ನವ ದೆಹಲಿ: ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇ.ಡಿ. ವಿಚಾರಣೆ ಇಂದು ಐದನೇ ದಿನವೂ ನಡೆಯುತ್ತಿದೆ. ಜೂ. ೨೩ಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಇ.ಡಿ. ಅಧಿಕಾರಿಗಳ ಎದುರು ಹಾಜರಾಗಬೇಕು. ಇನ್ನು ರಾಹುಲ್ ಗಾಂಧಿಗೆ ಇಂದು ಕೂಡ ಇ.ಡಿ.ಯಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆಯಿಲ್ಲ. ಅದು ನಾಳೆಗೂ ಮುಂದುವರಿಯಬಹುದು. ಇದೆಲ್ಲದರ ಮಧ್ಯೆ ಇಂದು ದೆಹಲಿಯಲ್ಲಿ ಕಾಂಗ್ರೆಸ್ ತೀವ್ರ ಪ್ರತಿಭಟನೆ ನಡೆಸಿದೆ. ರಾಜ್ಯ ಕಾಂಗ್ರೆಸ್ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಸಂಸದ ಡಿ.ಕೆ. ಸುರೇಶ್, ರಾಜ್ಯಸಭೆ ಸದಸ್ಯರಾದ ಜಿ.ಸಿ. ಚಂದ್ರಶೇಖರ್, ಎಲ್. ಹನುಮಂತಯ್ಯ, ಮುಖಂಡರಾದ ನಾಗರಾಜ್ ಛಬ್ಬಿ, ವಿನಯ್ ಕಾರ್ತಿಕ್ ಮತ್ತಿತರರು ದೆಹಲಿಯ ಎಐಸಿಸಿ ಕಚೇರಿ ಬಳಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ನಾಳೆಯೂ ಇವರ ಪ್ರತಿಭಟನೆ ಮುಂದುವರಿಯಲಿದೆ.
ರಾಹುಲ್ ಗಾಂಧಿ ವಿಚಾರಣೆ ಜೂ.೧೩ರಿಂದ ನಡೆಯುತ್ತಿದೆ. ಇಂದು ಜಾರಿ ನಿರ್ದೇಶನಾಲಯದ ಮೂವರು ಅಧಿಕಾರಿಗಳನ್ನು ಒಳಗೊಂಡ ತಂಡ ಅವರನ್ನು ವಿಚಾರಣೆಗೆ ಒಳಪಡಿಸಿದೆ. ನಿನ್ನೆ (ಜೂ.೨೦) ೧೨ ತಾಸು ವಿಚಾರಣೆ ನಡೆದಿತ್ತು. ಇಂದು ಬೆಳಗ್ಗೆ ೧೧ ಗಂಟೆಗೆ ಇಡಿ ಕಚೇರಿಗೆ ಹೋದ ಅವರಿಗೆ ಸಂಜೆವರೆಗೆ ಒಂದು ಸಲ ಮಾತ್ರ ಬ್ರೇಕ್ ನೀಡಲಾಗಿದೆ. ರಾಹುಲ್ ಗಾಂಧಿ ವಿಚಾರಣೆ ಶುರುವಾದಾಗಿನಿಂದಲೂ ಕಾಂಗ್ರೆಸ್ಸಿಗರ ಪ್ರತಿಭಟನೆ ನಡೆಯುತ್ತಿದ್ದು, ದೆಹಲಿ ಪೊಲೀಸರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಪ್ರತಿಭಟನೆ ನಿಯಂತ್ರಣದ ಭಾಗವಾಗಿ ಪೊಲೀಸರು ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದಿದ್ದರು. ಕಾಂಗ್ರೆಸ್ ನಾಯಕರನ್ನು ಪೊಲೀಸರು ತಳ್ಳಿದ್ದ, ನೂಕಿದ್ದ ಫೋಟೋಗಳು ವೈರಲ್ ಆಗಿದ್ದವು. ಇದೇ ವಿಚಾರವನ್ನು ಕಾಂಗ್ರೆಸ್ ನಾಯಕರು ರಾಷ್ಟ್ರಪತಿಯವರ ಎದುರೂ ಇಟ್ಟಿದ್ದಾರೆ. ನಮ್ಮ ಮೇಲೆ ದೆಹಲಿ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ದೂರು ಕೊಟ್ಟಿದ್ದಾರೆ.
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಕೇಸ್; ಇ ಡಿ ಮುಷ್ಟಿಯಲ್ಲಿ ರಾಹುಲ್ ಗಾಂಧಿ, ಇಂದೂ ನಡೆಯಲಿದೆ ವಿಚಾರಣೆ