ನವ ದೆಹಲಿ: ಹಿಂಡನ್ಬರ್ಗ್ ವರದಿ ಬೆನ್ನಲ್ಲೇ ಅದಾನಿ ಸಮೂಹದ ಷೇರು ಕುಸಿತ ಉಂಟಾಗಿದೆ. ಇದೇ ವಿಷಯವನ್ನು ಇಟ್ಟುಕೊಂಡು ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ (Parliament Budget session 2023) ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿವೆ. ಸೋಮವಾರ ಕಲಾಪದ ವೇಳೆ ಮಾತನಾಡಿದ್ದ ರಾಹುಲ್ ಗಾಂಧಿ (Rahul Gandhi) ಇದೇ ಅದಾನಿ ಗ್ರೂಪ್ ಷೇರು ಕುಸಿತ (Adani Share Fall) ವಿಚಾರವನ್ನೇ ಇಟ್ಟುಕೊಂಡು ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. ‘ಉದ್ಯಮಿ ಅದಾನಿ ಹಿಂದಿರುವ ಶಕ್ತಿ ಯಾವುದೆಂದು ಇಡೀ ದೇಶಕ್ಕೆ ಗೊತ್ತಾಗಬೇಕು’ ಎಂದು ಹೇಳಿದ್ದರು. ಅಷ್ಟೇ ಅಲ್ಲ, ‘ಸಂಸತ್ತಿನಲ್ಲಿ ಅದಾನಿಯವರ ಕುರಿತು ಚರ್ಚೆ ಆಗುವುದನ್ನು ತಪ್ಪಿಸಲು ಪ್ರಧಾನಿ ಮೋದಿಯವರು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಅದ್ಯಾಕೆ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ನಾನು ಅದಾನಿ ವಿಷಯದ ಬಗ್ಗೆ ಚರ್ಚೆ ಆಗಬೇಕು ಎಂದು ಬಯಸುತ್ತೇನೆ ಮತ್ತು ಸತ್ಯ ಹೊರಬರಬೇಕು ಎಂದು ಆಶಿಸುತ್ತೇನೆ’ ಎಂದು ಹೇಳಿದ್ದರು.
ಇಂದು (ಫೆ.7) ಕೂಡ ರಾಹುಲ್ ಗಾಂಧಿ ತಮ್ಮ ಆರೋಪಗಳನ್ನು ಮುಂದುವರಿಸಿದ್ದಾರೆ. ಇಂದು ಗೌತಮ್ ಅದಾನಿ ಮತ್ತು ನರೇಂದ್ರ ಮೋದಿಯವರು ಒಟ್ಟಿಗೆ ಇರುವ ಒಂದು ಹಳೇ ಫೋಟೊವನ್ನು ಸಂಸತ್ತಿನಲ್ಲಿ ತೋರಿಸಿದ ಅವರು, ‘ಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮಧ್ಯೆ ಇರುವ ಸ್ನೇಹ-ಸಂಬಂಧ ಎಂಥದ್ದು ಎಂದು ಎಲ್ಲರಿಗೂ ಗೊತ್ತಾಗಬೇಕು’ ಎಂದರು. ಹಾಗೇ, ‘ನಾನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಲ್ನಡಿಗೆ ನಡೆಸುತ್ತಿದ್ದಾಗ ಕೇಳಿದ್ದು ಒಬ್ಬೇ ಒಬ್ಬ ಉದ್ಯಮಿಯ ಹೆಸರು. ಅದು ಗೌತಮ್ ಅದಾನಿ. ಇಡೀ ದೇಶದ ಜನರ ಬಾಯಲ್ಲಿ ಅದಾನಿ..ಅದಾನಿ..ಎಂದೇ ಪಠಣ ಆಗುತ್ತಿದೆ. ಅದಾನಿಯವರು ಯಾವುದೇ ಉದ್ಯಮಕ್ಕೆ ಕೈ ಹಾಕಲಿ ಅವರು ವಿಫಲರಾಗುವ ಮಾತೇ ಇಲ್ಲ’ ಎಂದು ಅವರೆಲ್ಲ ಹೇಳುತ್ತಿದ್ದಾರೆ’ ಎಂದು ಸ್ವಲ್ಪ ವ್ಯಂಗ್ಯಭರಿತ ಧಾಟಿಯಲ್ಲಿ ಹೇಳಿದರು.
ಇದನ್ನೂ ಓದಿ: Adani stocks : ಅದಾನಿ ಸಮೂಹದ ಕಂಪನಿಗಳ ಷೇರು ದರ ಚೇತರಿಕೆ, ಟಾಪ್ 20 ಶ್ರೀಮಂತರ ಪಟ್ಟಿಗೆ ಮರಳಿದ ಅದಾನಿ
‘ನರೇಂದ್ರ ಮೋದಿ ಮತ್ತು ಗೌತಮ್ ಅದಾನಿ ನಡುವಿನ ಸ್ನೇಹ ಶುರುವಾಗಿದ್ದು, ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾದಾಗಿನಿಂದ. ಆ ಒಬ್ಬ ವ್ಯಕ್ತಿ (ಆದಾನಿ) ನರೇಂದ್ರ ಮೋದಿಯವರ ಹೆಗಲಿಗೆ ಹೆಗಲು ಕೊಟ್ಟು ನಿಂತರು. ಗುಜರಾತ್ನ ಪುನರುತ್ಥಾನಕ್ಕೆ ಸಹಕಾರ ನೀಡಿದರು. ಮೋದಿಯವರಿಗೆ ಸದಾ ನಿಷ್ಠರಾಗಿ ಇದ್ದರು. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ನಿಜವಾದ ಮ್ಯಾಜಿಕ್ ಪ್ರಾರಂಭವಾಯಿತು’ ಎಂದು ರಾಹುಲ್ ಗಾಂಧಿ ಹೇಳಿದರು.
ಬಿಜೆಪಿ ತಿರುಗೇಟು
ರಾಹುಲ್ ಗಾಂಧಿಯವರ ಆರೋಪಕ್ಕೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಕಟುವಾಗಿ ಪ್ರತಿಕ್ರಿಯೆ ನೀಡಿದರು. ಬಾಯಿಗೆ ಬಂದಂತೆ ಏನೇನೋ ಮಾತನಾಡಿ, ಇಲ್ಲಸಲ್ಲದ ಆರೋಪ ಮಾಡಬೇಡಿ. ನಿಮ್ಮ ಆರೋಪಗಳಿಗೆಲ್ಲ ತಕ್ಕ ಸೂಕ್ತ ಪುರಾವೆಗಳನ್ನು ಒದಗಿಸಿ ಎಂದು ಹೇಳಿದರು. ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರು ಪ್ರಧಾನಿ ಮೋದಿ-ಗೌತಮ್ ಅದಾನಿ ಫೋಟೋ ತೋರಿಸಿದ್ದಕ್ಕೆ ಸ್ಪೀಕರ್ ಓಂಬಿರ್ಲಾ ಕೂಡ ಅಸಮ್ಮತಿ ವ್ಯಕ್ತಪಡಿಸಿದರು.