ನವ ದೆಹಲಿ: ನ್ಯಾಷನಲ್ ಹೆರಾಲ್ಡ್ ಕೇಸ್ ಸಂಬಂಧ ವಿಚಾರಣೆ ಎದುರಿಸಲು ಇಂದು ( ಜೂ.13) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಇ.ಡಿ ಕಚೇರಿಗೆ ತೆರಳಿದರು. ಅವರು ಹೋದ ರೀತಿ ಮಾತ್ರ ಯಾವುದೇ ವಿಚಾರಣೆಗೆ ಹೋದಂತೆ ಇರಲಿಲ್ಲ. ಬದಲಿಗೆ ಚುನಾವಣಾ ಪ್ರಚಾರದ ಹೊತ್ತಲ್ಲಿ ಮೆರವಣಿಗೆ ಹೋಗುವಂತಿತ್ತು. ರಾಹುಲ್ ಗಾಂಧಿ ಇ.ಡಿ ಕಚೇರಿಗೆ ಕಾಲ್ನಡಿಗೆಯಲ್ಲೇ ತೆರಳಿದ್ದಾರೆ. ಕೈ ಮುಗಿಯುತ್ತ ಅವರು ಮುಂದೆ ಮುಂದೆ ಸಾಗುತ್ತಿದ್ದರೆ, ಹಿಂದಿನಿಂದ ಮತ್ತು ಅಕ್ಕಪಕ್ಕದಲ್ಲೆಲ್ಲ ಕಾಂಗ್ರೆಸ್ ಕಾರ್ಯಕರ್ತರು ದಂಡುದಂಡಾಗಿ ಸಾಗಿದರು. ವಿಪರೀತ ನೂಕುನುಗ್ಗಲು ನಿಯಂತ್ರಿಸಲು ಪೊಲೀಸರು ಪ್ರಯತ್ನಿಸಿದರು. ರಾಹುಲ್ ಗಾಂಧಿ ಇ.ಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಪ್ರಮುಖರು ಇಂದು ಸತ್ಯಾಗ್ರಹ ಮೆರವಣಿಗೆ ನಡೆಸುತ್ತಿದ್ದಾರೆ. ದೆಹಲಿ ಪೊಲೀಸರ ಅನುಮತಿ ನೀಡದೆ ಇದ್ದರೂ ಪ್ರತಿಭಟನೆ ಮುಂದುವರಿಸಿದ್ದಾರೆ. ಅದರ ಒಂದು ಭಾಗವಾಗಿಯೇ ಈ ಕಾಲ್ನಡಿಗೆ ನಡೆದಿದೆ. ಈ ವೇಳೆ ರಾಹುಲ್ ಗಾಂಧಿ ಸೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಇದ್ದರು.
ಇ.ಡಿ ಕಚೇರಿಯಲ್ಲಿ ರಾಹುಲ್ ಗಾಂಧಿ ವಿಚಾರಣೆ ನಡೆಯುತ್ತಿದ್ದರೆ, ಇತ್ತ ಎಐಸಿಸಿ ಪ್ರಧಾನ ಕಚೇರಿಯ ಬಳಿ ಕಾಂಗ್ರೆಸ್ ಪ್ರಮುಖರು, ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಸೋದರನೊಂದಿಗೆ ಇ.ಡಿ ಕಚೇರಿಗೆ ಹೋಗಿ, ಅಲ್ಲಿಂದ ವಾಪಸ್ ಕಾಂಗ್ರೆಸ್ ಕಚೇರಿಗೆ ಬಂದಿದ್ದಾರೆ. ಹಾಗೇ, ರಾಹುಲ್ ಗಾಂಧಿಗೆ ಬೆಂಬಲ ನೀಡಿ ಸತ್ಯಾಗ್ರಹ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಪ್ರಮುಖರಾದ ರಜಿನಿ ಪಾಟೀಲ್, ಅಖಿಲೇಶ್ ಪ್ರಸಾದ್ ಸಿಂಗ್, ಎಲ್. ಹನುಮಂತಯ್ಯ ಮತ್ತಿತರರನ್ನು ಪೊಲೀಸರು ಮಂದಿರ್ ಮಾರ್ಗದ ಬಳಿ ವಶಕ್ಕೆ ಪಡೆದಿದ್ದಾರೆ. ಇನ್ನು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ, ಹಿರಿಯ ನಾಯಕ ಹರೀಶ್ ರಾವತ್ ಕೂಡ ಈಗಾಗಲೇ ಪೊಲೀಸ್ ವಶದಲ್ಲಿದ್ದಾರೆ.
ಇದನ್ನೂ ಓದಿ: ಇಂದು ರಾಹುಲ್ ಗಾಂಧಿ ಇಡಿ ವಿಚಾರಣೆ: ಕಾಲ್ನಡಿಗೆಯಲ್ಲಿ ಹೊರಟ ಕಾಂಗ್ರೆಸಿಗರು ಪೊಲೀಸ್ ವಶಕ್ಕೆ