುದಾಗಿ ಹೇಳಿದ್ದರು. ಮೊದಲಿನಿಂದಲೂ ಕಾಂಗ್ರೆಸ್ ನಾಯಕರೂ ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಟೀಕೆ ಮಾಡುವುದು ತೀರ ಕಡಿಮೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೇರಿ ಹಿರಿಯ ನಾಯಕರು ಯಾರೂ ವಾಜಪೇಯಿ ವಿರುದ್ಧ ಮಾತನಾಡುವುದಿಲ್ಲ. ಆದರೀಗ ಗೌರವ್ ಪಾಂಡಿ ಅಟಲ್ಜಿ ಮೇಲೆ ಗಂಭೀರ ಸ್ವರೂಪದ ಆರೋಪ ಮಾಡಿ ವಿವಾದ ಉಂಟು ಮಾಡಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿ ಮಾತುಗಳು ಇಡೀ ದೇಶದಲ್ಲಿ ಕಂಪನ ಸೃಷ್ಟಿಸುತ್ತಿವೆ; ಕೈ ನಾಯಕನನ್ನು ಹೊಗಳಿದ ತಮಿಳುನಾಡು ಮುಖ್ಯಮಂತ್ರಿ