ಹೊಸದಿಲ್ಲಿ: “ಪುತ್ರ ಶೋಕಂ ನಿರಂತರಂ” ಎಂಬ ಮಾತು ಎಷ್ಟು ಸತ್ಯವೋ, ತಂದೆಯ ಅಗಲಿಕೆಯ ನೋವೂ ಮಕ್ಕಳಿಗೆ ಜೀವನಪೂರ್ತಿ ಕಾಡುತ್ತದೆ. ಅದರಲ್ಲೂ, ಅಗಲಿದ ತಂದೆಯ ಜನ್ಮದಿನ ಬಂದರೆ ನೆನಪುಗಳು ಒತ್ತರಿಸಿ ಬರುತ್ತವೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಅವರ ೭೮ನೇ ಜನ್ಮದಿನದ ದಿನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೂ (Rahul Gandhi) ತಂದೆಯ ನೆನಪಿನ ಮಡುವಿನಲ್ಲಿ ಮಿಂದೆದ್ದಿದ್ದಾರೆ. “ಅಪ್ಪಾ, ನೀವು ಪ್ರತಿ ಕ್ಷಣವೂ ನನ್ನ ಹೃದಯದಲ್ಲಿದ್ದೀರಿ” ಎಂದು ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.
“ಅಪ್ಪಾ, ಎಂದೆಂದಿಗೂ ನೀವು ನನ್ನ ಹೃದಯದಲ್ಲಿ ಇರುತ್ತೀರಿ. ನೀವು ಈ ದೇಶಕ್ಕಾಗಿ ಕಂಡ ಕನಸನ್ನು ನಾನು ನನಸು ಮಾಡುತ್ತೇನೆ. ನಿಮ್ಮ ಕನಸು ನನಸು ಮಾಡಲು ನಾನು ಯಾವಾಗಲೂ ಯತ್ನಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ. ಹಾಗೆಯೇ, ತಮ್ಮ ತಂದೆಯ ಜತೆಗೆ ಕಳೆದ ಮಧುರ ಕ್ಷಣಗಳ ವಿಡಿಯೊವನ್ನೂ ಹಂಚಿಕೊಂಡಿದ್ದಾರೆ.
ರಾಜೀವ್ ಗಾಂಧಿ ಅವರ ೭೮ನೇ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಸಮಾಧಿಸ್ಥಳ ವೀರಭೂಮಿಗೆ ತೆರಳಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರು ಗೌರವ ನಮನ ಸಲ್ಲಿಸಿದರು. ಈ ವೇಳೆ ಪ್ರಿಯಾಂಕಾ ಪತಿ ರಾಬರ್ಟ್ ವಾದ್ರಾ, ಕಾಂಗ್ರೆಸ್ ನಾಯಕರಾದ ಕೆ.ಸಿ.ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ ಇದ್ದರು.
ಇದನ್ನೂ ಓದಿ | Anti terrorism day: ಭಯೋತ್ಪಾದನೆ ವಿರುದ್ಧ ನಿತ್ಯ ಸಮರ, ರಾಜೀವ್ ಹತ್ಯೆ ಸ್ಮರಣೆಯಲ್ಲಿ ವಿಶೇಷ ದಿನ