Site icon Vistara News

ಕಾಂಗ್ರೆಸ್ ಕಾರ್ಯಕರ್ತನಿಗೆ ನಾಯಿ ಬಿಸ್ಕೆಟ್! ರಾಹುಲ್ ಗಾಂಧಿ ಕೊಟ್ಟ ಸ್ಪಷ್ಟೀಕರಣ ಹೀಗಿದೆ

Rahul Gandhi

Rahul Gandhi responds to viral dog biscuit video, questions BJP's obsession with the dog

ದಿಸ್ಪುರ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಪ್ರತಿಯೊಂದು ನಡೆಯನ್ನು ಗಮನಿಸಿ, ಅವರ ವಿಡಿಯೊಗಳ ಮೇಲೆ ನಿಗಾ ಇರಿಸಿ, ಟ್ರೋಲ್‌ ಮಾಡುವುದು ಸಾಮಾನ್ಯವಾಗಿದೆ. ಟ್ರೋಲ್ ಮಾಡುವುದರಿಂದ, ಕುಟುಕುವುದರಿಂದ ಬಿಜೆಪಿ ನಾಯಕರೂ ಹೊರತಾಗಿಲ್ಲ. ರಾಹುಲ್‌ ಗಾಂಧಿ (Rahul Gandhi) ಅವರು ಅಸ್ಸಾಂನಲ್ಲಿ ಭಾರತ್‌ ಜೋಡೋ ನ್ಯಾಯ ಯಾತ್ರೆ (Bharat Jodo Nyay Yatra) ಕೈಗೊಳ್ಳುವಾಗ ಕಾಂಗ್ರೆಸ್‌ ಕಾರ್ಯಕರ್ತರಿಗೆ ನಾಯಿ ಬಿಸ್ಕೆಟ್‌ (Dog Biscuit) ನೀಡಿದ ವಿಡಿಯೊ ವೈರಲ್‌ ಆಗುತ್ತಲೇ ಬಿಜೆಪಿ ನಾಯಕರು ರಾಹುಲ್‌ ಗಾಂಧಿ ಅವರಿಗೆ ಟಾಂಗ್‌ ಕೊಟ್ಟಿದ್ದಾರೆ. ಇದಕ್ಕೆ ರಾಹುಲ್‌ ಗಾಂಧಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

“ಅಸ್ಸಾಂನಲ್ಲಿ ನಾನು ಭಾರತ್‌ ಜೋಡೋ ನ್ಯಾಯ ಯಾತ್ರೆ ಕೈಗೊಳ್ಳುವಾಗ ವ್ಯಕ್ತಿಯೊಬ್ಬರು ನಾಯಿ ಹಿಡಿದುಕೊಂಡು ನಿಂತಿದ್ದರು. ನಾನು ಆಗ ನಾಯಿ ಮಾಲೀಕ ಹಾಗೂ ನಾಯಿಯನ್ನು ಕರೆದೆ. ನನ್ನ ಬಳಿ ಬಂದಾಗ ನಾಯಿಯು ಆತಂಕದಲ್ಲಿ ನಡುಗುತ್ತಿತ್ತು. ನಾನು ನಾಯಿಗೆ ಬಿಸ್ಕೆಟ್‌ ತಿನ್ನಿಸಲು ಯತ್ನಿಸಿದೆ. ಆದರೆ, ನಾಯಿಯು ಬಿಸ್ಕೆಟ್‌ ತಿನ್ನಲಿಲ್ಲ. ನಂತರ ಬಿಸ್ಕೆಟ್‌ಗಳನ್ನು ಅದರ ಮಾಲೀಕನಿಗೆ ನೀಡಿದೆ. ಮಾಲೀಕ ತಿನ್ನಿಸಿದಾಗ ನಾಯಿಯು ಬಿಸ್ಕೆಟ್‌ ತಿಂದಿತು. ಇದರಲ್ಲಿ ತಪ್ಪೇನಿದೆ? ಕಾಂಗ್ರೆಸ್‌ ಕಾರ್ಯಕರ್ತ ಎಂಬ ಪ್ರಶ್ನೆ ಎಲ್ಲಿಂದ ಬಂತು? ನಾಯಿಗಳು ಎಂದರೆ ಈ ಬಿಜೆಪಿಯವರಿಗೆ ಏಕಿಷ್ಟು ಸಿಟ್ಟೋ ಗೊತ್ತಿಲ್ಲ” ಎಂದು ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದ್ದಾರೆ.

ನಾಯಿಗಾಗಿ ಬಿಸ್ಕೆಟ್‌ ಇಟ್ಟಿರುವ ತಟ್ಟೆಯಿಂದ ವ್ಯಕ್ತಿಯೊಬ್ಬರಿಗೆ ರಾಹುಲ್‌ ಗಾಂಧಿ ಬಿಸ್ಕೆಟ್‌ ನೀಡಿದ ವಿಡಿಯೊವನ್ನು ಬಿಜೆಪಿ ನಾಯಕರು ಶೇರ್‌ ಮಾಡಿಕೊಂಡು ಟೀಕಿಸಿದ್ದರು. ಬಿಜೆಪಿಯ ನಾಯಕಿ ಪಲ್ಲವಿ ಸಿಟಿ ಅವರು ವಿಡಿಯೊ ಶೇರ್‌ ಮಾಡಿ, ರಾಹುಲ್‌ ಅವರನ್ನು “ನಾಚಿಕೆಯಿಲ್ಲದ ವ್ಯಕ್ತಿ” ಎಂದಿದ್ದರು. ಅಲ್ಲದೆ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ರಾಹುಲ್‌ ಗಾಂಧಿ ಅವರು ಬಿಸ್ಕೆಟ್‌ ನೀಡಲು ಮುಂದಾಗಿ, ಅವರಿಗೆ ಅವಮಾನ ಮಾಡಿದರು” ಎಂದು ಆರೋಪಿಸಿದ್ದರು.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಹಿಮಂತ ಬಿಸ್ವಾ ಶರ್ಮಾ, “ಪಲ್ಲವಿ ಜೀ, ರಾಹುಲ್ ಗಾಂಧಿ ಮಾತ್ರವಲ್ಲ ಅವರ ಇಡೀ ಕುಟುಂಬ ಕೂಡ ಆ ಬಿಸ್ಕೆಟ್ ಅನ್ನು ನನಗೆ ತಿನ್ನಿಸಲು ಸಾಧ್ಯವಾಗಲಿಲ್ಲ. ನಾನು ಹೆಮ್ಮೆಯ ಅಸ್ಸಾಮಿ ಮತ್ತು ಭಾರತೀಯ. ನಾನು ಅದನ್ನು ತಿನ್ನಲು ನಿರಾಕರಿಸಿದೆ ಮತ್ತು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದೆ” ಎಂದಿದ್ದಾರೆ.

ಇದನ್ನೂ ಓದಿ: Congress Protest: ಡ್ರಾಮಾ ಇನ್‌ ದಿಲ್ಲಿ; ರಾಜ್ಯ ಸರ್ಕಾರದ ಪ್ರತಿಭಟನೆಗೆ ಬಿಜೆಪಿ ಟೀಕೆ

ಅಧಿಕೃತ ಭಾರತ್ ಜೋಡೋ ಯಾತ್ರಾ ಹ್ಯಾಂಡಲ್, ರಾಹುಲ್‌ ಗಾಂಧಿ ನಾಯಿಮರಿಯನ್ನು ಮುದ್ದಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದೆ. ಆದರೆ ಆ ಕ್ಲಿಪ್‌ನಲ್ಲಿ ಕಾರ್ಯಕರ್ತನಿಗೆ ಬಿಸ್ಕೆಟ್ ನೀಡಿದ್ದು ಇಲ್ಲ. ಆ ನಾಯಿಮರಿಯು ರಾಹುಲ್‌ ಗಾಂಧಿ ಮಾತನಾಡುತ್ತಿದ್ದ ಅದೇ ಬೆಂಬಲಿಗನಿಗೆ ಸೇರಿದ್ದು ಎಂದು ಕೆಲವು ಹೇಳಿದ್ದಾರೆ. ಕಾಂಗ್ರೆಸ್ ನಾಯಕ ತನ್ನ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version